ಅಲ್ಪಸಂಖ್ಯಾತರ ಅನುದಾನ ಬಹುಸಂಖ್ಯಾತರ ಪಾಲಾದ ಆರೋಪ: ನಗರಸಭೆ ಎದುರು ಕಾಂಗ್ರೆಸ್ ಪ್ರತಿಭಟನೆ

ದೊಡ್ಡಬಳ್ಳಾಪುರ : ನಗರಸಭಾ ವ್ಯಾಪ್ತಿಯಲ್ಲಿ ಮಂಜೂರಾಯಾಗಿರುವ ಕಾಮಗಾರಿಗಳನ್ನು ಅಲ್ಪಸಂಖ್ಯಾತ ಜನರು ವಾಸವಿಲ್ಲದೇ ಇರುವ ಕಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ವತಿಯಿಂದ ನಗರಸಭೆ ಮುಂಭಾಗ ಪ್ರತಿಭಟನೆ ನೆಡೆಸಲಾಯಿತು.

ನಗರಸಭಾ ಸದಸ್ಯ ಶಿವಶಂಕರ್ ಮಾತನಾಡಿ, ತಾಲ್ಲೂಕಿನ ನಗರಸಭಾ ವ್ಯಾಪ್ತಿಯಲ್ಲಿ ಕೆ.ಆರ್.ಐ.ಡಿ.ಎಲ್. ಸಂಸ್ಥೆಯಿಂದ ಅಲ್ಪಸಂಖ್ಯಾತರಿಗೆ ಮೂರು ಕೋಟಿ ಅನುದಾನವನ್ನು ಮಂಜೂರು ಮಾಡಿರುವುದು ಸರಿಯಷ್ಟೆ. ಆದರೆ, ಕಾಮಗಾರಿಗಳು ಮಾತ್ರ ಅಲ್ಪಸಂಖ್ಯಾತ ಜನ ವಾಸ ಮಾಡದೇ ಇರುವ ಸ್ಥಳಗಳಲ್ಲಿ ಕಾಮಗಾರಿಗಳು ಮಾಡುತ್ತಿದ್ದು, ಅಲ್ಪಸಂಖ್ಯಾತ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ ಎಂದು ಆರೋಪಿಸಿದರು.

ಈ ಕಾಮಗಾರಿಗಳಿಗೆ ನಗರಸಭೆಯಿಂದ ಸಂಬಂಧಪಟ್ಟ ಗುತ್ತಿಗೆದಾರರು ಯಾವುದೇ ರೀತಿಯ ಎನ್.ಓ.ಸಿ.ಯನ್ನು ಪಡೆದುಕೊಂಡಿರುವುದಿಲ್ಲ. ಅಷ್ಟೇ ಅಲ್ಲದೇ ಈ ಅನುದಾನದಲ್ಲಿ ಮಂಜೂರು ಆಗಿರುವಂತೆ ಆಂದಾಜು ಪಟ್ಟಿಯಂತೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸಂಸ್ಥೆಯೊಂದಿಗೆ ಚರ್ಚಿಸಿ ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.

ಯಾವುದೇ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಬೇಕಾದರೇ ಶಿಷ್ಟಾಚಾರ ಪಾಲಿಸಬೇಕು. ಆದರೆ, ಇದು ಯಾವುದೂ ನಡೆಯುತ್ತಿಲ್ಲ. ಗುತ್ತಿಗೆದಾರರು ಒಂದು ರೀತಿಯ ಗೂಂಡಾ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಂತರ ಕಾಂಗ್ರೆಸ್ ಮುಖಂಡ ಮಂಜುನಾಥ್ ಮಾತನಾಡಿ, ಕೆ.ಆರ್.ಐ.ಡಿ.ಎಲ್ ನಡೆಸುತ್ತಿರುವ ಕಾಮಗಾರಿ ಕಳಪೆಯಿಂದೆ ಕೂಡಿದೆ, ಅಲ್ಪಸಂಖ್ಯಾತರು ವಾಸ ಮಾಡದ ಜಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತರ ಗಮನಕ್ಕೆ ತಂದೆವು, ಆದರೆ, ಅವರು ಇದು ನನ್ನ ಗಮನಕ್ಕೆ ಬಂದಿಲ್ಲ, ಗುತ್ತಿಗೆದಾರರು ಅಂದಾಜು ಪಟ್ಡಿಯೇ ನೀಡಿಲ್ಲ, ನೀವು ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಕೇಳಬೇಕು ಎಂದು ಹೇಳುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.

ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಫೋನ್ ಕರೆ ಮಾಡಿ ಮಾತಾಡಿದಾಗ ಅವರು ಯಾವುದೇ ರೀತಿಯ ನಿಖರ ಮಾಹಿತಿ ನೀಡದೇ ಧಮ್ಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಚುಂಚೇಗೌಡ, ಸದಸ್ಯರಾದ ರಾಮಕೃಷ್ಣಯ್ಯ, ಅಂಜನಮೂರ್ತಿ, ನಗರಸಭಾ ಸದಸ್ಯರಾದ ಅಲ್ತಾಫ್, ರೂಪಿಣಿ ಮಂಜುನಾಥ್, ರಜನಿ ಸುಬ್ರಮಣಿ, ನಾಗಮಣಿ, ಮಂಜುಳಾ, ಚಂದ್ರಮೋಹನ್, ಆನಂದ್, ನಾಗರಾಜ್, ಶಿವಣ್ಣ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೈರೇಗೌಡ, ಗ್ರಾಮಾಂತರ ಅಧ್ಯಕ್ಷ ಅಪ್ಪಿ ವೆಂಕಟೇಶ್, ನಗರ ಘಟಕದ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಮುಖಂಡರಾದ, ಫಯಾಜ್ ಅಖಿಲೇಶ್, ರಾಜಘಟ್ಟ ರವಿ, ವಿಶ್ವಾಸ್ ಗೌಡ, ಶ್ರೀನಗರ ಬಶೀರ್, ಜನಪರ ಮಂಜು ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *