ಕೋಲಾರ: ಜಿಲ್ಲೆಯಲ್ಲಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಗಳ ಲಭ್ಯತೆಯೊಂದಿಗೆ ದಿನದ 24 ಗಂಟೆಯೂ ಚಿಕಿತ್ಸೆ ನೀಡುವ ವೈದ್ಯರನ್ನೊಳಗೊಂಡ ಚಿಕಿತ್ಸಾ ಸೌಲಭ್ಯವನ್ನು ನೀಡುವಂತೆ ಬಜೆಟ್ ನಲ್ಲಿ ಹಣಕಾಸು ನಿಗದಿ ಪಡಿಸಬೇಕು ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ರಾಜ್ಯ ಬಜೆಟ್ ಕುರಿತಂತೆ ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ ಅವರು, ನಗರದಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯರಿಗೆ ವಿಶೇಷವಾದ ಕ್ಯಾನ್ಸರ್ ನಂತಹ ಆಂತರಿಕ ಚಿಕಿತ್ಸೆಗಳನ್ನು ಒಂದೇ ಸೂರಿನಡಿಯಲ್ಲಿ ಚಿಕಿತ್ಸೆ ನೀಡುವಂತ ಘಟಕವನ್ನು ಸ್ಥಾಪಿಸಿ ಮಹಿಳೆಯರ ಆರೋಗ್ಯ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಿಲ್ಲಿ ಹಣಕಾಸು ನಿಗದಿಪಡಿಸಬೇಕು
ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ನಿರ್ಲಕ್ಷ್ಯಕ್ಕೊಳಗಾಗಿ ಹಾಳು ಕೊಂಪೆಗಳಾಗಿವೆ. ಇವುಗಳನ್ನು ತ್ವರಿತವಾಗಿ ಶುಚಿಗೊಳಿಸಿ, ಅಭಿವೃದ್ಧಿ ಪಡಿಸಿ, ಮೂಲಭೂತ ಸೌಕರ್ಯಗಳೊಂದಿಗೆ ಗೈಡ್ ಗಳನ್ನು ನೇಮಕ ಮಾಡಿ ಕೋಲಾರದ ಇತಿಹಾಸ ಸಾರುವ ಮತ್ತು ಧಾರ್ಮಿಕ ಕೇಂದ್ರಗಳನ್ನು ಉಳಿಸಿ ಅಭಿವೃದ್ಧಿಪಡಿಸಲು ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು
ಕೋಲಾರ ನಗರ ಪ್ರದೇಶವನ್ನು ಸ್ಮಾರ್ಟ್ ಸಿಟಿ ಅಡಿಯಲ್ಲಿ ವಿಶೇಷ ಅನುಧಾನ ನಿಗದಿಪಡಿಸಿ ನಗರಾಭಿವೃದ್ಧಿ ಮತ್ತು ಶೌಚಾಲಯಗಳು ಹಾಗೂ ನೈರ್ಮಲ್ಯ ಕಾಪಾಡಬೇಕು ಕೃಷಿ ಉತ್ಪನ್ನ ಮಾರುಕಟ್ಟೆ ಜಾಗ, ವರ್ತುಲ ರಸ್ತೆ ಮತ್ತು ಕೆ.ಸಿ ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಹಲವಾರು ವರ್ಷಗಳಿಂದ ಸರ್ಕಾರದ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿದೆ. ಆದ್ದರಿಂದ ಈ ಕೂಡಲೆ ತ್ವರಿತವಾಗಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಬಜೆಟ್ ಮಂಡನೆಯಾಗಬೇಕು ಎಂದು ಸಿಎಂಆರ್ ಶ್ರೀನಾಥ್ ಒತ್ತಾಯಿಸಿದರು