ಆರತಿ ಹೊತ್ತ ದಲಿತ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಆರೋಪ

ದೊಡ್ಡಬಳ್ಳಾಪುರ : ಭಾರತದಲ್ಲಿ ಇವತ್ತಿಗೂ ಅಸ್ಪೃಶ್ಯತೆ ಆಚರಣೆ ಜೀವಂತವಿದೆ. ಅದಕ್ಕೆ ಸಾಕ್ಷಿ ಅನ್ನುವಂತೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಲೇ ಇವೆ. ಕೊಪ್ಪಳದ ಮರಕುಂಬಿ ದಲಿತರ ದೌರ್ಜನ್ಯ ಪ್ರಕಣಕ್ಕೆ ಸಂಬಂಧಿಸಿದಂತೆ ಕೋರ್ಟ್ 98 ಸವರ್ಣಿಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನ ನೀಡಿದೆ. ಆದರೂ, ಬುದ್ದಿ ಕಲಿಯದ ಸವರ್ಣಿಯರು ದಲಿತರ ಮೇಲೆ ದೌರ್ಜನ್ಯವನ್ನ ನಡೆಸುತ್ತಲೇ ಬಂದಿದ್ದಾರೆ.

ದೊಡ್ಡಬಳ್ಳಾಪುರ ನಗರ ಕೇಂದ್ರದಿಂದ ಕೇವಲ 3 ಕಿ.ಮೀ ಅಂತರದಲ್ಲಿರುವ ಮಲ್ಲಾತಹಳ್ಳಿ ಗ್ರಾಮದಲ್ಲಿ ಇವತ್ತಿಗೂ ಅಸ್ಪೃಶ್ಯತೆ ಆಚರಣೆ ಜೀವಂತವಾಗಿರುವ ಘಟನೆ ಕಂಡುಬಂದಿದೆ. ಇಲ್ಲಿನ ದೇವಸ್ಥಾನಗಳಿಗೆ ದಲಿತರ ಪ್ರವೇಶವಿಲ್ಲ, ಬಾಗಿಲಲ್ಲೇ ನಿಂತು ದೇವರಿಗೆ ಕೈ ಮುಗಿಯ ಬೇಕು, ದಲಿತರ ಪೂಜಾ ಸಾಮಾಗ್ರಿಗಳನ್ನು ಸಹ ದೇವಸ್ಥಾನದ ಒಳಗೆ ತೆಗೆದುಕೊಂಡು ಹೋಗುವುದಿಲ್ಲ, ಕಾಂಪೌಂಡ್ ಹೊರಗಡೆಯ ದೇವರಿಗೆ ಹಣ್ಣುಕಾಯಿ ಕೊಟ್ಟು ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದಾರೆ.

ಬಹಳ ಹಿಂದಿನಿಂದ ಮಲ್ಲಾತಹಳ್ಳಿ ಗ್ರಾಮದಲ್ಲಿ ಸವರ್ಣಿಯರು ಅಸ್ಪೃಶ್ಯತೆಯನ್ನ ಆಚರಿಸಿಕೊಂಡು ಬರುತ್ತಿದ್ದಾರೆ, ಹಳೆ ತಲೆಮಾರಿನ ದಲಿತರು ಇದ್ಯಾವುದನ್ನು ಪ್ರಶ್ನೆ ಮಾಡದೆ ತಮ್ಮ ಮೇಲಿನ ದೌರ್ಜನ್ಯಗಳನ್ನ ಸಹಿಸಿಕೊಂಡಿದ್ದರು. ಆದರೆ ಇವತ್ತಿನ ವಿದ್ಯಾವಂತ ಹುಡುಗರು ದಲಿತರ ಮೇಲೆ ನಡೆಸುತ್ತಿರುವ ಅಸ್ಪೃಶ್ಯತೆ ಆಚರಣೆಯನ್ನ ಪಶ್ನೆ ಮಾಡಲು ಪ್ರಾರಂಭಿಸಿದ್ದಾರೆ, ಇದೇ ಇವತ್ತು ಗ್ರಾಮದಲ್ಲಿ ಜಾತಿ ಸಂಘರ್ಷಕ್ಕೆ ಕಾರಣವಾಗಿದೆ.

ಗ್ರಾಮದಲ್ಲಿ ಚನ್ನಕೇಶವ, ಮದ್ದೂರಮ್ಮ, ಗಂಗಮ್ಮ ಮತ್ತು ಮಾರಮ್ಮ ದೇವಸ್ಥಾನಗಳಿವೆ, ಚನ್ನಕೇಶ ಮತ್ತು ಮದ್ದೂರಮ್ಮ ಸವರ್ಣಿಯರ ಒಡೆತನದಲ್ಲಿದ್ದು, ಗಂಗಮ್ಮ ದೇವಸ್ಥಾನ ದಲಿತರ ಒಡೆತನದಲ್ಲಿದೆ, 40 ವರ್ಷಗಳ ಹಳೆಯ ದೇವಸ್ಥಾನಗಳಾಗಿದ್ದು, ವರ್ಷದ ಹಿಂದೆ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗಿತ್ತು, 15 ದಿನಗಳ ಹಿಂದೆ ಗ್ರಾಮದಲ್ಲಿ ಸಭೆ ಮಾಡಿದ ದಲಿತರು ಮತ್ತು ಸವರ್ಣಿಯರು, ಗಂಗಮ್ಮ, ಮದ್ದೂರಮ್ಮ ಮತ್ತು ಚನ್ನಕೇಶವ ದೇವರಿಗೆ ದೀಪಾವಳಿ ಹಬ್ಬದಂದ್ದು ಆರತಿ ಮಾಡುವ ಬಗ್ಗೆ ಮಾತುಕಥೆ ಮಾಡಿದ್ದಾರೆ.

ಶುಕ್ರವಾರ ಬೆಳಗ್ಗೆ 12 ಗಂಟೆ ಸಮಯದಲ್ಲಿ ದಲಿತ ಮಹಿಳೆಯರು ಆರತಿಗಳನ್ನ ಹೊತ್ತುಕೊಂಡು ಚನ್ನಕೇಶವ,ಮದ್ದೂರಮ್ಮ ಮತ್ತು ಗಂಗಮ್ಮ ದೇವಸ್ಥಾನಗಳ ಬಳಿ ಹೋಗಿದ್ದಾರೆ, ಸ್ಥಳದಲ್ಲೇ ದಲಿತ ಮಹಿಳೆಯರನ್ನ ತಡೆದ ಸರ್ವಣಿಯರು, ಸವರ್ಣಿಯ ಮಹಿಳೆಯರ ಆರತಿ ಹಿಂದೆ ಬರುವಂತೆ ಹೇಳಿದ್ದಾರೆ, ಚನ್ನಕೇಶವ ಮತ್ತು ಮದ್ದೂರಮ್ಮ ದೇವಸ್ಥಾನಗಳ ಬಳಿ ಹೋದಾಗ, ಮೊದಲು ಸವರ್ಣಿಯ ಮಹಿಳೆಯರ ಆರತಿಗಳನ್ನ ಒಳಗೆ ಬಿಡಲಾಗಿದೆ, ದೇವಸ್ಥಾನದ ಒಳಗೆ ಆರತಿಗಳನ್ನ ಬೆಳಗಿ ಪೂಜೆ ಮಾಡಿದ್ದಾರೆ, ದಲಿತ ಮಹಿಳೆಯರು ಸಹ ಆರತಿಗಳನ್ನ ದೇವರಿಗೆ ಬೆಳಗಲು ಮುಂದಾಗಿದ್ದಾರೆ, ಈ ವೇಳೆ ದೇವಸ್ಥಾನದ ಕಾಂಪೌಂಡ್ ನಲ್ಲಿಯೇ ತಡೆದ ಸವರ್ಣಿಯರು ಕೌಂಪೌಂಡ್ ನಿಂದ ಹೊರಗೆ ನಿಂತು ಹೊರಗಿನಿಂದಲೇ ಪೂಜೆ ಮಾಡಿಕೊಂಡು ಹೋಗುವಂತೆ ಹೇಳಿದ್ದಾರೆ, ಪ್ರಶ್ನೆ ಮಾಡುತ್ತಲೇ ಒಳ ಹೋಗಲು ಪ್ರಯತ್ನಿಸಿದ್ದಾಗ ಕಾಂಪೌಂಡ್ ಗೆ ಬೀಗ ಹಾಕಿದ್ದಾರೆ, ಇವತ್ತಿನ ಕಾಲದಲ್ಲೂ ಇಂತಹ ಆಚರಣೆಗಳು ನಡೆಯುತ್ತಿರುವುದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ದಲಿತ ಯುವಕ ಅಶೋಕ್ ತಮ್ಮ ನೋವು ಹಂಚಿಕೊಂಡರು.

ದೇವಸ್ಥಾನ ಪ್ರವೇಶ ನಿರಾಕರಣೆ ವಿಚಾರಕ್ಕೆ ಸಂಬಂಧಿದಂತೆ ಸರ್ವಣಿಯ ಮುಖಂಡರ ಜೊತೆ ಮಾತನಾಡಲು ದಲಿತರು ಹೋದಾಗ, ದಲಿತರ ವಿರುದ್ಧವೇ ಆತ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ, ಈ ವೇಳೆ ದಲಿತ ಯುವಕ ಪ್ರಶಾಂತ್ ಎಂಬುವರನ್ನ ತಳ್ಳಲಾಗಿದ್ದು, ಅವರ ಕೈ ಕಾಲುಗಳಿಗೆ ತರಚಿದ ಗಾಯವಾಗಿದೆ, ದೇವಸ್ಥಾನಕ್ಕೆ ದಲಿತರ ಪ್ರವೇಶ ನಿರಾಕರಣೆಗೆ ಸಂಬಂಧಿಸಿದಂತೆ ದಲಿತರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!