ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮ ಹೊರಜಗತ್ತಿಗೆ ಒಂದು ಸಾಮಾನ್ಯ ಗ್ರಾಮವಷ್ಟೇ. ಆದರೆ, ವ್ಯವಹಾರದಲ್ಲಿ ಈ ಗ್ರಾಮದ ಹೆಸರು ವಿಶ್ವದ ಹಲವು ರಾಷ್ಟ್ರಗಳಲ್ಲಿ ತನ್ನ ಹೆಗ್ಗುರುತು ಮೂಡಿಸಿದೆ. ಅಲಿಪುರದ ಹಲವು ಉದ್ಯಮಿಗಳು ಹರಳು ಕಲ್ಲಿನ (ಜೆಮ್ಸ್ ಸ್ಟೋನ್ಸ್) ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕರ್ನಾಟಕದ ಮಟ್ಟಿಗೆ ಹೆಚ್ಚು ಶಿಯಾ ಸಮುದಾಯದ ಮುಸ್ಲಿಮರನ್ನು ಹೊಂದಿರುವ ಈ ಗ್ರಾಮ, ಇರಾನ್ ಜತೆಗೆ ದಶಕಗಳಿಂದ ನಂಟು ಇಟ್ಟುಕೊಂಡಿದೆ. ಧಾರ್ಮಿಕ ಶಿಕ್ಷಣ ಮತ್ತು ವ್ಯವಹಾರದ ಸಂಪರ್ಕ ಇಟ್ಟುಕೊಂಡಿರುವ ಈ ಗ್ರಾಮಕ್ಕೆ ಇರಾನ್ ಪರಮೋಚ್ಛ ನಾಯಕ ಅಯಾತೊಲ್ಲಾ ಖಮೇನಿ 1986 ರಲ್ಲಿ ಭೇಟಿ ನೀಡಿದ್ದರು. ಈ ಕಾರಣದಿಂದ ಅಲಿಪುರವನ್ನು ʼಬೇಬಿ ಆಫ್ ಇರಾನ್ʼ (ಇರಾನ್‌ನ ಮಗು) ಎಂಬ ಅನ್ವರ್ಥನಾಮದಿಂದ ಕರೆಯಲಾಗುತ್ತಿದೆ.
ಥೈಲ್ಯಾಂಡ್, ಇಂಡೋನೇಷ್ಯಾದಿಂದ ಹರಳಿನ ಕಲ್ಲು ಖರೀದಿಸುವ ಅಲಿಪುರದ ಉದ್ಯಮಿಗಳು ಅದನ್ನು ಪಾಲಿಶ್ ಮಾಡಿ, ವಿವಿಧ ವಿನ್ಯಾಸಗಳಲ್ಲಿ ಸಿದ್ಧಪಡಿಸುತ್ತಾರೆ. ಹೀಗೆ ಸಿದ್ಧವಾದ ಹರಳಿನ ಸ್ಟೋನ್ ಅನ್ನು ಚಿನ್ನಾಭರಣ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಥೈಲ್ಯಾಂಡ್‌ನಲ್ಲಿರುವ ಜೆಮ್ಸ್ ಮಾರುಕಟ್ಟೆಯಲ್ಲಿ ಅಲಿಪುರದ ವರ್ತಕರು ವಹಿವಾಟು ನಡೆಸುತ್ತಿದ್ದಾರೆ. 20 ವರ್ಷದ ಹಿಂದೆ ಗ್ರಾಮದಲ್ಲಿಯೇ ಹರಳಿನ ಪಾಲಿಷಿಂಗ್ ಕೈಗಾರಿಕೆಗಳಿದ್ದವು. ಥೈಲ್ಯಾಂಡ್, ಇಂಡೊನೇಷಿಯಾ ಹಾಗೂ ರಾಜಸ್ಥಾನದ ಜೈಪುರದಿಂದ ಹರಳಿನ ಸ್ಟೋನ್ ಖರೀದಿಸಿ ತಂದು ಇಲ್ಲಿಯೇ ಪಾಲಿಶಿಂಗ್ ಮಾಡಿ ಬೇರೆ ರಾಷ್ಟ್ರಗಳಿಗೆ ಮಾರಾಟ ಮಾಡುತ್ತಿದ್ದರು. ಈಗ ತಂತ್ರಜ್ಞಾನ ಹೆಚ್ಚಿದಂತೆಲ್ಲಾ ವಹಿವಾಟು ಕ್ಷೀಣಿಸಿದೆ. ಹಿಂದಿನಿಂದ ಇದೇ ವೃತ್ತಿಯಲ್ಲಿ ತೊಡಗಿಸಿಕೊಂಡವರು ಮಾತ್ರ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಅಲಿಪುರ ಗ್ರಾಮಸ್ಥ ಮಿರ್ ತಸ್ವೀರ್ ಅಬ್ಬಾಸ್ ತಿಳಿಸಿದರು.
ಅಲಿಪುರದ ಉದ್ಯಮಿಗಳು ಚಿನ್ನ, ವಜ್ರ ವ್ಯಾಪಾರದಲ್ಲೂ ತೊಡಗಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಗ್ರಾಮದ ಮುಖಂಡರು ಈ ಮಾತುಗಳನ್ನು ಅಲ್ಲಗಳೆದಿದ್ದಾರೆ.
ಗ್ರಾಮದಲ್ಲೇ ವೈವಾಹಿಕ ಸಂಬಂಧ
ಅಲಿಪುರದ ಮುಸ್ಲಿಮರು ವೈವಾಹಿಕ ಸಂಬಂಧಗಳನ್ನು ಗ್ರಾಮದಲ್ಲೇ ಬೆಳೆಸುತ್ತಾರೆ. ಶೇ.95 ಮದುವೆ ಸಂಬಂಧಗಳು ಗ್ರಾಮದಲ್ಲೇ ನಡೆಯುವುದರಿಂದ ಇಲ್ಲಿನ ಎಲ್ಲರೂ ಒಂದಲ್ಲ, ಒಂದು ರೀತಿ ಸಂಬಂಧಿಕರೇ ಆಗಿದ್ದಾರೆ.
ಉಳಿದ ಶೇ.5ರಷ್ಟು ಜನರು ಬೆಂಗಳೂರು, ತುಮಕೂರು, ಕೊರಟಗೆರೆ, ಮೈಸೂರು, ಪಿರಿಯಾ ಪಟ್ಟಣ, ಹೊಳೆ ನರಸೀಪುರ, ಆನೇಕಲ್, ನೆಲಮಂಗಲ, ದೊಡ್ಡಬಳ್ಳಾಪುರದಲ್ಲಿ ಮದುವೆ ಸಂಬಂಧ ಹೊಂದಿದ್ದಾರೆ.
ಅಲಿಪುರ ಅಂಜುಮನ್ ಇ ಜಾಫರಿಯಾ ಸಮಿತಿಯೇ ಸುಪ್ರೀಂ
ಅಲಿಪುರದಲ್ಲಿರುವ ಅಂಜುಮನ್-ಇ-ಜಾಫರಿಯಾ ಅಲಿಪುರದ ಪರಮೋಚ್ಛ ಸಮಿತಿ. ಸಮಿತಿಯಲ್ಲಿ 30 ಮಂದಿ ಸದಸ್ಯರಿದ್ದಾರೆ. ಸಲಹಾ ಮಂಡಳಿಯಾಗಿರುವ ಅಲ್ ಬಲಘ್ ಫೌಂಡೇಷನ್ ಅಡಿಯಲ್ಲಿ ಅಂಜುಮನ್- ಇ-ಜಾಫರಿಯಾ ಕಾರ್ಯ ನಿರ್ವಹಿಸುತ್ತಿದೆ.
ಅಲಿಪುರದ ಪರಮೋಚ್ಛ ಮಂಡಳಿಯಡಿಲ್ಲಿ ದರ್-ಉಜ್-ಝೆಹ್ರಾ ಸಾಮಾಜಿಕ ಕಲ್ಯಾಣ ಟ್ರಸ್ಟ್, ಇದಾರ ಇ-ಸಜ್ಜಾದಿಯಾ ವೆಲ್ಫೇರ್ ಅಸೋಸಿಯೇಷನ್, ಇಮಾಮ್ ಖೊಮೇನಿ ಮೆಡಿಕಲ್ ಟ್ರಸ್ಟ್, ಬಝ್ಮಿಇ ಮೀಸಂ, ಅಲ್ ಅಬ್ಬಾಸ್ ಎಜುಕೇಶನ್ ಅಂಡ್ ವೆಲ್ಫೇರ್ ಟ್ರಸ್ಟ್, ಅಲಿಪುರ ಎಜುಕೇಷನಲ್ ಟ್ರಸ್ಟ್, ಅಲಿ ಚಾನಲ್, ಕರ್ಬಾಲ ಇ ಅಲಿಪುರ್ ಮ್ಯಾನೇಜ್‌ಮೆಂಟ್ ಕಮಿಟಿ, ಆಲ್ ಅಲೀಪುರ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್, ಇದಾರ ಇ ಕಂಜೀಜನ್ ಇ ಫಾತಿಮಾ ಝೆಹ್ರಾ, ಅಂಜುಮನ್ ಇ ಸನಿ ಇ ಝೆಹ್ರಾ, ಬಝ್ಮ್ ಇ ಝೆಹ್ರಾ, ಆಲ್ ದ ಆರ್ಗನೈಸೇಷನ್ಸ್ ಅಸೋಸಿಯೇಷನ್ ಕಾರ್ಯ ನಿರ್ವಹಿಸುತ್ತಿವೆ.
ಗ್ರಾಮದಲ್ಲಿ ಯಾವುದೇ ಧಾರ್ಮಿಕ ಹಾಗೂ ಇತರೆ ಒಟ್ಟಾರೆ ನಿರ್ಣಯ ಕೈಗೊಳ್ಳುವಲ್ಲಿ ಅಂಜುಮನ್ ಸಮಿತಿ ನಿರ್ಣಯವೇ ಅಂತಿಮವಾಗಿದೆ.
ಪೊಲೀಸ್ ಠಾಣೆ, ಕೋರ್ಟ್‌ಗೆ ಹೋಗುವುದು ವಿರಳ
ಗ್ರಾಮದಲ್ಲಿ ಯಾವುದೇ ಕೌಟುಂಬಿಕ ದೌರ್ಜನ್ಯ, ವಿಚ್ಛೇಧನ ಪ್ರಕರಣಗಳು ನಡೆದರೂ ಇಲ್ಲಿನವರು ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲು ಹತ್ತುವುದು ವಿರಳ. ಅಂಜುಮನ್-ಇ-ಜಾಫರಿಯಾ ಸಮಿತಿಯೇ ಬಹುತೇಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಿದೆ.
ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು ಚಿಂತನೆ
ಸುಮಾರು 30 ಸಾವಿರ ಜನಸಂಖ್ಯೆ ಹೊಂದಿರುವ ಅಲಿಪುರವು ಗ್ರಾಮ ಪಂಚಾಯ್ತಿಯಾಗಿದ್ದು, ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದೆ. ಇದರಿಂದ ಗ್ರಾಮವು ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿದೆ.
ಗ್ರಾಮದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಸರ್ಕಾರದ ಅನುದಾನಕ್ಕೆ ಕಾಯದೇ ಸಮಿತಿಯೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದೆ ಎಂದು ಅಂಜುಮನ್ ಸಮಿತಿ ಸದಸ್ಯ ಮಿರ್ ಅಬ್ಬಾಸ್ ಅಲಿ ತಿಳಿಸಿದರು.
ಇಸ್ರೇಲ್-ಇರಾನ್ ಯುದ್ಧದಿಂದ ಅಲಿಪುರ ತಲ್ಲಣ
ಅಲೀಪುರ – ಇರಾನ್ ಮಧ್ಯೆ ದಶಕಗಳ ಕಳ್ಳುಬಳ್ಳಿಯ ಸಂಬಂಧವಿದೆ. ಇರಾನ್ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು ಗ್ರಾಮಕ್ಕೆ ಭೇಟಿ ನೀಡಿದಾಗಿನಿಂದ ಇರಾನ್ ಜತೆಗಿನ ಸಂಬಂಧ ಗಾಢವಾಗಿದೆ. ಪ್ರಸ್ತುತ, ಇಸ್ರೇಲ್ ಹಾಗೂ ಇರಾನ್ ಮಧ್ಯೆ ಕದನ ನಡೆಯುತ್ತಿದ್ದು, ಅಲಿಪುರದ ಸುಮಾರು 250-300 ಮಂದಿ ಟೆಹ್ರಾನ್ ಹಾಗೂ ಇತರ ನಗರಗಳಲ್ಲಿ ಸಿಲುಕಿಕೊಂಡಿದ್ದಾರೆ.
ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದ್ದರೆ, ಅಲಿಪುರದ ಜನರಲ್ಲಿ ತಲ್ಲಣ ಶುರುವಾಗಿದೆ. ಅಲ್ಲಿ ಕ್ಷಿಪಣಿ ಬಿದ್ದರೆ ಇಲ್ಲಿಯವರ ಹೃದಯ ಬಡಿತ ಏರುತ್ತದೆ. ಕ್ಷಣ ಕ್ಷಣದ ಮಾಹಿತಿಯಿಂದ ದುಗುಡವೂ ಹೆಚ್ಚುತ್ತಿದೆ. ಸದ್ಯ ಅಲಿಪುರ ಮೂಲದ ಎಲ್ಲರನ್ನು ಸುರಕ್ಷಿತ ಸ್ಥಳಗಳಲ್ಲಿ ಇರಿಸಿದ್ದು, ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಇರಾನ್‌ನಲ್ಲಿ ಸಿಲುಕಿದವರು ಎಷ್ಟು ಮಂದಿ ?
ಇರಾನ್‌ನ ಟೆಹ್ರಾನ್‌ನಲ್ಲಿ ಅಲಿಪುರ ಗ್ರಾಮದ 15 ಮಂದಿ ವಿದ್ಯಾರ್ಥಿಗಳು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು 50 ಕುಟುಂಬಗಳು ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಯಾತ್ರೆ, ವ್ಯವಹಾರಗಳಿಗಾಗಿ ಹೋದವರು ಸೇರಿ ಸುಮಾರು 250-300 ಮಂದಿ ಇರಾನ್‌ನಲ್ಲಿದ್ದಾರೆ. ಅವರನ್ನು ಯುದ್ಧಪೀಡಿತ ಟೆಹ್ರಾನ್‌ನಿಂದ ಮಷದ್ ಹಾಗೂ ಖೋಮ್ ನಗರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಂಜುಮನ್ ಜಾಫರಿಯಾ ಸಮಿತಿ ಸದಸ್ಯ ಮಿರ್ ಶಬಾಹತ್ ಹುಸೇನ್ ತಿಳಿಸಿದರು.
ಗ್ರಾಮದಲ್ಲಿ ಭೂಮಿ, ಮನೆ ಕಡ್ಡಾಯ
ಅಲಿಪುರ ಸಾಕಷ್ಟು ಉದ್ಯಮಿಗಳು ವಿದೇಶಗಳಲ್ಲಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರೂ ಗ್ರಾಮದಲ್ಲಿ ಮನೆ ಹಾಗೂ ಭೂಮಿ ಇರಲೇಬೇಕು. ಅಂಜುಮನ್ ಸಮಿತಿ ಸದಸ್ಯ ಮಿರ್ ಶಬಾಹತ್ ಹುಸೇನ್ ಹೇಳುವಂತೆ, ಬೇರೆ ಬೇರೆ ದೇಶಗಳಲ್ಲಿ ವ್ಯವಹಾರ ನಡೆಸಿದರೂ ಕೊನೆಯದಾಗಿ ಹಳ್ಳಿಗೇ ಬರಬೇಕು. ಹಾಗಾಗಿ ಪ್ರತಿಯೊಬ್ಬರೂ ಮನೆ ಕಟ್ಟಿಕೊಂಡಿದ್ದಾರೆ. ಅಲ್ಲದೇ ಭೂಮಿಯನ್ನು ಹೊಂದಿದ್ದಾರೆ ಎಂದರು.
ಝಕಾತ್ (ದಾನ) ಕಡ್ಡಾಯ
ಇಸ್ಲಾಂ ಧರ್ಮದಲ್ಲಿ ಝಕಾತ್ ಒಂದು ಕಡ್ಡಾಯ ದಾನವಾಗಿದೆ. ವ್ಯಕ್ತಿಯು ತಾನು ಗಳಿಸಿದ ಸಂಪತ್ತಿನಲ್ಲಿ ಒಂದಷ್ಟು ಭಾಗವನ್ನು ಅಗತ್ಯವಿರುವವರಿಗೆ ಸಹಾಯ ಮಾಡಲು ವಿನಿಯೋಗಿಸಲಾಗುತ್ತದೆ. ಅದೇ ರೀತಿ ಅಲೀಪುರದಲ್ಲಿ ನೆಲೆಯೂರಿರುವ ಉದ್ಯಮಿಗಳು ತಮ್ಮ ಆದಾಯದ ಕೊಂಚ ಭಾಗವನ್ನು ದಾನ ಧರ್ಮಗಳಿಗೆ ಮೀಸಲಿಡುತ್ತಾರೆ. ಇದನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ ಎಂದು ಅಂಜುಮನ್ ಸಮಿತಿ ಸದಸ್ಯರು ಹೇಳಿದರು.