ಆಧುನಿಕ ಕರ್ಣ ಎಂಬ ಬಿರುದು ಪಡೆದ ಪೊಲೀಸಪ್ಪ: ಬಡವರ ಸೇವೆಗೆ ತಮ್ಮ ಬದುಕನ್ನೇ ಅರ್ಪಣೆ 

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್ ಪ್ರಮೋದ್ ರೆಡ್ಡಿ… ಸರ್ಕಾರಿ ಕರ್ತವ್ಯವನ್ನು ನೆರವೇರಿಸುತ್ತಿದ್ದರೂ, ತಮ್ಮ ರಜಾದಿನಗಳಲ್ಲಿ ಬಡವರ ಸೇವೆಗೆ ತಮ್ಮ ಬದುಕನ್ನೇ ಅರ್ಪಿಸುವ ಮೂಲಕ ಆಧುನಿಕ ಕರ್ಣ ಎಂಬ ಬಿರುದನ್ನು ಪಡೆದಿದ್ದಾರೆ.

30 ವರ್ಷದ ಪ್ರಮೋದ್ ರೆಡ್ಡಿ, ಮಂಚೇನಹಳ್ಳಿ ತಾಲ್ಲೂಕಿನಲ್ಲೇ ಅಲ್ಲದೆ, ವಿವಿಧ ಗ್ರಾಮಗಳಲ್ಲಿ ಬಡವರ ನೆರವಿಗೆ ಸದಾ ಸಿದ್ಧರಾಗಿದ್ದಾರೆ. ವಾರದಲ್ಲಿ ಒಂದು ದಿನ ಅನ್ನದಾನ ಮಾಡುವುದರ ಜೊತೆಗೆ ಹಾಸಿಗೆಗಳು, ಸೊಳ್ಳೆ ಪರದೆಗಳು, ಬಟ್ಟೆಗಳು ಮತ್ತು ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸುವ ಮೂಲಕ ಅವರು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಮಾನವರಷ್ಟೇ ಅಲ್ಲದೆ, ಪ್ರಾಣಿಗಳ ಮೇಲೂ ಪ್ರಮೋದ್ ರೆಡ್ಡಿಯವರಿಗೆ ಅಷ್ಟೇ ಮಮತೆ. ರಸ್ತೆಗಳಲ್ಲಿ ಅಪಘಾತದಲ್ಲಿ ಮೃತಪಟ್ಟ ಬೀದಿ ನಾಯಿಗಳಿಗೆ ಹೂವು, ಹಾಲು ಅರ್ಪಿಸಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಹಕ್ಕಿ, ಪ್ರಾಣಿ ಯಾವುದೇ ಪ್ರಾಣಿ ಸತ್ತರೂ, ಅವುಗಳಿಗೂ ಗೌರವ ನೀಡಿ ಅಂತ್ಯಸಂಸ್ಕಾರ ಮಾಡುವ ಮೂಲಕ ತಮ್ಮ ಕರ್ತವ್ಯವನ್ನು ಪೂರೈಸುತ್ತಾರೆ.

ಶಿಡ್ಲಘಟ್ಟ ತಾಲ್ಲೂಕಿನ ಎಸ್ ಗೊಲ್ಲಹಳ್ಳಿ ಮೂಲದ ಪ್ರಮೋದ್ ರೆಡ್ಡಿ ಹುಟ್ಟು ಹರಿಭಕ್ತ, ಜನಸೇವೆಯೇ ಜನಾರ್ದನ ಸೇವೆ ಎಂದು ಭಾವಿಸುವ ಪ್ರಮೋದ್ ರೆಡ್ಡಿ, ರೈತ ನಂಜಪ್ಪ ರೆಡ್ಡಿ ಮತ್ತು ಪಾರ್ವತಮ್ಮ ಅವರ ಪುತ್ರ. ತಮ್ಮ ಮಾವ ಅಶ್ವತ್ಥ ರೆಡ್ಡಿಯ ಸಹಾಯದಿಂದ ಬಿ.ಇ. ಸಿವಿಲ್ ಎಂಜಿನಿಯರಿಂಗ್ ಮುಗಿಸಿದ ಅವರು, ಬಾಲ್ಯದಿಂದಲೇ ವಿಷ್ಣು ಭಕ್ತರಾಗಿದ್ದು, ಕಳೆದ 5 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸಂಬಳದ 10% ಅನ್ನು ಸಮಾಜ ಸೇವೆಗೆ ಮೀಸಲಿಟ್ಟಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಗರ್ಭಿಣಿಯರಿಗೆ ಹೆರಿಗೆ ನೆರವು, ಡಯಾಲಿಸಿಸ್ ಚಿಕಿತ್ಸೆ, ಔಷಧಿ ಸಹಾಯ, ಮಕ್ಕಳ ಶಿಕ್ಷಣ… ಹೀಗೆ ಹಲವು ಸಾಮಾಜಿಕ ಸೇವೆಗಳನ್ನು ಪ್ರಮೋದ್ ರೆಡ್ಡಿ ಇದುವರೆಗೆ ಮಾಡಿದ್ದಾರೆ. 30 ವರ್ಷ ವಯಸ್ಸಿನ ಅವಿವಾಹಿತ ಪ್ರಮೋದ್ ರೆಡ್ಡಿ ಮಾಂಸ, ಮದ್ಯ ಸೇವನೆ ಮಾಡದೇ, ಭಕ್ತಿ-ಸೇವೆ ಮಾರ್ಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಸಮಾಜ ಸೇವೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿದರೆ ಸಮಾಜದಲ್ಲಿ ಬದಲಾವಣೆ ತರುವುದೇ ಅಲ್ಲ, ಬದುಕಿನಲ್ಲಿ ತೃಪ್ತಿಯನ್ನೂ ನೀಡುತ್ತದೆ ಎಂದು ಹೇಳುವ ಪ್ರಮೋದ್ ರೆಡ್ಡಿಯವರ ಸೇವಾಭಾವ ಇಂದು ಎಲ್ಲರ ಮೆಚ್ಚುಗೆಯಾಗಿದೆ.

Leave a Reply

Your email address will not be published. Required fields are marked *

error: Content is protected !!