ಆನ್ಲೈನ್ ನಕಲಿ ಚೈನ್ ಲಿಂಕ್ ಕಂಪನಿಗಳ ವಿರುದ್ದ ಕ್ರಮಕ್ಕೆ ರೈತ ಸಂಘ ಒತ್ತಾಯ

ಕೋಲಾರ: ಗ್ರಾಮೀಣ ಪ್ರದೇಶದ ರೈತ ಕೂಲಿ ಕಾರ್ಮಿಕರು ಹಾಗೂ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿರುವ ಆನ್ ಲೈನ್ ಹಾಗೂ ನಕಲಿ ಚೈನ್ ಲಿಂಕ್ ಬ್ಲೇಡ್ ಕಂಪನಿಗಳಿಗೆ ಕಡಿವಾಣ ಹಾಕಲು ವಿಶೇಷ ಪೊಲೀಸ್ ತಂಡ ರಚನೆ ಮಾಡಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಸಹಕಾರ ಬ್ಯಾಂಕ್ ಗಳಲ್ಲಿ ಸಾಲ ಸಿಗದೆ ಆರ್ಥಿಕ ತೊಂದರೆಯಲ್ಲಿರುವ ಗ್ರಾಮೀಣ ಪ್ರದೇಶದ ರೈತ ಕೂಲಿಕಾರ್ಮಿಕರು ಹಾಗೂ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ತಮ್ಮ ನಯವಾದ ವಂಚನೆ ಮಾತುಗಳಿಂದ ಬಡವರನ್ನು ಮರಳು ಮಾಡಿ ಚೈನ್ ಲಿಂಕ್ ಕಂಪನಿಗಳಿಗೆ ಹಣ ಹೂಡಿಕೆ ಮಾಡಿ ದ್ವಿಗುಣಗೊಳಿಸುವ ಆಸೆ ಹುಟ್ಟಿಸಿ ಕೋಟಿಕೋಟಿ ಹಣ ಲೂಟಿ ಮಾಡಿ ನಾಪತ್ತೆಯಾಗುವ ಬ್ಲೇಡ್ ಕಂಪನಿಗಳಿಂದ ಬಡವರನ್ನು ರಕ್ಷಣೆ ಮಾಡಲು ಕರ ಪತ್ರದ ಮುಖಾಂತರ ಪೊಲೀಸ್ ಇಲಾಖೆ ಜಾಗೃತಿ ಮೂಡಿಸಬೇಕೆಂದು ಆಗ್ರಹಿಸಿದರು.

ಒಂದು ಕಡೆ ಸರ್ಕಾರಿ ಬ್ಯಾಂಕ್ ಗಳಲ್ಲಿ ಸಾಲ ಸಿಗದೆ ಖಾಸಗಿ ಮೈಕ್ರೋ ಫೈನಾನ್ಸ್ ಹಾವಳಿಗೆ ಸಿಲುಕಿ ರಾಜ್ಯಾದ್ಯಂತ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ರಾಜ್ಯಾದ್ಯಂತ ನೂರಾರು ಜನ ಆತ್ಮಹತ್ಯೆಗಳು ನಡೆಯುತ್ತಿರುವ ಸಮಸ್ಯೆ ಗಂಭೀರವಾಗಿರುವ ಸಮಯದಲ್ಲಿ ಮತ್ತೊಂದು ಚೈನ್ ಲಿಂಕ್ ಡ್ರೀಮ್ ಡೀಲ್ ಗ್ರೂಪ್ ಹೆಸರಿನಲ್ಲಿ ಬಡ ರೈತ ಕೂಲಿಕಾರ್ಮಿಕರನ್ನು ವಂಚನೆ ಮಾಡಲು ಮುಂದಾಗಿರುವುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಮೋಸ ಹೋಗದಂತೆ ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಿದರು.

ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಮಾತನಾಡಿ, ವಿದ್ಯಾಭ್ಯಾಸ ಮಾಡಿ ಕೆಲಸ ಸಿಗದ ಸಾವಿರಾರು ಯುವಕರು ತಮ್ಮ ಭವಿಷ್ಯ ರೂಪಿಸಿಕೊಳ್ಳಲಾಗದೆ ಕೆಲಸವೂ ಸಿಗದೆ ಮಾನಸಿಕವಾಗಿ ಹಿಂಸೆ ಪಡುತ್ತಿರುವ ಯುವಕರನ್ನೇ ಗುರಿಯಾಗಿಸಿಕೊಂಡು ಕೆಲವು ಆನ್ ಲೈನ್ ಜೂಜಾಟದಲ್ಲಿ ಹಣಗಳಿಸಿ ಶ್ರೀಮಂತರಾಗಿ ಎಂಬ ಜಾಹಿರಾತುಗಳಿಗೆ ಯುವ ಪೀಳಿಗೆ ಬಲಿಯಾಗುತ್ತಿದ್ದು, ಕೆಲಸವಿಲ್ಲದೆ ನಿರುದ್ಯೋಗಿಯಾಗಿರುವವರಿಗೆ ಮತ್ತೆ ಸುಲಭ ರೀತಿಯಲ್ಲಿ ಹಣ ಗಳಿಸಲು ಅನ್ಯ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡು ಮತ್ತೆ ಸೋತು ಸಾಲಗಾರರಗಾಗಿ ಜೀವವನ್ನು ಕಳೆದುಕೊಳ್ಳುತ್ತಿದ್ದು, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮುಂದಿನ ಭವಿಷ್ಯದ ಯುವಕರನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತೆರ್ನಹಳ್ಳಿ ಆಂಜಿನಪ್ಪ, ಸುಪ್ರೀಂಚಲ, ಆಲವಾಟ ಶಿವು, ರಾಜೇಂದ್ರಗೌಡ, ಶೇಖ್ ಷಫೀಉಲ್ಲಾ, ಮುನಿರಾಜು, ಹೆಬ್ಬಣಿ ಆನಂದರೆಡ್ಡಿ, ಮಂಗಸಂದ್ರ ತಿಮ್ಮಣ್ಣ, ಶಿವಾರೆಡ್ಡಿ ಮುಂತಾದವರಿದ್ದರು.

Leave a Reply

Your email address will not be published. Required fields are marked *