ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯಯಾತ್ರೆ ಮೇಲೆ ದಾಳಿ ಯತ್ನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ದೊಡ್ಡಬಳ್ಳಾಪುರ: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ನ್ಯಾಯಯಾತ್ರೆ’ ಮೇಲೆ ದಾಳಿ ಯತ್ನ ನಡೆಸಿದ ಅಸ್ಸಾಂ ಸರ್ಕಾರ ಹಾಗೂ ಬಿಜೆಪಿ ಕಾರ್ಯಕರ್ತರ ನಡೆ ಖಂಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ನಗರದ ತಾಲೂಕು‌ ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ದೊಡ್ಡಬಳ್ಳಾಪುರ ಕ್ಷೇತ್ರದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ನಿಮಂತ್ ಬಿಸ್ವಾಸ್ ವಿರುದ್ಧ ಘೋಷಣೆ ಕೂಗಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ ಮಾತನಾಡಿ, ಮಣಿಪುರದಿಂದ ಆರಂಭಿಸಿದ ಭಾರತ್ ಜೋಡೋ ನ್ಯಾಯಯಾತ್ರೆಯು ಅಸ್ಸಾಂ ಪ್ರವೇಶಿಸಿದಾಗ ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಬಿಜೆಪಿ ಮುಖಂಡರು ಗೂಂಡಗಳನ್ನು ಬಿಟ್ಟು ನ್ಯಾಯಯಾತ್ರೆಗೆ ಅಡ್ಡಿಪಡಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ನಿಮಂತ್ ಬಿಸ್ವಾಸ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ದಾಳಿ ಯತ್ನ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಹಿರಿಯ ಮುಖಂಡರಾದ ಸಿ.ಡಿ.ಸತ್ಯನಾರಾಯಣಗೌಡ, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರ್, ಎಲ್ಲ ಮುಂಚೂಣಿ ಘಟಕಗಳ ಮುಖಂಡರು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *