ರಾಜಧಾನಿ ಬೆಂಗಳೂರಿನಿಂದ ಸುಮಾರು 79 ಕಿ.ಮೀ ದೂರದಲ್ಲಿರುವ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತ ಸುಮಾರು 61 ಕಿ.ಮೀ. ಅಳತೆಯಲ್ಲಿರುವ ಆ ಒಂದು ಗ್ರಾಮದಲ್ಲಿ ಸುಮಾರು 300 ವರ್ಷಗಳಿಂದಲೂ ಪೊಲೀಸ್ ಸ್ಟೇಷನ್ ಇಲ್ಲ. ಮದ್ಯದಂಗಡಿ ಇಲ್ಲ. ಸಿನಿಮಾ ಮಂದಿರವೂ ಇಲ್ಲ. ಇಲ್ಲಿ ಏನಿದ್ದರು ಇರಾನ್ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿಯ ಮಾತೇ ಅನುಶಾಸನ.
ಮಧ್ಯಪ್ರಾಚ್ಯದ ರಾಷ್ಟ್ರಗಳೊಂದಿಗೆ ಧಾರ್ಮಿಕ ಹಾಗೂ ವ್ಯಾವಹಾರಿಕ ನಂಟು ಹೊಂದಿರುವ ಈ ಗ್ರಾಮದಲ್ಲಿ ಸ್ಥಳೀಯ ಆಡಳಿತ ಇದ್ದರೂ ಇರಾನ್ ಧರ್ಮಗುರು ಅಯಾತೊಲ್ಲಾ ಖಮೇನಿ ಅವರ ಆಣತಿಯಂತೆಯೇ ಎಲ್ಲವೂ ನಡೆಯಬೇಕು. ಅವರ ಮಾತೇ ವೇದ ವಾಕ್ಯ. ಅವರ ಅನುಶಾಸನವನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಲೇಬೇಕು, ಮಾಡುತ್ತಾರೆ ಕೂಡ. ಅದು ಯಾವ ಗ್ರಾಮದಲ್ಲಿ ಅಂದರೆ ಅದೇ ಅಲಿಪುರ…..
ಹೌದು, ಉದ್ಯಮ ಹಾಗೂ ವ್ಯವಹಾರದಿಂದ ದೇಶದ ಗಮನ ಸೆಳೆದಿರುವ ಆ ಗ್ರಾಮವೇ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ.
“ಗ್ರಾಮದಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಬೇಕಾದರೂ ಅಂಜುಮನ್-ಇ-ಜಾಫರಿಯಾ (ಸುಪ್ರೀಂ ಮಂಡಳಿ) ನಿರ್ಣಯ ಕೈಗೊಳ್ಳಲಿದೆ. ಅದಕ್ಕೂ ಮೊದಲು ಇಲ್ಲಿನ ಪ್ರತಿ ಆಗು-ಹೋಗುಗಳನ್ನು ಸಮಿತಿ ಮುಖ್ಯಸ್ಥರಾದ ಅಲ್ಲಾಮ ಹುಜಾತುಲ್ ಇಸ್ಲಾಂ ಸೈಯದ್ ಮೊಹಮ್ಮದ್ ಝಕಿ ಅಲಿ ಬಖ್ರಿ ಸಾಹೇಬ್ ಖಿಬ್ಲಾ ಅವರಿಗೆ ತಲುಪಿಸುತ್ತೇವೆ. ಕೆನಡಾದಲ್ಲಿ ವಾಸವಿರುವ ಅವರು ನಮ್ಮ ನಿರ್ಧಾರಗಳನ್ನು ಇರಾನ್ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರಿಗೆ ತಿಳಿಸಿ ಆದೇಶ ಪಡೆಯುತ್ತಾರೆ. ಆ ನಂತರವೇ ನಿರ್ಣಯ ಕೈಗೊಳ್ಳುತ್ತೇವೆ” ಎನ್ನುತ್ತಾರೆ ಅಂಜುಮನ್-ಇ-ಜಾಫರಿಯಾ ಸದಸ್ಯ ಮಿರ್ ಶಬಾಹತ್ ಹುಸೇನ್.
ಇರಾನ್-ಅಲಿಪುರದ ಸಂಬಂಧಕ್ಕೆ ಸಾಕ್ಷಿಯಾಗಿ ಅಯಾತೊಲ್ಲಾ ಅಲಿ ಖಮೇನಿ ಅವರು 1986 ರಲ್ಲಿ ಶಿಯಾ ಮುಸ್ಲಿಮರ ಪ್ರಾಬಲ್ಯವಿರುವ ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಂದಿನಿಂದ ಇರಾನ್ ಜೊತೆಗೆ ಅಲಿಪುರ ಕರುಳಬಳ್ಳಿ ಸಂಬಂಧ ಹೊಂದಿದೆ. ಗ್ರಾಮದಲ್ಲಿ ಇರಾನ್ ಪರಮೋಚ್ಛ ನಾಯಕನ ಮಾತೇ ಅನುಶಾಸನವಾಗಿರುವ ಸಂಗತಿ ತಿಳಿದು “ಪಬ್ಲಿಕ್ ಮಿರ್ಚಿ” ಗ್ರಾಮಕ್ಕೆ ಭೇಟಿ ನೀಡಿದಾಗ ಹಲವು ಆಸಕ್ತಿದಾಯಕ ವಿಚಾರಗಳು ಬೆಳಕಿಗೆ ಬಂದವು. ಅವುಗಳ ಕುರಿತು ಪ್ರತ್ಯಕ್ಷ ವರದಿ ಇಲ್ಲಿದೆ.
ಅಲಿಪುರ, ಶಿಯಾ ಮುಸ್ಲಿಮರ ಪ್ರಾಬಲ್ಯವಿರುವ ಈ ಗ್ರಾಮ ಬೆಂಗಳೂರಿನಿಂದ 79 ಕಿ.ಮೀ, ಕೆಂಪೇಗೌಡ ವಿಮಾನ ನಿಲ್ದಾಣದಿಂದ 61 ಕಿ.ಮೀ. ಹಾಗೂ ಚಿಕ್ಕಬಳ್ಳಾಪುರದಿಂದ 35 ಕಿ.ಮೀ. ದೂರದಲ್ಲಿದೆ.
ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿ-9 ಹಾಗೂ ತೊಂಡೇಬಾವಿ ರೈಲು ನಿಲ್ದಾಣದಿಂದ 10 ಕಿ.ಮೀ. ದೂರದಲ್ಲಿದೆ. ತಾಲೂಕು ಕೇಂದ್ರವಾಗಿರುವ ಗೌರಿಬಿದನೂರಿನಿಂದ 21 ಕಿ.ಮೀ ದೂರದಲ್ಲಿದೆ.
ಗ್ರಾಮದ 10 ಕಿ.ಮೀ ಅಂತರದಲ್ಲೇ ಉತ್ತರ ಪಿನಾಕಿನಿ ನದಿ ಹರಿಯುತ್ತದೆ( ಹೆಚ್ಚು ಮಳೆ ಬಂದಲ್ಲಿ ಮಾತ್ರ). ಎಸಿಸಿ ಸಿಮೆಂಟ್ ಕಾರ್ಖಾನೆ, ಹಲವು ಬೀಜೋತ್ಪಾದಕ ಕಂಪನಿಗಳು ಹಾಗೂ ಹಸಿರಿನ ಛಾದರದಿಂದ ಗ್ರಾಮ ಸುತ್ತುವರಿದಿದೆ.
ಬೆಳ್ಳಿಕುಂಟದಿಂದ ಅಲಿಪುರ್
ಬಿಜಾಪುರ ಸುಲ್ತಾನರ ಅವನತಿ ಬಳಿಕ ಶಿಯಾ ಮುಸ್ಲಿಂ ಕುಟುಂಬಗಳು ಬೆಳ್ಳಿಗುಂಟ( ಈಗಿನ ಅಲಿಪುರ) ಗ್ರಾಮಕ್ಕೆ ವಲಸೆ ಬಂದವು. ವ್ಯಾಪಾರಸ್ಥರಾದ ಶಿಯಾ ಮುಸ್ಲಿಮರು ತಮ್ಮ ಧಾರ್ಮಿಕ ಯಾತ್ರಾ ಸ್ಥಳಗಳಾದ ಇರಾನ್, ಸಿರಿಯಾ, ಸೌದಿ ಅರೆಬಿಯಾ ಹಾಗೂ ಇರಾಕ್ ನೊಂದಿಗೆ ಸಂಬಂಧ ಗಟ್ಟಿಗೊಳಿಸಿಕೊಂಡರು. ಸೌದಿ ಅರೇಬಿಯಾ, ಥೈಲ್ಯಾಂಡ್, ಇಂಡೊನೇಷಿಯಾ ಸೇರಿ ಹಲವು ರಾಷ್ಟ್ರಗಳೊಂದಿಗೆ ಹರಳು (ಜೆಮ್ಸ್) ವ್ಯಾಪಾರ ಆರಂಭಿಸಿದರು.
ಶಿಯಾ ಮುಸ್ಲಿಮರ ಜನಸಂಖ್ಯೆ ಹೆಚ್ಚಿದಂತೆ ಬೆಳ್ಳಿಗುಂಟ ಗ್ರಾಮ ಕ್ರಮೇಣ ಅಲಿಪುರವಾಗಿ ಬದಲಾಯಿತು.
ಕೇಂದ್ರದ ರೈಲ್ವೆ ಖಾತೆ ಮಾಜಿ ಸಚಿವ ಆರ್.ಎಲ್ ಜಾಲಪ್ಪ ಅವರು ಅಲಿಪುರದಲ್ಲೇ ವಾಸ ಮಾಡಲು ಆರಂಭಿಸಿದ ಬಳಿಕ ಗ್ರಾಮದ ಹೆಸರು ಹೆಚ್ಚು ಪ್ರವರ್ಧಮಾನಕ್ಕೆ ಬಂದಿತು. ಉದ್ಯಮ, ವ್ಯವಹಾರದೊಂದಿಗೆ ಅಭಿವೃದ್ಧಿ ಕಂಡಿರುವ ಅಲಿಪುರ ಈಗ ಪ್ರಮುಖ ವಾಣಿಜ್ಯ ಕೇಂದ್ರವಾಗಿಯೂ ಬದಲಾಗಿದೆ.
ಬಿಜಾಪುರದಿಂದ ವಲಸೆ
ದಕ್ಷಿಣ ಭಾರತದ ಮೊದಲ ಸ್ವತಂತ್ರ ಮುಸ್ಲಿಂ ಆಡಳಿತವಾದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಶಿಯಾ ಮುಸ್ಲಿಮರು ಬಿಜಾಪುರದಲ್ಲಿ(ಈಗಿನ ವಿಜಯಪುರ) ನೆಲೆಸಿದ್ದರು.
ಔರಂಗಜೇಬನ ನೇತೃತ್ವದ ಮೊಘಲ್ ಸೇನೆ ಬಿಜಾಪುರವನ್ನು ವಶಪಡಿಸಿಕೊಂಡ ಬಳಿಕ ಸುಲ್ತಾನರ ಆಳ್ವಿಕೆ ಕೊನೆಯಾಯಿತು. ಅತಂತ್ರ ಸ್ಥಿತಿಯಲ್ಲಿದ್ದ ಶಿಯಾ ಸಮುದಾಯದ ಕೆಲವು ಕುಟುಂಬಗಳು ಬೆಳ್ಳಿಕುಂಟಗೆ( ಅಲಿಪುರ) ವಲಸೆ ಬಂದವು. ಸರಿ ಸುಮಾರು 350 ವರ್ಷಗಳಿಂದ ಈ ಕುಟುಂಬಗಳು ಅಲಿಪುರದಲ್ಲಿ ವಾಸವಾಗಿದ್ದು, ಮಧ್ಯಪ್ರಾಚ್ಯದ ರಾಷ್ಟ್ರಗಳೊಂದಿಗೆ ಉದ್ಯಮ ಹಾಗೂ ವ್ಯವಹಾರ ಸಂಬಂಧ ಹೊಂದುವ ಮೂಲಕ ವಿಶಿಷ್ಟ ಛಾಪು ಮೂಡಿಸಿವೆ.
ಪ್ರಸ್ತುತ, ಅಲಿಪುರದಲ್ಲಿ ಒಟ್ಟು 30 ಸಾವಿರ ಜನಸಂಖ್ಯೆ ಇದೆ. ಅದರಲ್ಲಿ ಮುಸ್ಲಿಮರು 25 ಸಾವಿರ ಇದ್ದರೆ, ಹಿಂದೂಗಳು 5 ಸಾವಿರ ಮಂದಿ ಇದ್ದಾರೆ. ಒಟ್ಟು 4,850 ಕುಟುಂಬಗಳೊಂದಿಗೆ ಶಿಯಾ ಪಂಗಡ ಪ್ರಬಲ್ಯ ಹೊಂದಿದೆ.
ಶಿಯಾ ಮುಸ್ಲಿಮರಲ್ಲಿ ಶಿಕ್ಷಣ ವ್ಯವಸ್ಥೆ
ಅಲಿಪುರದಲ್ಲಿ ಶಿಯಾ ಪಂಗಡದ ಮುಸ್ಲಿಂ ಹೆಣ್ಣು ಮಕ್ಕಳ ಸಾಕ್ಷರತೆ ಪ್ರಮಾಣ ಶೇ 70 ರಷ್ಟಿದ್ದರೆ, ಪುರುಷರ ಸಾಕ್ಷರತೆ ಪ್ರಮಾಣ ಶೇ 65 ರಷ್ಟಿದೆ.
ಗ್ರಾಮದಲ್ಲಿ ಸರ್ಕಾರಿ ಶಾಲೆ ಸೇರಿ ಒಟ್ಟು ಆರು ಶಾಲೆಗಳು ಹಾಗೂ ಕಾಲೇಜು ಇವೆ. ಸರ್ಕಾರಿ ಪ್ರೌಢ ಶಾಲೆ, ಸರ್ಕಾರಿ ಉರ್ದು ಶಾಲೆ, ಬಿಂಟುಲ್ ಹುದಾ ಮೆಮೋರಿಯಲ್ ಶಾಲೆ, ಜೈನಬಿಯಾ ಬಾಲಕಿಯರ ಪ್ರೌಢಶಾಲೆ ಹಾಗೂ ಕಾಲೇಜು, ನೋಬೆಲ್ ಪಬ್ಲಿಕ್ ಶಾಲೆ, ಜೆಮ್ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆ ಈ ಗ್ರಾಮದಲ್ಲಿದೆ. ಇವುಗಳಲ್ಲಿ ರಾಜ್ಯ ಪಠ್ಯಕ್ರಮದ ಮೂರು, ಸಿಬಿಎಸ್ಇ ಪಠ್ಯ ಕ್ರಮದ ಎರಡು ಹಾಗೂ ಒಂದರಲ್ಲಿ ಐಸಿಎಸ್ಇ ಪಠ್ಯಕ್ರಮವಿದೆ.
ಅಲಿಪುರ ಸೇರಿ ಸುತ್ತಲಿನ ನೂರಾರು ಮಕ್ಕಳು ಇಲ್ಲಿನ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ವೈದ್ಯರು, ಎಂಜಿನಿಯರ್ ಹಾಗೂ ಐಟಿ ಉದ್ಯೋಗಿಗಳಾಗಿ ಬೇರೆ ಬೇರೆ ಕಡೆ ದುಡಿಯುತ್ತಿದ್ದಾರೆ.
ವಿದೇಶಗಳಲ್ಲೂ ವೃತ್ತಿ
ವೈದ್ಯ ಹಾಗೂ ಎಂಜಿನಿಯರಿಂಗ್ ಪದವಿ ಪಡೆದ ನಂತರ ವೃತ್ತಿಪರ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಅಲಿಪುರದ ಸುಮಾರು 50 ಮಂದಿ ವಿದೇಶಗಳಲ್ಲಿ ಇದ್ದಾರೆ. 25 ಮಂದಿ ವ್ಯಾಸಂಗ ಮಾಡುತ್ತಿದ್ದರೆ, ಉಳಿದ 25 ಮಂದಿ ಇಂಗ್ಲೆಂಡ್, ಕೆನಡಾ, ಅಮೆರಿಕಾ, ಸೌದಿ ಅರೇಬಿಯಾ, ಇರಾನ್, ಇರಾಕ್, ಥೈಲ್ಯಾಂಡ್, ಇಂಡೋನೇಷಿಯಾ ಹಾಗೂ ಸಿಂಗಾಪುರಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ…
ಪ್ರತಿ ವರ್ಷ ಮೊಹರಂ ಹಾಗೂ ರಂಜಾನ್ ಹಬ್ಬಗಳಿಗೆ ಇವರೆಲ್ಲರೂ ಅಲಿಪುರಕ್ಕೆ ಬರುತ್ತಾರೆ. ಆದರೆ, ಮೊಹರಂ ಹಿಂದೆ ಮುಂದೆ ಯಾರೂ ಕೂಡ ವಿದೇಶ ಪ್ರಯಾಣ ಮಾಡುವುದಿಲ್ಲ ಎಂದು ಅಂಜುಮನ್-ಇ- ಜಾಫರಿಯಾ ಸಮಿತಿ ಸದಸ್ಯ ಮಿರ್ ಶಬಾಹತ್ ಹುಸೇನ್ ತಿಳಿಸಿದರು.
1986ರಲ್ಲಿ ಅಲೀಪುರಕ್ಕೆ ಭೇಟಿ ನೀಡಿದ್ದ ಇರಾನ್ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ
ಇರಾನ್ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು 1986 ರಲ್ಲಿ ಅಲಿಪುರಕ್ಕೆ ಬಂದಿದ್ದರು. ಆಗಿನ್ನೂ ಅವರು ಯಾವುದೇ ರಾಜಕೀಯದಲ್ಲಿ ಇರಲಿಲ್ಲ. ಕೇವಲ ಧರ್ಮಗುರುವಾಗಿ ಅಲಿಪುರಕ್ಕೆ ಬಂದಿದ್ದರು. ಈಗ ಅವರ ಭೇಟಿಯ ನೆನಪಿಗಾಗಿ ಖಮೇನಿ ಅವರ ಗುರುಗಳಾದ ಇಮಾಮ್ ಖೊಮೇನಿ ಹೆಸರಿನಲ್ಲೇ ಅಲಿಪುರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಶಿಯಾ ಸಮುದಾಯದ ಧಾರ್ಮಿಕ ಗುರುವಾಗಿ ಖಮೇನಿ ಅವರು ಅಲಿಪುರಕ್ಕೆ ಬಂದ ನಂತರ ಇರಾನ್ ಜೊತೆಗಿನ ಒಡನಾಟ ಹೆಚ್ಚಾಗಿದೆ.
ಖೊಮೇನಿ ಪೂರ್ವಜರ ಮೂಲ ಭಾರತ
ಅಯತೊಲ್ಲಾ ಇಮಾಮ್ ಖೊಮೇನಿ ಪೂರ್ವಜರು ಭಾರತ ಮೂಲದವರಾಗಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಕಿಂತೂರು ಗ್ರಾಮದಲ್ಲಿ ಜನಿಸಿದ್ದ ಸೈಯದ್ ಅಹ್ಮದ್ ಮೌಸವಿ ಹಿಂದಿ ಎನ್ನುವ ಧಾರ್ಮಿಕ ಗುರು ಇಲ್ಲಿಂದ ಇರಾನ್ ಗೆ ತೆರಳಿ ಖಮೇನಿ ಎಂಬ ಕುಟುಂಬವನ್ನು ಶಿಯಾ ಪರಂಪರೆಯಲ್ಲಿ ಮಂಚೂಣಿಗೆ ತರುವಲ್ಲಿ ಶ್ರಮಿಸಿದ್ದರು.
ಇರಾನ್ ದಾಖಲೆಗಳಲ್ಲೂ ಸೈಯದ್ ಅಹ್ಮದ್ ಮೌಸವಿ ಹಿಂದಿ ಎನ್ನುವ ವ್ಯಕ್ತಿಯ ಹೆಸರು ದಾಖಲಾಗಿದೆ. ಮೌಸವಿ ಅವರು ಇರಾನ್ ಗೆ ವಲಸೆ ಹೋದರೂ ತಮ್ಮ ಜನ್ಮಸ್ಥಾನವು ಹಿಂದುಸ್ಥಾನ ಎಂದು ಪರಿಚಯಿಸುವ ನಿಟ್ಟಿನಲ್ಲಿ ಹಿಂದಿ ಎಂಬ ಉಪನಾಮ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…