ಅವರೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಮಾಡೋದು ಹೇಗೆ…? ಇಲ್ಲಿದೆ ಮಾಹಿತಿ

ಅವರೆ ಒಂದು ಉಷ್ಣ ವಲಯದ ದ್ವಿದಳ ಧಾನ್ಯ ಬೆಳೆಯಾಗಿದ್ದು, ತರಕಾರಿ ಹಾಗೂ ಕಾಳಿಗಾಗಿ ಬೆಳೆಯಲಾಗುತ್ತದೆ. ನಮ್ಮ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಅವರೆಯನ್ನು ರಾಗಿ ಬೆಳೆಯೊಂದಿಗೆ ಅಂತರ ಬೆಳೆಯಾಗಿ ಬೆಳೆಯುವುದು ವಾಡಿಕೆ.

ಇತ್ತೀಚಿನ ದಿನಗಳಲ್ಲಿ ಕಡಿಮೆ ಅವಧಿಯ ಹಾಗೂ ವರ್ಷವಿಡೀ ಬೆಳೆಯಬಹುದಾದ ತಳಿಗಳನ್ನು ಅಭಿವೃದ್ಧಿಪಡಿಸಿರುವುದರಿಂದ ಅವರೆ ಬೆಳೆಯನ್ನು ಮುಖ್ಯ ಬೆಳೆಯಾಗಿ ಬೆಳೆಯುವುದು ಹೆಚ್ಚಾಗಿ ಕಂಡುಬರುತ್ತಿದೆ.

100ಗ್ರಾಂ ಹಸಿ ಅವರೆ ಕಾಳಿನಲ್ಲಿ 6.7 ಗ್ರಾಂ ಕಾರ್ಬೋಹೈಡ್ರೇಟ್, 3.8ಗ್ರಾಂ ಪ್ರೋಟೀನ್, 1.8 ಗ್ರಾಂ ನಷ್ಟು ನಾರಿನಾಂಶ, 210 ಮಿ.ಗ್ರಾಂ ಕ್ಯಾಲ್ಸಿಯಂ, 6.8 ಮಿ. ಗ್ರಾಂ ರಂಜಕ, 1.7 ಮಿ.ಗ್ರಾಂ ಕಬ್ಬಿಣಾಂಶ ದೊರೆಯುತ್ತದೆ.

ಅವರೆ ತಳಿ ಹಾಗೂ ಅದರ ವಿಶೇಷ ಗುಣ

*ತಳಿ- ಹೆಚ್.ಎ3
ಬಿತ್ತನೆ ಕಾಲ- ಮುಂಗಾರು (ಆಗಸ್ಟ್), ಹಿಂಗಾರು (ಅಕ್ಟೋಬರ್)
ಕಾಲಾವಧಿ- 90-100
ಇಳುವರಿ ಧಾನ್ಯ ಕಾಳು- 3-4
ವಿಶೇಷ ಗುಣ- ವರ್ಷವಿಡೀ ಬೆಳೆಯಬಹುದು

*ತಳಿ ಹೆಸರು-ಹೆಚ್.ಎ4
ಬಿತ್ತನೆ ಕಾಲ- ಮುಂಗಾರು (ಆಗಸ್ಟ್), ಹಿಂಗಾರು (ಅಕ್ಟೋಬರ್)
ಕಾಲಾವಧಿ- 95-100
ಇಳುವರಿ ಧಾನ್ಯ ಕಾಳು- ಹಸಿಕಾಯಿ 12-15
ವಿಶೇಷ ಗುಣ- ವರ್ಷವಿಡೀ ಬೆಳೆಯಬಹುದು

*ತಳಿ ಹೆಸರು-ಹೆಚ್.ಎ5
ಬಿತ್ತನೆ ಕಾಲ- ಬೇಸಿಗೆ(ಫೆಬ್ರವರಿ-ಮಾರ್ಚ್)
ಕಾಲಾವಧಿ-90-95

ನೀರು ಸರಾಗವಾಗಿ ಬಸಿದು ಹೋಗುವಂತಹ ಸಾಮರ್ಥ್ಯ ಹೊಂದಿರುವ ಭೂಮಿ ಉತ್ತಮ. ಬಿತ್ತನೆಗೆ ಮುಂಚೆ ಜೀವಾಣು ಗೊಬ್ಬರಗಳಿಂದ ಲೇಪನ ಮಾಡಿ ನೆರಳಿನಲ್ಲಿ ಒಣಗಿಸಿದ ನಂತರ ಬಿತ್ತನೆ ಮಾಡುವುದು. ಈ ರೀತಿ ಮಾಡುವುದರಿಂದ ರಾಸಾಯನಿಕ ಗೊಬ್ಬರಗಳಾದ ಯೂರಿಯಾ ಮತ್ತು ಡಿಎಪಿಯನ್ನು ಕಡಿಮೆಗೊಳಿಸಬಹುದು.

ಬಿತ್ತನೆ ಮಾಡುವ ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಕೊಟ್ಟಿಗೆ ಗೊಬ್ಬರವನ್ನು ಬಿತ್ತನೆಗೆ 2-3ವಾರಗಳ‌ ಮೊದಲು ಮಣ್ಣಿಗೆ ಸೇರಿಸುವುದು. ಬಿತ್ತನೆ ಸಮಯದಲ್ಲಿ ರಾಸಾಯನಿಕ ಗೊಬ್ಬರಗಳೆಲ್ಲವನ್ನು ಸಾಲಿನಲ್ಲಿ ಕೊಟ್ಟು ಮಣ್ಣಿನಲ್ಲಿ ಬೆರೆಸುವುದು.

ಬಿತ್ತನೆ ವಿಧಾನ

ಒಂದೂವರೆಯಿಂದ ಎರಡು ಅಡಿ ಅಂತರದ ಸಾಲುಗಳಲ್ಲಿ ಬೀಜದಿಂದ ಬೀಜಕ್ಕೆ ಅರ್ಧ ಅಡಿ ಅಂತರದಂತೆ ಬಿತ್ತನೆ ಮಾಡುವುದು. ಬೀಜವನ್ನು1-2 ಅಂಗುಲಕ್ಕಿಂತ ಹೆಚ್ಚಿನ ಆಳಕ್ಕೆ ಬೀಳದಂತೆ ಬಿತ್ತನೆ ಮಾಡಬೇಕು.

ಅಂತರ ಬೇಸಾಯ

ಬಿತ್ತಿದ ಸುಮಾರು 30-35 ದಿನಗಳಲ್ಲಿ ಸಸಿಗಳಿಗೆ ಮಣ್ಣು ಏರು ಹಾಕಬೇಕಾಗುತ್ತದೆ. 2-3‌ ಬಾರಿ ಅಂತರ ಬೇಸಾಯ ಮಾಡುವುದರಿಂದ ‌ಸಸಿಗಳು ಮುಂದೆ ಬೀಜಕೋಶಗಳ ಭಾರದಿಂದ ನೆಲಕ್ಕೆ ಬೀಳುವುದನ್ನು ತಪ್ಪಿಸಬಹುದು.

ನೀರು ನಿರ್ವಹಣೆ

ಮಣ್ಣಿನ ಗುಣಗಳಿಗನುಸಾರವಾಗಿ ಅಗತ್ಯಕ್ಕೆ ತಕ್ಕಂತೆ ನೀರನ್ನು ಹಾಯಿಸಬೇಕು. ಹೆಚ್ಚಿನ ಇಳುವರಿ ಪಡೆಯಲು ಬೆಳೆಯ ಮುಖ್ಯ ಹಂತಗಳಾದ ಬಿತ್ತನೆ ಸಮಯ, ಮೊಗ್ಗಾಗುವಾಗ, ಹೂವು ಹಾಗೂ ಕಾಳು ಕಟ್ಟುವಾಗ ನೀರಿನಲ್ಲಿ ಅಭಾವ ಆಗದಂತೆ ನೋಡಿಕೊಳ್ಳಬೇಕು.

ಸಸ್ಯ ಹೇನುಗಳು ಚಿಗುರು ಎಲೆ, ಹೂ, ಮೊಗ್ಗು, ಎಳೆ ಕಾಯಿಗಳಿಂದ ರಸ ಹೀರುತ್ತವೆ. ಎಲೆಗಳ ಮೇಲೆ ಅಂಟು ದ್ರಾವಣ, ಚೀಕು ಕಾಳುಗಳು ಬರುತ್ತದೆ ಗಿಡಗಳಲ್ಲಿ ಕಪ್ಪು ಬೂಷ್ಟೂ ಸಹ ಬರುತ್ತದೆ. ಕಾಯಿಗಳ ಮೇಲೆ ಸಣ್ಣ ಚುಕ್ಕೆಯ ರೀತಿ ರಂಧ್ರಗಳು ಮೂಡುತ್ತವೆ. ಇದರ ಹತೋಟಿಗೆ ಫೆನ್ ವೆಲರೇಟ್ ಶೇ.0.4ಡಿ ಅಥವಾ ಮಾಲಾಥಿಯಾನ್ ಶೇ.5ಡಿಯನ್ನು ಬೆಳಗಿನ ಹೊತ್ತಿನಲ್ಲಿ ಗಿಡಗಳ ಮೇಲೆ ಧೂಳೀಕರಿಸಬೇಕು.

ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಾಣುತ್ತವೆ. ಈ ರೋಗವನ್ನು ಹತೋಟಿಗೆ ತರಲು ಮ್ಯಾಂಕೋಜೆನ್ 75 ಡಬ್ಲ್ಯೂಪಿನ್ನು 2.5ಗ್ರಾಂ ಪ್ರತಿ ಲೀಟರ್ ಗೆ ಅಥವಾ ಕಾರ್ಬೆಂಡಜಿಂ 50 ಡಬ್ಲ್ಯೂ ಪಿ 1.0 ಗ್ರಾಂ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಎಕರೆಗೆ 200 ಲೀ. ಸಿಂಪಡಣೆ ದ್ರಾವಣವನ್ನು ಬಳಸಬೇಕು.

ನಂಜುರೋಗ ಮುಂಗಾರಿನಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ಎಲೆಗಳ‌ ಕಾಂತಿ ಹೀನಗೊಳಿಸುತ್ತದೆ ಹಾಗೂ ಹೂವು ಸರಿಯಾಗಿ ಬಿಡುವುದಿಲ್ಲ. ಹತೋಟಿಗೆ ಬರದಿದ್ದಲ್ಲಿ ರೋಗ ಪೀಡಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು.

ಕಾಳಿಗಾಗಿ 2-3 ದಿವಸ ಒಣಗಿಸಿದ ನಂತರ ಒಕ್ಕಣೆ ಮಾಡಬೇಕು. ಒಕ್ಕಣೆಯ ನಂತರ ದಾಸ್ತಾನು ಮಾಡುವ ಮೊದಲು ಬೀಜದಲ್ಲಿನ ತೇವಾಂಶ ಶೇ.8-10ಕ್ಕಿಂತ ಕಡಿಮೆಯಿರುವಂತೆ ನೋಡಿಕೊಳ್ಳಬೇಕು ಎಂದು ಕೃಷಿ ತಜ್ಞರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಮೀಪದ ಕೃಷಿ ವಿಜ್ಞಾನ ಕೇಂದ್ರ, ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ.

Leave a Reply

Your email address will not be published. Required fields are marked *