ದೊಡ್ಡಬಳ್ಳಾಪುರ: ಬೋರ್ ವೆಲ್ ಲಾರಿ ನಿಲುಗಡೆ ಶೆಡ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೋರ್ ವೆಲ್ ಯಂತ್ರ ಸಾಗಾಟ ಲಾರಿ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ರಾತ್ರಿ ಸುಮಾರು 10ಗಂಟೆ ಸಮಯದಲ್ಲಿ ನಗರದ ಹೊರವಲಯದಲ್ಲಿರುವ ಹಮಾಮ್ ಬಳಿ ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಬೆಂಕಿಯ ಕೆನ್ನಾಲಿಗೆಗೆ ಒಂದು ಬೋರ್ ವೆಲ್ ಯಂತ್ರ ಸಾಗಾಟ ಲಾರಿ ಸೇರಿದಂತೆ ಸುಮಾರು 2 ಕೋಟಿ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಮಿಳುನಾಡು ಮೂಲದ ಬೋರ್ ವೆಲ್ ಲಾರಿ ಮಾಲೀಕ ಹಮಾಮ್ ಬಳಿ 8 ವರ್ಷಗಳ ಹಿಂದೆ ಬಾಡಿಗೆಗೆ ಜಾಗ ತೆಗೆದುಕೊಂಡು ಶೆಡ್ ಮಾಡಿಕೊಂಡು ಅಲ್ಲಿ ಬೋರ್ ವೆಲ್ ಲಾರಿ ಹಾಗೂ ಬೋರ್ ವೆಲ್ ಗೆ ಸಂಬಂಧಪಟ್ಟ ವಸ್ತುಗಳನ್ನು ಇರಿಸಲಾಗಿತ್ತು. ನಿನ್ನೆ ರಾತ್ರಿ ಶೆಡ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿರುವುದಿಲ್ಲ.