ಅರ್ಹ ವ್ಯಕ್ತಿಗೆ ಮತದಾನದ ಹಕ್ಕು ದೊರೆಯಬೇಕು-ಮತದಾರ ಪಟ್ಟಿ ವೀಕ್ಷಕಿ ಬಿ.ಆರ್.ಮಮತಾ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಮತದಾನದ ಹಕ್ಕು ಇದೆ. ಅರ್ಹ ವ್ಯಕ್ತಿಗಳಿಗೆ ಈ ಹಕ್ಕು ಲಭ್ಯವಾಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವು ಬಹಳ ಮಹತ್ವದ್ದಾಗಿದ್ದು ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ನೋಂದಣಿ ಇಲಾಖೆಯ ಮಹಾ ನಿರೀಕ್ಷಕಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತದಾರರ ಪಟ್ಟಿ ವೀಕ್ಷಕರಾಗಿರುವ ಬಿ.ಆರ್.ಮಮತಾ ಹೇಳಿದರು.

ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿಂದು ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಉತ್ತಮ ರೀತಿಯಲ್ಲಿ ಸಾಗಿದೆ. ಮನೆ ಮನೆ ಭೇಟಿ ಸಂದರ್ಭದಲ್ಲಿ ಅರ್ಹ ಮತದಾರರು ಪಟ್ಟಿಯಲ್ಲಿ ಇರುವುದನ್ನು ನಿರಂತರವಾಗಿ ಮರು ಪರಿಶೀಲನೆ ಮಾಡುತ್ತಿರಬೇಕು‌. ಜಿಲ್ಲೆಯಲ್ಲಿ 7977 ವಿಕಲಚೇತನ ಮತದಾರರ ನೋಂದಣಿ ಮಾಡಿರುವುದು ಉತ್ತಮ ಪ್ರಗತಿಯಾಗಿದೆ. ಪಟ್ಟಿಯಲ್ಲಿ ಅವರನ್ನು ಗುರುತಿಸುವ ಮಾರ್ಕಿಂಗ್ ಕಾರ್ಯವೂ ಆಗಬೇಕು. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2022 ರ ನವೆಂಬರ್ 09 ಕ್ಕೆ ಒಟ್ಟು 8,38,219 ಮತದಾರರು ಇದ್ದಾರೆ ಎಂದರು.

ಡಿ‌ಸೆಂಬರ್ 8 ರವರೆಗೆ ಮತದಾರರ ಪಟ್ಟಿಯ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಡಿ.26 ರೊಳಗೆ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ 2023 ರ ಜನವರಿ 5 ರಂದು ಅಂತಿಮ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಜನ್ಮ ದಿನಾಂಕ ದಾಖಲೆಗಳನ್ನು ಪಡೆಯುವಾಗ ಸಮರ್ಪಕವಾಗಿ ಪರಿಶೀಲಿಸಬೇಕು. ಗಣ್ಯರು, ಅತಿ ಗಣ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಭಾರತ ಚುನಾವಣಾ ಆಯೋಗವು ಮತದಾನದ ಹಕ್ಕಿನಿಂದ ಯಾವುದೇ ಮತದಾರ ವಂಚಿತನಾಗಬಾರದು ಎಂಬ ಮಹತ್ವಾಕಾಂಕ್ಷೆಯಿಂದ ಮತದಾರರ ಪಟ್ಟಿಯ ಆರೋಗ್ಯಪೂರ್ಣ ಪರಿಷ್ಕರಣೆಗೆ ಹೆಚ್ಚು ಮಹತ್ವ ನೀಡಿದೆ ಎಂದು ತಿಳಿಸಿದರು.

ಮತದಾನಕ್ಕೆ ಬಳಸುವ ಇವಿಎಂ, ವಿವಿಪ್ಯಾಟ್ ಯ‌ಂತ್ರಗಳ ಸ್ಥಿತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪರಿಶೀಲಿಸುವ ಕಾರ್ಯವನ್ನು ಸಾಕಷ್ಟು ಮುಂಚಿತವಾಗಿ ಕೈಗೊಳ್ಳಬೇಕು. ಮತದಾರರ ಜಾಗೃತಿಗಾಗಿ ಸ್ವೀಪ್ ಚಟುವಟಿಕೆಗಳನ್ನು ಮಹಿಳಾ, ಯುವ, ವಿಕಲಚೇತನ ಮತದಾರರನ್ನು ಕೇಂದ್ರೀಕರಿಸಿ ರೂಪಿಸಿ ಜಾರಿಗೊಳಿಸಬೇಕು ಎಂದು ಸೂಚಿಸಿದರು. 1950 ಸಹಾಯವಾಣಿ ಸಂಖ್ಯೆಯನ್ನು ಹೆಚ್ಚು ವ್ಯಾಪಕ ಪ್ರಚಾರ ಮಾಡಬೇಕು. ರಾಜಕೀಯವಾಗಿ ತಟಸ್ಥ ನಿಲುವು ಹೊಂದಿರುವ ಜಿಲ್ಲೆಯ ಹೆಸರಾಂತ ವ್ಯಕ್ತಿಗಳನ್ನು ಚುನಾವಣಾ ಆಯೋಗದ ಅನುಮೋದನೆ ಪಡೆದು ಮತದಾರರ ಜಾಗೃತಿ ರಾಯಭಾರಿಗಳನ್ನಾಗಿ ನೇಮಿಸಿಕೊಳ್ಳಬೇಕು.

ಮುಂಬರುವ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡು ಮತದಾರರನ್ನು ಜಾಗೃತಿಗೊಳಿಸಬೇಕು. ಮತಗಟ್ಟೆಗಳಿಗೆ ಗುರುತಿಸಲಾಗಿರುವ ಕಟ್ಟಡಗಳಲ್ಲಿ ಮೂಲಸೌಕರ್ಯಗಳ ಬಗ್ಗೆ ಗಮನ ನೀಡಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ,
ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವಾಗ ನಿಯಮಾನುಸಾರ ಎಲ್ಲಾ ಕ್ರಮಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ಖುದ್ದಾಗಿ ತಹಸೀಲ್ದಾರರೇ ಖಚಿತಪಡಿಸಿಕೊಳ್ಳಬೇಕು. ಸ್ವಯಂ ಪ್ರೇರಿತರಾಗಿ ಯಾವುದೇ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಬಾರದು ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಾಸವಾಗಿರುವ ಹೆಸರಾಂತ ಕಲಾವಿದರು, ಸಾಹಿತಿಗಳು,ಸಾಧಕರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳಬೇಕು.

ಮತಗಟ್ಟೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳು ಸಮರ್ಪವಾಗಿರುವುದನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಬೇಕು ಎಂದರು.

ಉಪವಿಭಾಗಾಧಿಕಾರಿ ತೇಜಸ್ ಕುಮಾರ್ ಮಾತನಾಡಿ, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 1137 ಮತಗಟ್ಟೆಗಳಿವೆ, ಎಲ್ಲಾ ಕಡೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 114 ಬಿಎಲ್‌ಓ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.

2022 ರ ನವೆಂಬರ್ 09 ಕ್ಕೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 1,10,215 ಪುರುಷ, 1,10,541 ಮಹಿಳೆಯರು ಹಾಗೂ ಇತರೆ ವರ್ಗದ 23 ಮತದಾರರು ಸೇರಿ ಒಟ್ಟು 2,20,779 ಮತದಾರರು ಹಾಗೂ 286 ಮತಗಟ್ಟೆಗಳಿವೆ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 1,01,753 ಪುರುಷ,1,01,954 ಮಹಿಳೆಯರು ಹಾಗೂ ಇತರೆ ವರ್ಗದ 26 ಮತದಾರರು ಸೇರಿ ಒಟ್ಟು 2,03,733 ಮತದಾರರು ಹಾಗೂ 292 ಮತಗಟ್ಟೆಗಳಿವೆ.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 1,02,311 ಪುರುಷ,1,02,184 ಮಹಿಳೆಯರು ಹಾಗೂ ಇತರೆ ವರ್ಗದ ಓರ್ವ ಮತದಾರ ಸೇರಿ ಒಟ್ಟು 2,04,496 ಮತದಾರರು ಹಾಗೂ 276ಮತಗಟ್ಟೆಗಳಿವೆ.

ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 1,04,226 ಪುರುಷ,1,04,913 ಮಹಿಳೆಯರು ಹಾಗೂ ಇತರೆ ವರ್ಗದ 72 ಸೇರಿ ಒಟ್ಟು 2,09,211 ಮತದಾರರು ಹಾಗೂ 276 ಮತಗಟ್ಟೆಗಳಿವೆ.

ಮತದಾರರ ಗುರುತಿನ ಚೀಟಿಗಳನ್ನು(ಎಪಿಕ್ ಕಾರ್ಡ್) ನೋಂದಾಯಿತ ಅಂಚೆ ಮೂಲಕ ವಿಲೇವಾರಿಗೆ ಕ್ರಮವಹಿಸಲಾಗಿದೆ ಎಂದು ಸಭೆಗೆ ವಿವರಿಸಿದರು.

ಸಹಾಯವಾಣಿ ಕೇಂದ್ರಕ್ಕೆ ಭೇಟಿ

ಮತದಾರರ ಪಟ್ಟಿ ವೀಕ್ಷಕರಾದ ಬಿ.ಆರ್.ಮಮತಾ ಹಾಗೂ ಜಿಲ್ಲಾಧಿಕಾರಿಗಳಾದ ಆರ್.ಲತಾ ಅವರು ಜಿಲ್ಲಾಡಳಿತ ಭವನದ ಚುನಾವಣಾ ವಿಭಾಗಕ್ಕೆ ಭೇಟಿ ನೀಡಿ, ಅಲ್ಲಿನ ವಿವಿಧ ಶಾಖೆಗಳು ಮತ್ತು 1950 ಸಹಾಯವಾಣಿಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.

ಅಪರ ಜಿಲ್ಲಾಧಿಕಾರಿ ವಿಜಯಾ ಈ.ರವಿಕುಮಾರ, ಜಿಪಂ ಉಪಕಾರ್ಯದರ್ಶಿ ಡಾ.ನಾಗರಾಜು, ಚುನಾವಣಾ ತಹಸೀಲ್ದಾರ ರಾಜೀವಲೋಚನ ಸೇರಿದಂತೆ ಜಿಲ್ಲೆಯ ಎಲ್ಲಾ ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *