‘ಆರ್ಥಿಕ ಸಾಕ್ಷರತೆಯನ್ನು ಹೊಂದುವ ಮೂಲಕ ಮಹಿಳೆಯರು ಸಬಲೀಕರಣವಾಗಬೇಕು’

ಸ್ವ ಪ್ರೇರಣೆ, ಸಮಯ ನಿರ್ವಹಣೆಯನ್ನು ಅಳವಡಿಸಿಕೊಂಡು, ಸ್ವಯಂ ಉದ್ಯಮಶೀಲ ಮಹಿಳೆಯಾಗುವುದರೊಂದಿಗೆ, ಸಾಮಾಜಿಕ, ಆರ್ಥಿಕವಾಗಿ ಸದೃಢರಾಗುವ ಮೂಲಕ ಮಹಿಳೆಯರು ಸಬಲೀಕರಣವಾಗಬೇಕೆಂದು ಕೆನರಾ ಬ್ಯಾಂಕ್‌ನ, ಅರಶಿನಕುಂಟೆ ಶಾಖೆಯ ವ್ಯವಸ್ಥಾಪಕರಾದ ಕಾವ್ಯ ಅವರು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ನೆಲಮಂಗಲ ತಾಲ್ಲೂಕಿನ ಅರಶಿನಕುಂಟೆಯಲ್ಲಿರುವ ರುಡ್‌ಸೆಟ್‌ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಜವಾಬ್ದಾರಿಗಳನ್ನು ಅರಿತು, ಸರಿಯಾದ ಮಾರ್ಗದಲ್ಲಿ ಮಹಿಳೆಯರು ಸ್ವಾಭಿಮಾನದ ಜೀವನವನ್ನು ಕಟ್ಟಿಕೊಳ್ಳಬೇಕೆಂದು ತಿಳಿಸಿದರಲ್ಲದೆ, ಸರ್ಕಾರ ಹಾಗೂ ಬ್ಯಾಂಕಿನಲ್ಲಿ ಮಹಿಳೆಯರಿಗೆಂದೇ ಇರುವ ಯೋಜನೆಗಳ ಸೌಲಭ್ಯ, ಸಹಾಯಧನದ ಸೌಲಭ್ಯಗಳನ್ನು ಪಡೆಯಬೇಕೆಂದು ಹೇಳಿದರು.

ರುಡ್‌ಸೆಟ್‌ ಸಂಸ್ಥೆಯ ನಿರ್ದೇಶಕರಾದ ರವಿಕುಮಾರ ಅವರು ಮಾತನಾಡಿ, ಹೆಣ್ಣು ಕೇವಲ ಸಂತಾನಾಭಿವೃದ್ಧಿಗೆ ಮಾತ್ರವಲ್ಲದೇ, ಎಲ್ಲ ಕ್ಷೇತ್ರಗಳಲ್ಲೂ ಸರಿ ಸಮಾನವಾದ ಪಾಲನ್ನು ಪಡೆದಿದ್ದಾಳೆ, ತನ್ನದೇ ಆದ ಛಾಪನ್ನು ಮೂಡಿಸಿದ್ದಾಳೆ ಎಂದರು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಉಕ್ತಿಯಂತೆ ಆಕೆಯಿಂದು ಎಲ್ಲ ಕ್ಷೇತ್ರದಲ್ಲೂ ತನ್ನನ್ನು ಗುರುತಿಸಿಕೊಂಡಿದ್ದಾಳೆ. ಅಂತೆಯೇ ಮಹಿಳಾ ಶಿಬಿರಾರ್ಥಿಗಳಾದ ಬದುಕಿನ ಅವಶ್ಯಕತೆಗಳ ಪೂರೈಕೆಗಾಗಿ ಕೌಶಲ್ಯಗಳನ್ನು ಹೊಂದಿ, ದುಡಿಮೆ ಆರಂಭಿಸಿ ಎಂದು ಸಲಹೆ ನೀಡಿದರಲ್ಲದೆ, ತಾವುಗಳು ಸಾಧನೆ ಮಾಡಲು ಅಗತ್ಯ ಪ್ರೇರಣೆ ಹೊಂದಿ ಸಾಧಿಸಬೇಕೆಂದು ಎಂದು ಹೇಳಿದರು.

ರುಡ್‌ಸೆಟ್‌ ಸಂಸ್ಥೆಯಲ್ಲಿ ತರಬೇತಿ ಪಡೆದು ಯಶಸ್ವಿ ಮಹಿಳಾ ಉದ್ಯಮಿಗಳಾಗಿರುವವರ ಪೈಕಿ ಸಾಂಕೇತಿಕವಾಗಿ ಭವ್ಯ, ಗಾಯತ್ರಿ ಹಾಗೂ ಶೃತಿ ಎಂಬ ಮಹಿಳಾ ಉದ್ಯಮಿಗಳು ಭಾಗವಹಿಸಿ, ತಮ್ಮ ಉದ್ಯಮದ ದಾರಿ ಬೆಳೆದು ಬಂದ ಹಾದಿಯ ಕುರಿತು ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು.

ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ‌ ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರುಡ್‌ಸೆಟ್‌ ಸಂಸ್ಥೆಯ ಉಪನ್ಯಾಸಕರಾದ ರವೀಂದ್ರ ಹಾಗೂ ವಿದ್ಯಾ ಹೊಸಮನಿ,‌ ಕಚೇರಿ ಸಹಾಯಕರಾದ ಅರುಣ್‌ಕುಮಾರ್ ಹಾಗೂ ಸಂತೋಷ್ ಸೇರಿದಂತೆ ಸಹಸಿಬ್ಬಂದಿ ಹಾಗೂ ಬ್ಯೂಟಿಪಾರ್ಲರ್ ತರಬೇತಿಯ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶಿಬಿರಾರ್ಥಿಗಳಿಂದ ಜಾಥಾ ಕಾರ್ಯಕ್ರಮ ಹಾಗೂ ಮಾನವ ಸರಪಳಿ ನಿರ್ಮಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

Leave a Reply

Your email address will not be published. Required fields are marked *