ಅವೈಜ್ಞಾನಿಕವಾಗಿ ನಡು ರಸ್ತೆಯಲ್ಲೇ ವಿದ್ಯುತ್ ಪರಿವರ್ತಕ, ವಿದ್ಯುತ್ ಕಂಬಗಳ ಅಳವಡಿಕೆ: ಸ್ಥಳಂತರಿಸುವಂತೆ ಗ್ರಾಮಸ್ಥರ ಆಗ್ರಹ: ಕ್ಯಾರೆ ಎನ್ನದ ಅಧಿಕಾರಿಗಳು

ತಾಲೂಕಿನ ಮಧುರೆ ಹೋಬಳಿಯ ಚೆನ್ನಾದೇವಿ ಅಗ್ರಹಾರ ಗ್ರಾಮ‌‌ ಪಂಚಾಯಿತಿ‌ ವ್ಯಾಪ್ತಿಯ ಮಲ್ಲೋಹಳ್ಳಿ(11ಮೈಲಿ) ಕಾಲೋನಿಯಲ್ಲಿ ಹಲವು ಸಮಸ್ಯೆಗಳು ತಾಂಡವಾಡುತ್ತಿವೆ. ಈ ಸಮಸ್ಯೆಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳ ಕಣ್ಣಿಗೆ ಕಂಡರೂ… ಜಾಣಕುರುಡರಂತೆ ವರ್ತನೆ ಮಾಡುತ್ತಿದ್ದಾರೆ.

ಆಶ್ರಯ ಯೋಜನೆಯಡಿ 30 ವರ್ಷಗಳಿಂದೆ ಕಾಲೋನಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಸುಮಾರು 50 ಕುಟುಂಬಗಳು ವಾಸ ಮಾಡುತ್ತಿವೆ. ಇಲ್ಲಿ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಸೂಕ್ತವಾದ ರಸ್ತೆ ಇಲ್ಲ, ಒಂದು ಬೀದಿಯಲ್ಲಿ ರಸ್ತೆಯಲ್ಲೇ ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಇಲ್ಲಿನ ನಿವಾಸಿಗಳು ಜೀವ ಅಂಗೈಯಲ್ಲಿಟ್ಟುಕೊಂಡು ನಿತ್ಯ ವಿದ್ಯುತ್ ಪರಿವರ್ತಕ ಅಡಿಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಂದು ವಿದ್ಯುತ್ ಕಂಬಗಳು ಚರಂಡಿಯಲ್ಲೇ ಅಳವಡಿಸಲಾಗಿದೆ.

ಇನ್ನೊಂದು ಬೀದಿಯಲ್ಲಿ ವಿದ್ಯುತ್ ಕಂಬಗಳೇ ಇಲ್ಲ, ಇಲ್ಲಿನ‌ ನಿವಾಸಿಗಳು ರಾತ್ರಿವೇಳೆ ಕತ್ತಲಲ್ಲಿ ಓಡಾಡಬೇಕಾಗುತ್ತದೆ. ಇಡೀ ಬೀದಿಗೆ ಒಂದೆರಡು ಕಂಬಗಳು ಮಾತ್ರ ಇದ್ದು, ದೂರದ ವಿದ್ಯುತ್ ಕಂಬಗಳಿಂದ ಮನೆಗಳಿಗೆ ವಿದ್ಯುತ್ ಪಡೆಯಲಾಗಿದೆ. ಚರಂಡಿ‌ ಇದೆ ಆದರೆ, ಆ ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯುವುದಿಲ್ಲ. ಚರಂಡಿಯಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ. ಚರಂಡಿ ನೀರು ಗಬ್ಬೆದ್ದು ನಾರುತ್ತಿದ್ದು, ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸೊಳ್ಳೆಗಳ ಕಡಿತದಿಂದ ಡೆಂಗ್ಯೂ ಜ್ವರದ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ. ಮಳೆ‌ ಕಾರಣದಿಂದ ರಸ್ತೆಗಳೆಲ್ಲವೂ ಕೆಸರುಗದ್ದೆಯಂತಾಗಿವೆ. ಇನ್ನೂ ಹಲವಾರು ಸಮಸ್ಯೆಗಳು ಈ ಕಾಲೋನಿಯಲ್ಲಿ ಇವೆ. ಈ ಕುರಿತು ಗ್ರಾಮ ಪಂಚಾಯಿತಿಯ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಉಪಯೋಗವಾಗಿಲ್ಲ ಎಂದು ಇಲ್ಲಿನ ನಿವಾಸಿಗಳ ಆರೋಪವಾಗಿದೆ.

ಈ ಕಾಲೋನಿಯಲ್ಲಿ ನಾವು ಸುಮಾರು 30 ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ಇಲ್ಲಿ ಸೂಕ್ತವಾದ ರಸ್ತೆಗಳಿಲ್ಲ. ಬೀದಿ ದೀಪಗಳಿಲ್ಲ, ಚರಂಡಿ ಇದ್ದರೂ ಇಲ್ಲದಂತಾಗಿದೆ. ಮಳೆ ಬಂದರೆ ಮನೆಯಿಂದ ಈಚೆ ಬರುವುದಕ್ಕೆ ಆಗುವುದಿಲ್ಲ. ಅಂಗನವಾಡಿ ಕೇಂದ್ರ ಇಲ್ಲ. ಇರುವ ರಸ್ತೆಯಲ್ಲೇ ಎರಡೆರಡು ವಿದ್ಯುತ್ ಪರಿವರ್ತಕ ಹಾಗೂ ಸುಮಾರು 7 ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ನಾವು ಇದರ ಅಡಿಯಲ್ಲೇ ಓಡಾಡುತ್ತಿದ್ದೇವೆ. ಇದನ್ನು ಸ್ಥಳಂತರಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಆದರೆ ಅವರು ಪಂಚಾಯಿತಿ ಅಧಿಕಾರಿಗಳ ಬಳಿ ಕೇಳಿ ಎಂದು ಹೇಳುತ್ತಾರೆ. ಪಂಚಾಯಿತಿ ಅಧಿಕಾರಿಗಳ ಬಳಿ ಕೇಳಿದರೆ ನಮ್ಮಲ್ಲಿ ಅನುದಾನ ಇಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಇದರಿಂದ 30 ವರ್ಷಗಳಿಂದ ನಾವು ತುಂಬಾ ಬೇಸತ್ತಿದ್ದೇವೆ. ದಯಮಾಡಿ ಕಾಲೋನಿಯಲ್ಲಿನ ಸಮಸ್ಯಗಳನ್ನು ಕೂಡಲೇ ಬಗೆಹರಿಸಿಕೊಡಬೇಕು ಎಂದು ಸಿದ್ದರಾಜು ಆಗ್ರಹಿಸಿದ್ದಾರೆ.

ಮಲ್ಲೋಹಳ್ಳಿ 11 ನೇ ಮೈಲಿಯ ಕಾಲೋನಿಯಲ್ಲಿನ ಚರಂಡಿಯಲ್ಲಿ ವಿದ್ಯುತ್ ಕಂಬವಿರುವುದರಿಂದ ಜನಸಾಮಾನ್ಯರಿಗೆ ಇದರಿಂದ ತುಂಬಾ ತೊಂದರೆಯಾಗಿರುತ್ತದೆ. ಆದ್ದರಿಂದ ತಕ್ಷಣ ವಿದ್ಯುತ್ ಕಂಬವನ್ನು ಸ್ಥಳಾಂತರಿಸಿಕೊಡಬೇಕೆಂದು ಕಸನವಾಡಿ ಶಾಖೆಯ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಪತ್ರವನ್ನು ಬರೆಯಲಾಗಿದೆ. ಪಂಚಾಯಿತಿಯಲ್ಲಿ ಅನುದಾನದ ಕೊರತೆ ಇದೆ. ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಲಾಗುವುದು ಎಂದು ಗ್ರಾಮ ಚೆನ್ನಾದೇವಿ ಅಗ್ರಹಾರ ಗ್ರಾಮ‌‌ ಪಂಚಾಯಿತಿ‌ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!