ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಾಲೂಕಿನ ಜಿಂಕೆ ಬಚ್ಚಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿರುವ ಆರೋಗ್ಯ ಮತ್ತು ಕ್ಷೇಮ ಉಪಕೇಂದ್ರವನ್ನು ಸೋಮವಾರ ಲೋಕಾರ್ಪಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಬಮೂಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ನಗರಕ್ಕೆ ಕೂಗಳತೆಯ ದೂರದಲ್ಲಿರುವ ಚಿಕ್ಕತುಮಕೂರು, ದೊಡ್ಡ ತುಮಕೂರು, ಜಿಂಕೆ ಬಚ್ಚಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಆರೋಗ್ಯ ಕೇಂದ್ರದ ಅಗತ್ಯತೆ ತೀವ್ರವಾಗಿತ್ತು. ಸಣ್ಣಪುಟ್ಟ ಕಾಯಿಲೆಗಳಿಗೂ ಗ್ರಾಮಸ್ಥರು ನಗರದ ಸರಕಾರಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ತೆರಳಬೇಕಿತ್ತು. ಇಲ್ಲಿ ಆರೋಗ್ಯ ಕೇಂದ್ರ ನಿರ್ಮಾಣ ವಾಗಿರುವುದರಿಂದ ರೋಗಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್.ಎ ಆನಂದ್ ಕುಮಾರ್ ಮಾತನಾಡಿ ಆರೋಗ್ಯ ಕೇಂದ್ರಕ್ಕೆ ಸೂಕ್ತ ವೈದ್ಯರನ್ನು ಅಗತ್ಯ ಸಿಬ್ಬಂದಿಯನ್ನು ನೇಮಿಸಿ ವೈದ್ಯಕೀಯ ಪರಿಕರಗಳು ಒದಗಿಸಬೇಕು ಎಂದರು.ಕ
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಜಿಲ್ಲಾ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಟಿ ಶ್ರೀನಿವಾಸ್, ಮುಖಂಡರಾದ ಬಿಎಚ್ ಕೆಂಪಣ್ಣ, ಲಕ್ಷ್ಮೀನಾರಾಯಣ, ಸಂದೇಶ್, ಭೈರೇಗೌಡ ಮತ್ತಿತರರು ಇದ್ದರು.