ಆರೂಡಿ ಅರಣ್ಯ ಪ್ರದೇಶದಲ್ಲಿ ವೈವಿಧ್ಯತೆಯ ಕಾಡು ಬೀಜಗಳ ನೇರ ಬೀಜ ಬಿತ್ತನೆ ಕಾರ್ಯ

ದೊಡ್ಡಬಳ್ಳಾಪುರ ತಾಲೂಕಿನ ಆರೂಡಿ ಅರಣ್ಯ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಿರುವ ಅರಣ್ಯದಲ್ಲಿ ವೈವಿಧ್ಯತೆಯ ಕಾಡು ಬೀಜಗಳ ನೇರ ಬೀಜ ಬಿತ್ತನೆ ಕಾರ್ಯಕ್ರಮವನ್ನು ಯುವ ಸಂಚಲನ (ರಿ), ವಲಯ ಅರಣ್ಯ ಇಲಾಖೆ ದೊಡ್ಡಬಳ್ಳಾಪುರ ಹಾಗೂ ಸೇಂಟ್ ಕ್ಲಾರೆಟ್ ಕಾಲೇಜು ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಎಲ್ಲಾ ಜನರು ಅರಿತುಕೊಂಡರೆ ಪರಿಸರದ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ. ಅದರಲ್ಲೂ, ಇಂದಿನ ಯುವಜನತೆಗೆ ಪರಿಸರದ ಕುರಿತು ಅರಿವು ಮೂಡಿಸುವುದು ಬಹುಮುಖ್ಯ ಕೆಲಸವಾಗಿದೆ. ಇಂತಹ ಪರಿಸರದ ಕಾರ್ಯಗಳು ಯಶಸ್ವಿಯಾಗಬೇಕಾದರೆ ಯುವ ಸಂಚಲನದಂತಹ ಕೊಂಡಿಗಳು ಅರಣ್ಯ ಇಲಾಖೆಗೆ ಬಹುಮುಖ್ಯವಾಗಿ ಬೇಕಾಗುತ್ತದೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣೇಗೌಡ ತಿಳಿಸಿದರು.

ಯುವ ಸಂಚಲನದ ಅಧ್ಯಕ್ಷ ಚಿದಾನಂದ ಮೂರ್ತಿ ಮಾತನಾಡಿ, ಆರೂಡಿ ಅರಣ್ಯ ಪ್ರದೇಶದ ವ್ಯಾಪ್ತಿಯ ಸುಮಾರು 25 ಹೆಕ್ಟೇರ್ ಪ್ರದೇಶದಲ್ಲಿ 15 ಕ್ಕೂ ಹೆಚ್ಚು ವಿವಿಧ ಜಾತಿಯ (ಅಂಕೋಲೆ, ತಪ್ಸಿ, ಹಿಪ್ಪೆ, ಮಡ್ಡಿಮರ, ಸೀತಾಪಲ, ತಾರೆ, ಕಿರು ಬಿದಿರು, ಕಕ್ಕೆ, ಬಿಕ್ಕೆ, ಬಿಲ್ವರ, ಬೂರಗ, ಗೋಣಿ, ಬಸರೆ, ಅಮಟೆ, ಬಿಳಿದಾಳೆ) ಬೀಜಗಳನ್ನು ನೇರ ಬಿತ್ತನೆಯ ಮೂಲಕ ಮಾಡಲಾಯಿತು. ಪರಿಸರಕ್ಕೆ ನಮ್ಮಿಂದಾಗುವ ಮಟ್ಟಿಗೆ ಸೇವೆ ಸಲ್ಲಿಸಲು ಇದೊಂದು ಉತ್ತಮ ಅವಕಾಶ. ಈ ಕಾರ್ಯವನ್ನು ಇಂದಿಗೆ ಮಾತ್ರ ಸೀಮಿತಗೊಳಿಸದೆ ನಮ್ಮ ನಮ್ಮ ವ್ಯಾಪ್ತಿಯಲ್ಲಿ ನಮಗಾಗುವ ಮಟ್ಟಿಗೆ ಪರಿಸರದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಬಹು ಮುಖ್ಯ ಎಂದು ಯುವ ಜನರಿಗೆ ತಿಳಿಸಿದರು.

ಈ ಸಮಯದಲ್ಲಿ ಸೇಂಟ್ ಕ್ಲಾರೆಟ್ ಕಾಲೇಜಿನ ಉಪನ್ಯಾಸಕರಾದ ಶ್ರೀಯುತ ವಿನೀತ್ ಹಾಗೂ ಕಾಲೇಜಿನ ವಿವಿಧ  ವಿಭಾಗದ 50 ಕ್ಕೂ ಹೆಚ್ಚು ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಯುವ ಸಂಚಲನ ತಂಡದ ಸದಸ್ಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!