ಅಳತೆ ಮೀರಿದ ಸಾಲದಿಂದ ಆರ್ಥಿಕ ದುಃಸ್ಥಿತಿ ಉಂಟಾಗುವುದಲ್ಲದೆ, ಮಾನಸಿಕ ಆರೋಗ್ಯವು ಹದಗೆಡುತ್ತದೆ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ವಿದ್ಯಾರ್ಥಿ ದೆಸೆಯಿಂದಲೇ ಉಳಿತಾಯದ ಕುರಿತು ಅರಿವು ಸೇರಿದಂತೆ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಬೇಕೆಂದು ಬ್ಯಾಂಕಿನ ಮುಖ್ಯ ಪ್ರಬಂಧಕರಾದ ಮಧುಕರ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಭಾರತೀಯ ರಿಸರ್ವ್ ಬ್ಯಾಂಕಿನ ಆದೇಶದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಘ್ರಣೀಯ ಬ್ಯಾಂಕ್ ಹಾಗೂ ರುಡ್‌ಸೆಟ್ ಸಂಸ್ಥೆಯ ಸಹಯೋಗದೊಂದಿಗೆ ನೆಲಮಂಗಲ ತಾಲ್ಲೂಕಿನ ರುಡ್‌ಸೆಟ್ ಸಂಸ್ಥೆಯಲ್ಲಿ ಇಂದು ಆರ್ಥಿಕ ಸಾಕ್ಷರತಾ ಸಪ್ತಾಹದ ಅಂಗವಾಗಿ ಆರ್ಥಿಕ ಸಾಕ್ಷರತಾ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಭಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತೀಯ ರಿಸರ್ವ್ ಬ್ಯಾಂಕಿನ ಆದೇಶದಂತೆ ಆರ್ಥಿಕ ಸಾಕ್ಷರತಾ ಸಪ್ತಾಹವನ್ನು ಫೆಬ್ರವರಿ 13 ರಿಂದ 17 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಲ್ಲಿ ಆರ್ಥಿಕ ಶಿಸ್ತು ಮೂಡಬೇಕಾದರೆ ಎಲ್ಲರೂ ಆರ್ಥಿಕ ಸಾಕ್ಷರತೆ ಕುರಿತು ಅರಿವು ಹೊಂದುವುದು ಅತ್ಯಗತ್ಯ ಎಂದು ತಿಳಿಸಿದರು.
ಡಿಜಿಟಲ್ ಬ್ಯಾಂಕಿಂಗ್ ಉಪಯುಕ್ತವಾಗಿದ್ದು, ಸುರಕ್ಷಿತ ಮಾರ್ಗಗಳ ಮೂಲಕ ಬಳಕೆ ಮಾಡಬೇಕು ಎಂದರಲ್ಲದೆ, ಡಿಜಿಟಲ್ ಬ್ಯಾಂಕಿಂಗ್ ಅಳವಡಿಸಿಕೊಳ್ಳುವುದರಿಂದ ನೋಟುಗಳ ಮುದ್ರಣ, ನಿರ್ವಹಣೆಗೆ ತಗುಲುವ ಖರ್ಚುಗಳನ್ನು ತಗ್ಗಿಸಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಜೆ.ಆನಂದ್, ಸೊಣ್ಣಹಳ್ಳಿಪುರ ಆರ್‌ಸೆಟಿಯ ನಿರ್ದೇಶಕರಾದ ಗಿರಿಯಪ್ಪ, ಆರ್ಥಿಕ ಸಾಕ್ಷರತಾ ಕೇಂದ್ರದ ನೆಲಮಂಗಲ ತಾಲ್ಲೂಕಿನ ಸಲಹೆಗಾರರಾದ ಮಹಾಂತೇಶಯ್ಯ ಹಾಗೂ ದೇವನಹಳ್ಳಿ ತಾಲ್ಲೂಕಿನ ಸಲಹೆಗಾರರಾದ ಮಂಜುನಾಥ್, ಜ್ಞಾನಮಂದಿರ ಕಾಲೇಜಿನ ಪ್ರಾಂಶುಪಾಲರಾದ ಶ್ರೀಕಾಂತ್ ಸೇರಿದಂತೆ ಬ್ಯಾಂಕಿನ ಅಧಿಕಾರಿಗಳು, ರುಡ್‌ಸೆಟ್ ಸಂಸ್ಥೆಯ ಸಿಬ್ಬಂದಿಗಳು, ಸ್ವಸಹಾಯ ಸಂಘದ ಮಹಿಳೆಯರು, ಜ್ಞಾನ ಮಂದಿರ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಆರ್ಥಿಕ ಸಾಕ್ಷರತೆ ಕುರಿತು ಆಯೋಜಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.