ಅಲಿಪುರ Part-3: ಅಲಿಪುರದಲ್ಲಿ ರಾಜಕೀಯ ಹಿನ್ನೆಲೆ ಹೇಗಿದೆ….?

ಅಲಿಪುರದಲ್ಲಿ ಶಿಯಾ ಮುಸ್ಲಿಮರ ರಾಜಕೀಯ ಪ್ರವೇಶ ಅಷ್ಟಕ್ಕಷ್ಟೇ. ವ್ಯವಹಾರ, ಉದ್ಯಮ ಹಾಗೂ ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಿಕೊಂಡಿರುವ ಇಲ್ಲಿನ ಜನರು ರಾಜಕೀಯಕ್ಕೆ ಹೆಚ್ಚು ಆಸಕ್ತಿ ತೋರುತ್ತಿಲ್ಲ.

ಜೆಡಿಎಸ್ ನಲ್ಲಿ ಮಿರ್ ರೋಷನ್ ಅಬ್ಬಾಸ್, ಕಾಂಗ್ರೆಸ್ ಪಕ್ಷದಲ್ಲಿ ಮಿರ್ ರೋಷನ್ ಅಲಿ ಅವರು ಸಂಘಟನಾತ್ಮಕ ಹುದ್ದೆ ಹೊಂದಿದ್ದರು. ಉಳಿದಂತೆ ಯಾರೂ ಕೂಡ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಎರಡು-ಮೂರು ಬಾರಿ ಅಲಿಪುರಕ್ಕೆ ಆಗಮಿಸಿದ್ದರು.

ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 29 ಸ್ಥಾನಗಳಿದ್ದು,  ಅದರಲ್ಲಿ 25 ಸ್ಥಾನಗಳು ಶಿಯಾ ಮುಸ್ಲಿಂ ಅವರದು, ಉಳಿದ 4 ಸ್ಥಾನಗಳು ಹಿಂದುಗಳದ್ದು, ಈ ಹಿನ್ನೆಲೆ ಕೋರಂ ಮುಸ್ಲಿಂ ಅವರದ್ದು ಇರುವುದರಿಂದ ಅಂಜುಮನ್‌ ಸಮಿತಿ ಅಣತಿ ಮೇರೆಗೆ ಕೆಲಸ ಕಾರ್ಯಗಳು ನಡೆಯುತ್ತವೆ. ಅಂಜುಮನ್‌ ಸಮಿತಿಯ ನಿರ್ಧಾರವನ್ನು ಯಾರು ಧಿಕ್ಕರಿಸುವುದಿಲ್ಲ.

ಶಿಯಾ ಮುಸ್ಲಿಮರಿಗೆ ಪ್ರತ್ಯೇಕ ಕೇಬಲ್ ಚಾನೆಲ್

ಅಲಿಪುರದಲ್ಲಿ ಶಿಯಾ ಮುಸ್ಲಿಮರು ಶೇ 90ರಷ್ಟು ಇರುವುದರಿಂದ ಅಂಜುಮನ್‌ ಜಾಫರಿಯಾ ಸಮಿತಿ ಗ್ರಾಮಕ್ಕಾಗಿಯೇ ಪ್ರತ್ಯೇಕ ಕೇಬಲ್ ಚಾನೆಲ್ ಆರಂಭಿಸಿದೆ.

‘ಅಲಿ ಟಿವಿ’ ಹೆಸರಿನಲ್ಲಿ ಚಾನೆಲ್‌ನಲ್ಲಿ ಮಸೀದಿಯಲ್ಲಿ ನಿತ್ಯ ಪ್ರಾರ್ಥನೆ, ವಿಶೇಷ ಆಚರಣೆಗಳು, ಕುರಾನ್ ಪಠಣ, ಧಾರ್ಮಿಕ ಗುರುಗಳ ಸಂದೇಶ ಹಾಗೂ ಗ್ರಾಮಕ್ಕೆ ಭೇಟಿ ನೀಡುವ ಅತಿಥಿಗಳ ಮಾತು ಇರಲಿದೆ. ಪ್ರತಿಯೊಬ್ಬರೂ ಕೇಬಲ್ ಚಾನೆಲ್ ಗೆ ಮಾಸಿಕ 350ರೂ. ಪಾವತಿಸುತ್ತಾರೆ. ಚಾನೆಲ್‌ನಲ್ಲಿ ಯಾವುದೇ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ. ಅಲಿ ಟಿವಿ ಹೊರತುಪಡಿಸಿ ಬೇರಾವ ಚಾನೆಲ್ ಹಾಕಿಸಿಕೊಳ್ಳಬಾರದು ಎಂಬ ನಿರ್ಬಂಧವಿಲ್ಲ ಎಂದು ಮಿ‌ರ್ ತಸ್ವೀರ್ ಅಬ್ಬಾಸ್ ತಿಳಿಸಿದರು.

ಕಳ್ಳಸಾಗಾಣಿಕೆ ಆರೋಪವೂ ಇದೆ

2009 ರಲ್ಲಿ ಚಿನ್ನ ಹಾಗೂ ಬೆಲೆ ಬಾಳುವ ಹರಳುಗಳನ್ನು ಕಳ್ಳಸಾಗಣಿಕೆ ಮಾಡುತ್ತಿದ್ದ ಆರೋಪದ ಮೇಲೆ ಅಲಿಪುರದ ಆರು ಮಂದಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು. “ಅಲಿಪುರದಲ್ಲಿ ಇತ್ತೀಚೆಗೆ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ” ಎಂದು ಮಂಚೇನಹಳ್ಳಿ ಪೊಲೀಸ್‌ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ನರಸಿಂಹಮೂರ್ತಿ ತಿಳಿಸಿದರು.

ಅಲಿಪುರ ಗ್ರಾಮದಲ್ಲಿ ಸುನ್ನಿ ಮುಸ್ಲಿಮರು ಕೂಡ ಬೆರಳೆಣಿಕೆ ಕುಟುಂಬಗಳಿವೆ. ಆದರೆ, ಹಿಂದೂ ಮತ್ತು ಮುಸ್ಲಿಮರು ಅನೋನ್ಯದಿಂದಲೇ ಬದುಕು ಸಾಗಿಸುತ್ತಾರೆ. ಕಳೆದ ಎರಡು ವರ್ಷದ ಹಿಂದೆ ಬಾಹ್ಯ ಶಕ್ತಿಗಳಿಂದ ಸಾಮರಸ್ಯ ಕದಡಿದ್ದ ಪ್ರಯತ್ನ ನಡೆದರೂ ಗ್ರಾಮಸ್ಥರು ಅದಕ್ಕೆ ಆಸ್ಪದ ನೀಡಿಲ್ಲ. ಜನಪ್ರತಿನಿಧಿಗಳು ಕೂಡ ಗ್ರಾಮದ ಅಭಿವೃದ್ಧಿಗೆ ನೆರವಾಗುತ್ತಿದ್ದು, ಶಾಂತಿ ಸೌಹಾರ್ದತೆ ನೆಲೆಸಲು ಕಾರಣವಾಗಿದೆ.

ಅಲಿಪುರದಲ್ಲಿ ಕೃಷಿ

ಅಲಿಪುರ ಗ್ರಾಮ ವಿದೇಶಗಳೊಂದಿಗೆ ವ್ಯಾಪಾರ ಸಂಬಂಧ ಇಟ್ಟುಕೊಂಡರೂ ಕೃಷಿ ಕಾರ್ಯವೂ ನಡೆಯುತ್ತಿದೆ. ಗ್ರಾಮ ಹಾಗೂ ಸುತ್ತಲಿನ ಸುಮಾರು 1000 ಎಕರೆಯ ವಿಸ್ತೀರ್ಣದಲ್ಲಿ ಕೃಷಿ ಕೆಲಸಗಳನ್ನು ಅಲೀಪುರದ ಗ್ರಾಮಸ್ಥರು ಮಾಡುತ್ತಿದ್ದಾರೆ.

ಪ್ರಮುಖವಾಗಿ ಜೋಳ, ಈರುಳ್ಳಿ ಹಾಗೂ ಸುಗಂಧರಾಜ ಹೂವಿನ ಬೆಳೆಯನ್ನು ಇಲ್ಲಿ ಬೆಳೆಯಲಾಗುತ್ತದೆ. ಸುತ್ತಲಿನ ಗ್ರಾಮಗಳ ನೂರಾರು ಜನರು ಕೂಲಿ ಕೆಲಸಕ್ಕಾಗಿ ಅಲೀಪುರಕ್ಕೆ ಆಗಮಿಸುತ್ತಾರೆ ಎಂದು ಗ್ರಾಮದ ಮಿ‌ರ್ ತಸ್ವೀ‌ರ್ ಅಬ್ಬಾಸ್ ತಿಳಿಸಿದರು.

ಹಿಂದೂ-ಮುಸ್ಲಿಂ ಸಾಮರಸ್ಯದ ಬದುಕು

ಅಲಿಪುರ ಗ್ರಾಮದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದರೂ ಮುಸ್ಲಿಮರೊಂದಿಗೆ ಸಾಮರಸ್ಯದಿಂದ ಬದುಕು ಸಾಗಿಸುತ್ತಿದ್ದಾರೆ. ಗಣೇಶ ಚತುರ್ಥಿ, ಅಯ್ಯಪ್ಪ ಮಾಲಾಧಾರಣೆ ಸಂದರ್ಭದಲ್ಲಿ ಅಂಜುಮನ್‌ ಸಮಿತಿ ಸೇವೆ ಒದಗಿಸಲಿದೆ. ಮೊಹರಂ ಹಬ್ಬದಲ್ಲಿ ಹಿಂದೂಗಳು ಕೂಡ ಭಾಗಿಯಾಗುತ್ತಾರೆ. ಮೊಹರಂ ಹತ್ತನೇ ದಿನ ಸುತ್ತಲಿನ ಎಲ್ಲ ಗ್ರಾಮಗಳ ಜನರು ಬಾಬಯ್ಯನ ಹಬ್ಬದಲ್ಲಿ ಭಾಗವಹಿಸುತ್ತಾರೆ ಎಂದು ಅಂಜುಮನ್ ಜಾಫರಿಯಾ ಸಮಿತಿ ಸದಸ್ಯ ಮಿರ್ ಶಬಾಹತ್ ಹುಸೇನ್ ತಿಳಿಸಿದರು.

Leave a Reply

Your email address will not be published. Required fields are marked *