ಆನ್‌ಲೈನ್ ಗೇಮ್ ನಿಷೇಧ: ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025’ ಜಾರಿ: ಕಾಯ್ದೆ ಉಲ್ಲಂಘಿಸಿದರೆ ಭಾರೀ ದಂಡ ಮತ್ತು ಕಠಿಣ ಶಿಕ್ಷೆ ನಿಗದಿ

ದೇಶದಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ಆನ್‌ ಲೈನ್ ಜೂಜಾಟ ಮತ್ತು ಹಣದ ಆಟಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಹೊಸದಾಗಿ ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025’ ಜಾರಿಗೊಳಿಸಲಾಗಿದ್ದು, ಇನ್ನು ಮುಂದೆ ಹಣ ಪಣಕ್ಕಿಟ್ಟು ಆಡುವ ಎಲ್ಲಾ ರೀತಿಯ ಆನ್‌ಲೈನ್ ಆಟಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಲೋಕಸಭೆಯಲ್ಲಿ ಸಂಸದ ರಾವ್ ರಾಜೇಂದ್ರ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಡಾ. ಎಲ್. ಮುರುಗನ್ ಅವರು, ಈ ಹೊಸ ಕಾಯ್ದೆಯು ಕೇವಲ ಆಟಗಳಿಗಷ್ಟೇ ಸೀಮಿತವಾಗಿಲ್ಲ, ಅದರ ಸುತ್ತಮುತ್ತಲಿನ ಸಂಪೂರ್ಣ ಜಾಲಕ್ಕೆ ಬಲೆ ಬೀಸಿದೆ, ಎಲ್ಲಾ ಮಾದರಿಯ ಹಣದ ಆಟಗಳು: ಅದು ಕೌಶಲ್ಯದ ಆಟವಿರಲಿ (Game of Skill) ಅಥವಾ ಅದೃಷ್ಟದ ಆಟವಿರಲಿ (Game of Chance), ಹಣದ ವ್ಯವಹಾರವಿದ್ದರೆ ಅಂತಹ ಆಟಗಳನ್ನು ನಿಷೇಧಿಸಲಾಗಿದೆ.

ಜಾಹೀರಾತು ಮತ್ತು ಪ್ರಚಾರ: ಆನ್‌ಲೈನ್ ಹಣದ ಆಟಗಳ ಪ್ರಚಾರ ಮಾಡುವುದು ಅಥವಾ ಅದಕ್ಕೆ ಸಂಬಂಧಿಸಿದ ಜಾಹೀರಾತು ನೀಡುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಬ್ಯಾಂಕುಗಳು ಅಥವಾ ಯಾವುದೇ ಪಾವತಿ ವ್ಯವಸ್ಥೆಗಳ ಮೂಲಕ ಇಂತಹ ಆಟಗಳಿಗೆ ಹಣ ವರ್ಗಾವಣೆ ಮಾಡುವುದನ್ನೂ ನಿಷೇಧಿಸಲಾಗಿದೆ.

ಶಿಕ್ಷೆ ಮತ್ತು ದಂಡದ ವಿವರಗಳು ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಸರ್ಕಾರ ಭಾರೀ ದಂಡ ಮತ್ತು ಕಠಿಣ ಶಿಕ್ಷೆಯನ್ನು ನಿಗದಿಪಡಿಸಿದೆ:

ಆಟ ನೀಡುವುದು/ಹಣಕಾಸು ನೆರವು
ಮೊದಲ ಬಾರಿ ಶಿಕ್ಷೆ: 3 ವರ್ಷ ಜೈಲು ಅಥವಾ ₹1 ಕೋಟಿ ದಂಡ
ಎರಡನೇ ಬಾರಿ (ಮರುಕಳಿಸಿದರೆ): 5 ವರ್ಷ ಜೈಲು ಮತ್ತು ₹2 ಕೋಟಿ ದಂಡ

ಜಾಹೀರಾತು/ಪ್ರಚಾರ ಮಾಡುವುದು
ಮೊದಲ ಬಾರಿ ಶಿಕ್ಷೆ: 2 ವರ್ಷ ಜೈಲು ಅಥವಾ ₹50 ಲಕ್ಷ ದಂಡ
ಎರಡನೇ ಬಾರಿ (ಮರುಕಳಿಸಿದರೆ): 3 ವರ್ಷ ಜೈಲು ಮತ್ತು ₹1 ಕೋಟಿ ದಂಡ

ಭಾರತೀಯ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ ಸ್ಥಾಪನೆ

ಆನ್‌ಲೈನ್ ಗೇಮಿಂಗ್ ಕ್ಷೇತ್ರವನ್ನು ವ್ಯವಸ್ಥಿತಗೊಳಿಸಲು ಸರ್ಕಾರವು ‘ಭಾರತೀಯ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ’ ಎಂಬ ರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಸ್ಥಾಪಿಸುತ್ತಿದೆ. ಈ ಪ್ರಾಧಿಕಾರವು ಕೆಳಗಿನ ಜವಾಬ್ದಾರಿಗಳನ್ನು ಹೊಂದಿರುತ್ತದೆ: ಯಾವ ಆಟಗಳನ್ನು ಆಡಬಹುದು ಮತ್ತು ಯಾವುದನ್ನು ಆಡಬಾರದು ಎಂದು ನಿರ್ಧರಿಸುವುದು.

ಇ-ಸ್ಪೋರ್ಟ್ಸ್ ಮತ್ತು ಸಾಮಾಜಿಕ ಆಟಗಳಿಗೆ ಉತ್ತೇಜನ ನೀಡುವುದು.

ಬಳಕೆದಾರರ ದೂರುಗಳನ್ನು ಆಲಿಸಲು ಕುಂದುಕೊರತೆ ನಿವಾರಣಾ ವ್ಯವಸ್ಥೆ ರೂಪಿಸುವುದು.

ಆನ್‌ಲೈನ್ ಗೇಮ್ ನಿಷೇಧದ ಪ್ರಮುಖಾಂಶಗಳು (2025-26)

ನಿಷೇಧಿತ ಆಟಗಳು: ಹಣ ಪಣಕ್ಕಿಟ್ಟು ಆಡುವ ಡ್ರೀಮ್-11, ರಮ್ಮಿ ಸರ್ಕಲ್, ಪೋಕರ್, ಮತ್ತು ಬೆಟ್ಟಿಂಗ್ ಆಪ್‌ಗಳು.

ಕಠಿಣ ಕ್ರಮ: ಆಟ ಆಡುವವರು, ಪ್ರಚಾರ ಮಾಡುವವರು (influencers) ಮತ್ತು ಆಪ್‌ಗಳ ಮೇಲೆ ದಂಡ ಮತ್ತು ಶಿಕ್ಷೆ ವಿಧಿಸಲಾಗುತ್ತದೆ.

ಬ್ಯಾಂಕಿಂಗ್ ನಿರ್ಬಂಧ: ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಅಕ್ರಮ ಗೇಮಿಂಗ್ ಆಪ್‌ಗಳಿಗೆ ಹಣ ವರ್ಗಾವಣೆಯನ್ನು ನಿರ್ಬಂಧಿಸಬೇಕು.

ಧ್ಯೇಯ: ಯುವಕರನ್ನು ರಕ್ಷಿಸುವುದು, ಆರ್ಥಿಕ ವಂಚನೆ ತಡೆಯುವುದು ಮತ್ತು ಡಿಜಿಟಲ್ ಪರಿಸರವನ್ನು ಸುರಕ್ಷಿತಗೊಳಿಸುವುದು.

ಇ-ಸ್ಪೋರ್ಟ್ಸ್: ಕೌಶಲ್ಯ ಆಧಾರಿತ ಇ-ಸ್ಪೋರ್ಟ್ಸ್ ಮತ್ತು ಸಾಮಾಜಿಕ ಆಟಗಳಿಗೆ ಉತ್ತೇಜನ ನೀಡಲಾಗುತ್ತದೆ.

ಈ ಹೊಸ ಕಾಯ್ದೆಯು 2025 ರ ನಂತರ ದೇಶದಲ್ಲಿ ಹಣದ ಆಟಗಳ ಮೇಲೆ ಕಟ್ಟುನಿಟ್ಟಿನ ಕಡಿವಾಣ ಹಾಕಿದೆ.

Leave a Reply

Your email address will not be published. Required fields are marked *

error: Content is protected !!