ಆಕಸ್ಮಿಕ ಬೆಂಕಿ: ಹುಲ್ಲಿನ ಬಣವೆ, ಹಲಸಿನ ಮರ, ಹನಿ ನೀರಾವರಿ ವ್ಯವಸ್ಥೆ ಸಂಪೂರ್ಣ ಭಸ್ಮ

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯ ಎಸ್. ನಾಗೇನಹಳ್ಳಿ ಗ್ರಾಮದಲ್ಲಿ ಭಾನುವಾರ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಏಕಾಏಕಿ ಕಾಣಿಸಿಕೊಂಡ ಬೆಂಕಿ ಕೆಲವೇ ನಿಮಿಷಗಳಲ್ಲಿ ವ್ಯಾಪಿಸಿಕೊಂಡು,
ಗ್ರಾಮದ ರೈತ ವೆಂಕಟಪ್ಪ ಅವರಿಗೆ ಸೇರಿದ ಕೃಷಿಭೂಮಿಯಲ್ಲಿ ಇಟ್ಟುಕೊಂಡಿದ್ದ ಸುಮಾರು ಐದು ಟ್ರಾಕ್ಟರ್ ಲೋಡ್ ರಾಗಿ ಹುಲ್ಲಿನ ಬಣವೆ, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಹಲಸಿನ ಮರ, ಜೊತೆಗೆ ಟೊಮೋಟೊ ಬೆಳೆಗೆ ಅಳವಡಿಸಲಾಗಿದ್ದ ಅಪಾರ ಮೌಲ್ಯದ ಹನಿ ನೀರಾವರಿ ಪೈಪುಗಳು ಹಾಗೂ ಟೊಮೇಟೊ ಕಡ್ಡಿಗಳು ಬೆಂಕಿಗಾಹುತಿಯಾಗಿವೆ. ಈ ಅವಘಡದಿಂದ ರೈತರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಬೆಂಕಿ ಕಾಣಿಸಿಕೊಂಡ ಕೂಡಲೇ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ನೀರು, ಮಣ್ಣು ಬಳಸಿ ಬೆಂಕಿ ನಂದಿಸಲು ಯತ್ನಿಸಿದರೂ, ಬಿಸಿಲಿನ ತೀವ್ರತೆ, ಒಣಹವಾಮಾನ ಹಾಗೂ ಗಾಳಿಯ ವೇಗದಿಂದಾಗಿ ಬೆಂಕಿ ಇನ್ನಷ್ಟು ವ್ಯಾಪಿಸಿಕೊಂಡಿದೆ. ಪರಿಸ್ಥಿತಿ ಕೈ ಮೀರುವುದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರೂ, ಅಷ್ಟರೊಳಗೆ ಬಹುತೇಕ ಕೃಷಿ ಸಾಮಗ್ರಿಗಳು ಭಸ್ಮವಾಗಿದ್ದರಿಂದ ನಷ್ಟ ತಪ್ಪಿಸಲು ಸಾಧ್ಯವಾಗಲಿಲ್ಲ. ನಂತರ ಬೆಂಕಿ ಇನ್ನಷ್ಟು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಯಿತು.

ರೈತ ವೆಂಕಟಪ್ಪ ಅವರ ಕುಟುಂಬಕ್ಕೆ ರಾಗಿ ಹುಲ್ಲು, ಹಲಸಿನ ಕಾಯಿ ಹಾಗೂ ಟೊಮೇಟೊ ಬೆಳೆ ಮುಖ್ಯ ಆದಾಯದ ಮೂಲವಾಗಿತ್ತು. ಇಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವರ ಜೀವನಾಧಾರಕ್ಕೆ ಭಾರೀ ಹೊಡೆತ ನೀಡಿದೆ. ಮುಂದಿನ ಬೆಳೆಗಾಗಿ ಬಳಸಲು ಸಂಗ್ರಹಿಸಿದ್ದ ಹುಲ್ಲು ಹಾಗೂ ನೀರಾವರಿ ವ್ಯವಸ್ಥೆ ನಾಶವಾದುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ಹಾಗೂ ರೈತ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಯುವ ಮುಖಂಡ ಉದಯ ಆರಾಧ್ಯ ಮಾತಾನಾಡಿ, ಆಕಸ್ಮಿಕ ಬೆಂಕಿಯಿಂದ ಸಂಪೂರ್ಣ ನಷ್ಟಕ್ಕೆ ಒಳಗಾದ ರೈತ ವೆಂಕಟಪ್ಪ ಅವರಿಗೆ ತಕ್ಷಣ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು, ಜೊತೆಗೆ ಹಾನಿಯ ಸಮೀಕ್ಷೆ ನಡೆಸಿ ಪರಿಹಾರ ಮೊತ್ತ ಘೋಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!