ಆದಿವಾಸಿ/ಅರಣ್ಯವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸದ್ಯದಲ್ಲೇ ಸೂಕ್ತ ಕ್ರಮ- ಸಿಎಂ ಸಿದ್ದರಾಮಯ್ಯ

ಆದಿವಾಸಿ/ಅರಣ್ಯವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಾಗಿ ಸದ್ಯದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವನ್ಯಜೀವಿ ಮಂಡಳಿ ಸಭೆ ಕರೆದು ಅರಣ್ಯಾಧಿಕಾರಿಗಳಿಂದ ಅರಣ್ಯವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹಲವು ದಶಲಗಳಿಂದ ಕೆರೆಹಾಡಿ ಸೇರಿದಂತೆ ಒಂಬತ್ತು ಹಾಡಿಗಳಿಗೆ ವಿದ್ಯುತ್ ಸಂಪರ್ಕ ಇಲ್ಲ, ಕುಡಿಯುವ ನೀರಿಗೆ ಸಮಸ್ಯೆ ಇದೆ. ಇದು ಗಂಭಿರವಾದುದ್ದು. ಯಾವ ಅರಣ್ಯ ಕಾಯ್ದೆ ಕೂಡ ಅರಣ್ಯವಾಸಿಗಳಿಗೆ ಕರೆಂಟು, ನೀರು ಕೊಡಬೇಡಿ ಎಂದು ಹೇಳುವುದಿಲ್ಲ. ಅರಣ್ಯಾಧಿಕಾರಗಳು ಅನಗತ್ಯ ಕಿರುಕುಳ, ತೊಂದರೆ ಕೊಡಬಾರದು ಎಂದರು.

ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿಯವರು ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಒಂದು ತಿಂಗಳಲ್ಲಿ ಕೆರೆಹಾಡಿ ಮತ್ತು ಇತರೆ ಎಂಟು ಹಾಡಿಗಳ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕದ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಹೇಳಿದರು.

ಹಕ್ಕುಪತ್ರ ಇದ್ದರೂ ಅರಣ್ಯಾಧಿಕಾರಿಗಳು ಮನೆ ಕಟ್ಟಲು ಬಿಡುತ್ತಿಲ್ಲ, ಎರಡು-ಮೂರು ಎಕರೆ ಜಾಗದಲ್ಲಿ ಹಲವಾರು ದಶಕಗಳಿಂದ ಉಳುಮೆ ಮಾಡುತ್ತಿದ್ದರೂ ಕೇವಲ 2, 3 ಗುಂಟೆಗೆ ಹಕ್ಕು ಪತ್ರ ನೀಡಿದ್ದಾರೆ. ಜಮೀನಿನಲ್ಲಿ ಟ್ರಾಕ್ಟರ್ ಬಳಸಲು ಅವಕಾಶ ನೀಡುತ್ತಿಲ್ಲ ಎನ್ನುವ ದೂರು ಬಂದಿದೆ ಎಂದು ತಿಳಿಸಿದರು.

ಆದಿವಾಸಿಗಳು ಅಂದರೆ ಅವರು ಅರಣ್ಯದ ಭಾಗವೇ ಆಗಿದ್ದಾರೆ. ಇವರಿಂದ ಅರಣ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಆದ್ದರಿಂದ ಇವರಿಗೆ ಅನಗತ್ಯ ತೊಂದರೆ ಕೊಡಬಾರದು ಎಂಬ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದರು.

ವನ್ಯ ಜೀವಿ ಮಂಡಳಿಗೆ ನಾನೇ ಅಧ್ಯಕ್ಷ ಆಗಿದ್ದೀನಿ. ಸದ್ಯದಲ್ಲೇ ಮಂಡಳಿ ಸಭೆ ಕರೆದು ಇಲ್ಲಿನ ಬುಡಕಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆ ಎಂದು ಹೇಳಿದರು.

ತಾವು ಅಲೆಮಾರಿಗಳಲ್ಲ. ಊರ ನಾಯಕರೂ ಅಲ್ಲ. ತಾವೆಲ್ಲರೂ ಕಾಡಲ್ಲೇ ಒಂದೇ ಕಡೆ ನೆಲೆಸಿರುವ ಆದಿವಾಸಿಗಳು. ಆದ್ದರಿಂದ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ತಮ್ಮನ್ನು ಸೇರಿಸಬೇಡಿ. ನಮಗೆ ಪ್ರತ್ಯೇಕವಾದ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಎನ್ನುವ ಬೇಡಿಕೆ ಇಟ್ಟಿದ್ದಾರೆ. ಪ್ರತ್ಯೇಕ ಆದಿವಾಸಿ ನಿಗಮ ಸ್ಥಾಪನೆ ಸಂಬಂಧ ಆದಷ್ಟು ಶೀಘ್ರ ಕ್ರಮ ವಹಿಸುತ್ತೇನೆ ಎಂದರು.

ನಮ್ಮಪ್ಪ ಕೂಡ ಜನಪದ ನೃತ್ಯ ಕಲಿಯೋಕೆ ನನ್ನನ್ನು ಹಾಕ್ಬಿಟ್ಟಿದ್ರು. ನಾನು ಹಠತೊಟ್ಟು ಕಾನೂನು ಪದವಿ ಮಾಡಿದ್ದಕ್ಕೆ ಇಂದು ಮುಖ್ಯಮಂತ್ರಿ ಆಗುವ ಮಟ್ಟಕ್ಕೆ ಬೆಳೆದೆ. ಈ ಆದಿವಾಸಿ ಸಮುದಾಯದ ಮಕ್ಕಳು ಕೂಡ ಅರ್ಧಕ್ಕೇ ಶಾಲೆ ನಿಲ್ಲಿಸದೆ ಶಿಕ್ಷಣ ಪಡೆಯಬೇಕು. ಆಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮೊದಲು ನಾಲ್ಕನೇ ತರಗತಿವರೆಗೂ ಮಾತ್ರ ಆಶ್ರಮ ಶಾಲೆಗಳನ್ನು ನಾನು ಎಂಟನೇ ತರಗತಿವರೆಗೂ ವಿಸ್ತರಿಸಿದ್ದೆ. ಇದನ್ನು ಪಿಯುಸಿ ವರೆಗೂ ವಿಸ್ತರಿಸಿ ಎನ್ನುವುದು ಆದಿವಾಸಿಗಳು ಬೇಡಿಕೆಯಾಗಿದೆ, ಈ ಬಗ್ಗೆ ಸಭೆ ಕರೆದು ಪರಿಶೀಲನೆ ನಡೆಸುತ್ತೇನೆ ಎಂದರು.

ಪರಿಶಿಷ್ಟ ಜಾತಿಯವರ ಒಳ ಮೀಸಲಾತಿಗೆ ಮುಂದಾಗಿರುವ ರೀತಿಯಲ್ಲೇ , ಪರಿಶಿಷ್ಠ ವರ್ಗದವರ ಒಳ ಮೀಸಲಾತಿಗೆ ಕ್ರಮ ವಹಿಸಬೇಕು ಎನ್ನುವ ಬೇಡಿಕೆ ಇದೆ. ಆದರೆ ಎಸ್ ಸಿ ಒಳಮೀಸಲಾತಿ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಅದರ ಆಧಾರದಲ್ಲಿ ಮುಂದುವರೆದಿದ್ದೇವೆ. ಎಸ್ ಟಿ ಒಳ ಮೀಸಲಾತಿ ಬಗ್ಗೆ ಏನೂ ತೀರ್ಪು ಬಂದಿಲ್ಲ. ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *