ಪ್ರೀತಿಗೆ ಕಣ್ಣಿಲ್ಲ. ಇತಿಮಿತಿ, ಎಲ್ಲೆಗಿಲ್ಲೆ, ಗಡಿಗಳಿಲ್ಲ. ಪ್ರೀತಿ ಎಂಬುದು ಜಾತಿ, ಧರ್ಮ, ಬಣ್ಣ, ಭಾಷೆ, ವಯಸ್ಸು, ಗಡಿ ಹಾಗೂ ಅಂತಸ್ತು ಎಲ್ಲವನ್ನು ಮೀರಿದ್ದು.
ತಾನು ಪ್ರೀತಿಸಿದ ಪ್ರಿಯತಮೆ ಅಥವಾ ಪ್ರಿಯಕರನನ್ನು ಮದುವೆಯಾಗಲು ದೇಶ ಬಿಟ್ಟು ಹೋಗುವವರೂ ಇದ್ದಾರೆ, ವಿದೇಶದಿಂದ ಬಂದವರೂ ಇದ್ದಾರೆ. ಪ್ರೀತಿ ಒಂದು ಮಧುರ ಭಾವನೆ. ಪ್ರೀತಿ ಎಂದರೆ ಎರಡು ಮನಸ್ಸುಗಳ ಮಿಲನ. ಪ್ರೀತಿಸಿದವರನ್ನು ಪಡೆದುಕೊಳ್ಳಲು ಕೆಲವರು ಏನು ಬೇಕಾದರೂ ಮಾಡುತ್ತಾರೆ. ಕೆಲವರು ಹಿರಿಯರ ವಿರೋಧ ಕಟ್ಟಿಕೊಂಡು ಪ್ರೇಮ ವಿವಾಹವನ್ನು ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಎರಡೂ ಮನೆಯವರನ್ನು ಒಪ್ಪಿಸಿ, ಪ್ರೀತಿಯಲ್ಲಿ ಗೆದ್ದು ಮದುವೆಯಾಗಿರುವ ಉದಾಹರಣೆ ಕೂಡ ಇದೆ.
ಇತ್ತೀಚೀನ ತಾಜಾ ಘಟನೆಯೊಂದರಲ್ಲಿ ಅಮೆರಿಕ ಮೂಲದ ಯುವತಿ ಜಾಕ್ವೆಲಿನ್ ಫೊರೆರೊ, ಆನ್‌ಲೈನ್ ಪ್ರೇಮಿಯನ್ನು ಹುಡುಕುತ್ತಾ ಖಂಡಗಳನ್ನು ದಾಟಿ ಭಾರತದ ಆಂಧ್ರಪ್ರದೇಶಕ್ಕೆ ಬಂದಿದ್ದಾಳೆ.
ಇನ್‌ಸ್ಟಾಗ್ರಾಮ್‌ನಲ್ಲಿ ‘ಹಾಯ್’ ಎಂಬ ಶುಭಾಶಯದೊಂದಿಗೆ ಪ್ರಾರಂಭವಾದ ಇಬ್ಬರ ಸ್ನೇಹ, ಇದೀಗ ಮದುವೆಯವರೆಗೂ ಹೋಗಿದೆ. ಪ್ರೀತಿಗಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇದು ಒಂದು ಪರಿಪೂರ್ಣ ಉದಾಹರಣೆಯಾಗಿದೆ.
ಸಾವಿರಾರು ಮೈಲುಗಳಷ್ಟು ಪ್ರಯಾಣಿಸಿದ ನಂತರ, ಫೊರೆರೊ ತನ್ನ ತಾಯಿಯೊಂದಿಗೆ ಆಂಧ್ರ ಪ್ರದೇಶದ ದೂರದ ಹಳ್ಳಿಗೆ ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೊರೆರೊ ಹಂಚಿಕೊಂಡಿದ್ದಾರೆ.
ಚಂದನ್, ಆಂಧ್ರ ಪ್ರದೇಶದ ಹಳ್ಳಿಯ ಯುವಕ. ಆತ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಚಂದನ್‌ನ ಪ್ರೊಫೈಲ್ ನೋಡಿದ ನಂತರ ಫೊರೆರೊ ಆತನನ್ನು ಪ್ರೀತಿಸಲು ಶುರು ಮಾಡಿದಳು.
ಮೊದಲು ಹಾಯ್ ಎಂದು ಮೆಸೇಜ್ ಕಳುಹಿಸಿದ್ದೇ ಆಕೆ. ಹಾಗೆ ಪ್ರಾರಂಭವಾದ ಸಂಭಾಷಣೆ ಇಬ್ಬರನ್ನು ಪ್ರೀತಿಯಲ್ಲಿ ಸಿಲುಕಿತು. ಶೀಘ್ರದಲ್ಲೇ, ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. 14 ತಿಂಗಳ ನಂತರ, ಹೊಸ ಅಧ್ಯಾಯಕ್ಕೆ ಸಿದ್ಧರಾಗುತ್ತಿದ್ದೇವೆ ಎಂದು ಹೇಳಿದ್ದಾರೆ. ಚಂದನ್ ಅವರ ಆಸಕ್ತಿಗಳು ಅವಳನ್ನು ಆಕರ್ಷಿಸಿವೆ ಎಂದು ಫೊರೆರೊ ತಿಳಿಸಿದ್ದಾರೆ.
8 ತಿಂಗಳ ಆನ್‌ಲೈನ್ ಡೇಟಿಂಗ್ ನಂತರ ನಾನು ಚಂದನ್ ಅವರನ್ನು ಮದುವೆಯಾಗಲು ನನ್ನ ತಾಯಿ ಒಪ್ಪಿಕೊಂಡಿದ್ದಾರೆ ಎಂದು ಪೊರೆರೊ ಹೇಳಿದ್ದಾರೆ. ಜೀವನ ಸಂಗಾತಿಯನ್ನು ಹುಡುಕುತ್ತಾ ತನ್ನ ತಾಯಿಯೊಂದಿಗೆ ಭಾರತಕ್ಕೆ ಬಂದಿದ್ದೇನೆ. ಚಂದನ್ ವೀಸಾ ಪಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಇಬ್ಬರೂ ಅಮೆರಿಕದಲ್ಲಿ ಹೊಸ ಜೀವನವನ್ನು ಪ್ರಾರಂಭಿಸುತ್ತೇವೆ ಎಂದು ಫೊರೆರೊ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಆನ್‌ಲೈನ್ ಪ್ರಿಯರಿಗೆ ನೆಟ್ಟಿಗರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇಬ್ಬರಿಗೂ ಸಂತೋಷ ಮತ್ತು ಆರೋಗ್ಯಕರ ಜೀವನ ಸಿಗಲೆಂದು ಹಾರೈಸುತ್ತಿದ್ದಾರೆ.