‘ಆಪರೇಷನ್ ಸಿಂಧೂರ್’: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನ ಭೇಟಿ‌ ಮಾಡಿದ‌ ಪ್ರಧಾನಿ ಮೋದಿ: ಸೇನೆ ಕಾರ್ಯಾಚರಣೆ ಬಗ್ಗೆ ಮೋದಿ ಏನಂದ್ರು…? 

ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ಸಂಪುಟ ಸಭೆ ನಡೆಸಿದರು. ನಂತರ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.

ಇಂದು ಬೆಳಗಿನ ಜಾವ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಒಂಭತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್’ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವಿವರಿಸಿದರು.

ಭಾರತೀಯ ಸೇನೆ ಬುಧವಾರ ಬೆಳಗಿನ ಜಾವ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಪಹಲ್ಗಾಮ್​ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ.

ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಸೇನೆ ಅತ್ಯುತ್ತಮ ಕೆಲಸ ಮಾಡಿದೆ. ಇದು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಹೇಳಿದರು.

ಸಂಪುಟ ಸಭೆಯಲ್ಲಿ ಭಾರತದ ಮೂರು ಸೇನೆ ಪಡೆಗಳನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದು, ನಮ್ಮ ಸೇನೆ ಅದ್ಭುತ ಕೆಲಸ ಮಾಡಿದೆ. ಇಡೀ ದೇಶ ಅವರ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದರು. ಆಪರೇಷನ್ ಸಿಂಧೂರ್ ಯಶಸ್ಸಿನ ಬಗ್ಗೆ ಪ್ರಧಾನಿ ಮೋದಿ ತಮ್ಮ ಸಂಪುಟಕ್ಕೆ ತಿಳಿಸಿದಾಗ ಎಲ್ಲಾ ಸದಸ್ಯರು ಮೇಜು ಬಡಿದು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *