ವೈಜ್ಞಾನಿಕ ತಳಹದಿ ಇಲ್ಲದೆ ಚರಂಡಿ ಕಾಮಗಾರಿ ಮಾಡಿದ್ದು, ಸರಾಗವಾಗಿ ಹರಿಯಬೇಕಿದ್ದ ಚರಂಡಿ ನೀರು ಮನೆಗಳಲ್ಲಿರುವ ಸಂಪುಗಳಲ್ಲಿ ಜನಿಯುತ್ತಿವೆ. ಮಳೆ ಸುರಿದರಂತೂ ಚರಂಡಿಯಲ್ಲಿ ಹರಿಯಬೇಕಾದ ನೀರು ಮನೆಗಳಿಗೆ ನುಗ್ಗುವುದು ಒಂದೆಡೆಯಾದರೆ, ಸರ್ಕಾರಿ ರಸ್ತೆ ಒತ್ತುವರಿಯಾಗಿ ಸಂಚರಿಸಲು ಒತ್ತುವರಿದಾರರ ಬಳಿ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಇದೆ.
ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವುದು ದೊಡ್ಡಬಳ್ಳಾಪುರ ನಗರದ ಏಳನೆಯ ವಾರ್ಡ್ ಶ್ರೀನಗರ ನಿವಾಸಿಗಳು.
ಈ ಕುರಿತು ಶ್ರೀನಗರ ನಿವಾಸಿಯಾದ ಮನು ಅವರು ಮಾತನಾಡಿ, ವೈಜ್ಞಾನಿಕವಾದ ಯೋಜನೆ ಇಲ್ಲದೆ ಮಾಡಿರುವ ಚರಂಡಿ ಕಾಮಗಾರಿಯಿಂದಾಗಿ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತು ಮನೆಗಳಲ್ಲಿರುವ ಸಂಪುಗಳಲ್ಲಿ ಜನಿದು ಸಂಪಿನ ನೀರು ಕೊಳಚೆಯಾಗುತ್ತಿದೆ, ಮಳೆ ನೀರು ಹೆಚ್ಚಾದರೆ ಚರಂಡಿ ತುಂಬಿ ಮನೆಗಳಿಗೆ ನುಗ್ಗತ್ತದೆ, ಸೊಳ್ಳೆಗಳ ಕಾಟ ತಡೆಯಲಾಗುತ್ತಿಲ್ಲ, ರಸ್ತೆ ಒತ್ತುವರಿ ಮಾಡಿ ಕೊಂಡಿರುವವರ ಬಳಿ ಅನುಮತಿ ಪಡೆದು ಸಂಚಾರ ಮಾಡುವ ಪರಿಸ್ಥಿತಿ ಇದ್ದು ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಮತ್ತೊಬ್ಬ ನಿವಾಸಿ ಅರುಣ್ ಕುಮಾರ್ ಮಾತನಾಡಿ, ಚರಂಡಿ ನೀರು ಸರಾಗವಾಗಿ ಹರಿಯದೆ, ಮಕ್ಕಳು ವೃದ್ದರು ಕಾಯಿಲೆಯಿಂದ ಬಳಲುವ ಪರಿಸ್ಥಿತಿ ಇದೆ, ತಿಂಗಳಲ್ಲಿ ಎರಡು ಬಾರಿ ಒಳ ಚರಂಡಿ ಕಟ್ಡಿ ಕೊಳ್ಳುತ್ತದೆ, ಈ ಬಗ್ಗೆ ಯಾರೂ ತಲೆ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನೂ 80 ಅಡಿಗಳ ಹಳೆ ಮಧುಗಿರಿ ರಸ್ತೆಯನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದು, ಇದು ನಮ್ಮ ನಿವೇಶನ ಎಂದು ಸೈಜು ಕಲ್ಲನ್ನು ನೆಟ್ಟಿದ್ದಾರೆ, ಅದರಿಂದಾಗಿ ರಸ್ತೆಯಲ್ಲಿ ಒಡಾಡುವ ಮಕ್ಕಳು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ.
ನಮ್ಮ ಸಮಸ್ಯೆಗಳು ಹೇಳತೀರದಾಗಿದೆ ಎಂದು ಅಳಲು ತೋಡಿಕೊಂಡ ಅವರು, ಇನ್ನಾದರೂ ಕಂದಾಯ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಬಗೆ ಹರಿಸಿ ಕೊಡಬೇಕು ಎಂದರು.