ಆಕ್ಸಿಯಮ್-4 ಮಿಷನ್(Axiom-4): ಬಾಹ್ಯಾಕಾಶಕ್ಕೆ ಹಾರಿದ ಕ್ಯಾಪ್ಟನ್ ಶುಭಾಂಶು ಶುಕ್ಲಾ

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರನ್ನು ಹೊತ್ತ ಆಕ್ಸಿಯಮ್-4 ಮಿಷನ್(Axiom-4) ಇಂದು ಬುಧವಾರ ಭಾರತೀಯ ಕಾಲಮಾನ ಮಧ್ಯಾಹ್ನ 12.01ಕ್ಕೆ ಅಮೆರಿಕದ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಡೆಗೆ ಯಶಸ್ವಿಯಾಗಿ ಚಿಮ್ಮಿದೆ.

28 ಗಂಟೆಗಳ ಪ್ರಯಾಣದ ನಂತರ, ಬಾಹ್ಯಾಕಾಶ ನೌಕೆ ನಾಳೆ ಗುರುವಾರ ಸಂಜೆ 4:30 (IST) ಸುಮಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ನೊಂದಿಗೆ ಡಾಕ್ ಆಗುವ ನಿರೀಕ್ಷೆಯಿದೆ. ಗಗನಯಾತ್ರಿಗಳು ಬಾಹ್ಯಾಕಾಶ ನೌಕೆ ನಿಲ್ದಾಣದಲ್ಲಿ ಸುಮಾರು 14 ದಿನಗಳನ್ನು ಕಳೆಯಲಿದ್ದಾರೆ.

ನಾಸಾದ ಮಾಜಿ ಗಗನಯಾತ್ರಿ ಮತ್ತು ಆಕ್ಸಿಯಮ್ ಸ್ಪೇಸ್‌ನಲ್ಲಿ ಮಾನವ ಬಾಹ್ಯಾಕಾಶ ಹಾರಾಟದ ನಿರ್ದೇಶಕಿ ಪೆಗ್ಗಿ ವಿಟ್ಸನ್ ಈ ವಾಣಿಜ್ಯ ಕಾರ್ಯಾಚರಣೆಯನ್ನು ಮುನ್ನಡೆಸಿದ್ದಾರೆ. ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಗಗನಯಾತ್ರಿ ಶುಭಾನ್ಶು ಶುಕ್ಲಾ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇಬ್ಬರು ಮಿಷನ್ ತಜ್ಞರು ಪೋಲೆಂಡ್‌ನ ಇಎಸ್‌ಎ (ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ) ಯೋಜನೆಯ ಗಗನಯಾತ್ರಿ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಹುನೋರ್ (ಹಂಗೇರಿಯನ್ ಟು ಆರ್ಬಿಟ್) ಗಗನಯಾತ್ರಿ ಟಿಬೋರ್ ಕಾಪು ಆಗಿದ್ದಾರೆ.

ನಮಸ್ಕಾರ, ನನ್ನ ಪ್ರೀತಿಯ ದೇಶವಾಸಿಗಳೇ!” ಎಂದು ಸ್ಪೇಸ್‌ ಎಕ್ಸ್‌ನ ಕ್ರೂಡ್ರಾಗನ್‌ನಲ್ಲಿ ಉಡಾವಣೆಯಾದ ಸುಮಾರು 10 ನಿಮಿಷಗಳ ನಂತರ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ದೇಶವಾಸಿಗಳನ್ನುದ್ದೇಶಿಸಿ ಸಂದೇಶ ಕಳುಹಿಸಿದ್ದಾರೆ..

“ನಾವು 41 ವರ್ಷಗಳ ನಂತರ ಬಾಹ್ಯಾಕಾಶ ತಲುಪಿದ್ದೇವೆ. ನಾವು ಸೆಕೆಂಡಿಗೆ ಸುಮಾರು 7.5 ಕಿಮೀನಷ್ಟು ಭೂಮಿಯ ಸುತ್ತ ಸುತ್ತುತ್ತಿದ್ದೇವೆ. ನನ್ನ ಭುಜದ ಮೇಲೆ ಭಾರತೀಯ ತ್ರಿವರ್ಣವಿದೆ. ನಾನು ಈ ಪಯಣದಲ್ಲಿ ನಿಮ್ಮೆಲ್ಲರೊಂದಿಗಿದ್ದೇನೆ ಇದು ಐಎಸ್‌ಎಸ್‌ಗೆ ನನ್ನ ಪ್ರಯಾಣದ ಆರಂಭ ಮಾತ್ರವಲ್ಲ, ಭಾರತದ ಮಾನವ ಬಾಹ್ಯಾಕಾಶ ಹಾರಾಟದ ಯುಗದ ಆರಂಭವೂ ಆಗಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಈ ಪ್ರಯಾಣದ ಭಾಗವಾಗಬೇಕೆಂದು ನಾನು ಬಯಸುತ್ತೇನೆ, ನಾವು ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮವನ್ನು ಒಟ್ಟಿಗೆ ಪ್ರಾರಂಭಿಸೋಣ.” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *