
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಘಾತಕಾರಿ ಜಾಲವೊಂದು ಬೆಳಕಿಗೆ ಬಂದಿದ್ದು, ಆಗಷ್ಟೇ ಋತುಮತಿಯಾದ ಯುವತಿಯರನ್ನು ಲೈಂಗಿಕ ಕೃತ್ಯಗಳಿಗೆ ಪೂರೈಸುತ್ತಿದ್ದ ಭಯಾನಕ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಗೆ ಮೈಸೂರಿನ ಒಡನಾಡಿ ಸಂಸ್ಥೆ ಸಾಥ್ ನೀಡಿದೆ ಎಂಬ ಕೂಗು ಕೇಳಿಬಂದಿದೆ.

ಮೈಸೂರು ಪೊಲೀಸರ ಬಂಧನದಲ್ಲಿರುವ ಆರೋಪಿಗಳು ಹೇಳಿಕೊಂಡಿರುವಂತೆ, ತಮ್ಮ ಸಮಾಜದಲ್ಲಿ ಋತುಮತಿಯಾದ ಬಾಲಕಿಯರ ಜೊತೆ ಮೊದಲ ಲೈಂಗಿಕ ಸಂಪರ್ಕ ನಡೆಸುವುದರಿಂದ ಮಾನಸಿಕ ಕಾಯಿಲೆಗಳು, ಲೈಂಗಿಕ ಕಾಯಿಲೆಗಳು ದೂರ ಆಗುತ್ತವೆ ಎಂಬುದು ನಂಬಿಕೆ. ಹೀಗಾಗಿ ಮೊದಲ ಬಾರಿ ಋತುಮತಿಯಾದ ಬಾಲಕಿಯರನ್ನು ಲೈಂಗಿಕ ಕೃತ್ಯಕ್ಕೆ ಪೂರೈಸುತ್ತಿದ್ದೆವು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಋತುಮತಿಯರಾದ ಯುವತಿಯರಿಗೆ ದುಬಾರಿ ಐಫೋನ್, ಬ್ರಾಂಡೆಡ್ ಬಟ್ಟೆಗಳ ಆಸೆ ತೋರಿಸಿ ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಒಡನಾಡಿ ಸಂಸ್ಥೆ ಕಲೆ ಹಾಕಿದ್ದು, ಗ್ರಾಹಕರ ಸೋಗಿನಲ್ಲಿ ಆರೋಪಿಗಳನ್ನ ಸಂಪರ್ಕಿಸಿ ಖಚಿತಪಡಿಸಿಕೊಂಡಿದೆ. ಆ ಬಳಿಕ ಮೈಸೂರಿನ ವಿಜಯನಗರ ಪೊಲೀಸರು & ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.