ಅರ್ಕಾವತಿ ನದಿ ಪಾತ್ರದ ಕೆರೆಗಳು ಕಲುಷಿತ: ಕೆರೆಗಳನ್ನು ಶುದ್ಧೀಕರಿಸಿ ಸಂರಕ್ಷಣೆಗೆ ಮುಂದಾಗದ ಜನಪ್ರತಿನಿಧಿಗಳು, ಅಧಿಕಾರಿಗಳು: ಆ.15ರ ಸ್ವಾತಂತ್ರ್ಯ ದಿನಾಚರಣೆ‌ ದಿನದಂದು  ಕಪ್ಪುಬಾವುಟ ಹಾರಿಸಲು ತೀರ್ಮಾನ

ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಒಳಚರಂಡಿ ನೀರು, ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ‌ ರಾಸಾಯನಿಕ ಯುಕ್ತ ತ್ಯಾಜ್ಯ ನೀರು ಸೇರಿದಂತೆ ಇತರೆ ತ್ಯಾಜ್ಯ ನೇರವಾಗಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಒಡಲು ಸೇರಿ ಸಂಪೂರ್ಣ ಕಲುಷಿತಗೊಂಡಿವೆ.

ಈ ಕೆರೆಗಳ ನೀರನ್ನು ಬಳಿಸಿದ ಜನ ರೋಗಪೀಡಿತರಾಗುತ್ತಿದ್ದಾರೆ. ಪ್ರಾಣಿ ಪಕ್ಷಿಗಳು, ಜಲಚರಗಳು ಸಾವನ್ನಪ್ಪುತ್ತಿವೆ. ಆದ್ದರಿಂದ ಕೆರೆ ಸಂರಕ್ಷಣೆಗೆ, ಶುದ್ಧೀಕರಣಕ್ಕೆ ಈಗಾಗಲೇ ಹಲವು ಮನವಿ, ಹೋರಾಟ, ಪ್ರತಿಭಟನೆ ಸೇರಿದಂತೆ ನಾನಾ ಪ್ರಯತ್ನ ಮಾಡಿದರೂ ಸಮಸ್ಯೆ ಬಗೆಹರಿಯಲಿಲ್ಲ. ಆದರೆ ಗ್ರಾಮಸ್ಥರು ಮತ್ತು ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ವೇದಿಕೆ ಸಮಿತಿ ಮುಖಂಡರು ಪಟ್ಟು ಬಿಡದೇ ಕೆರೆ ಶುದ್ದೀಕರಣ, ಸಂರಕ್ಷಣೆಗೆ ಹೋರಾಟ ಮುಂದುವರಿಸಿದ್ದಾರೆ.

ನಿರ್ಲಕ್ಷ್ಯವಹಿಸುತ್ತಿರುವ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ನಡೆ ಖಂಡಿಸಿ ಆ.15ರ ಸ್ವಾತಂತ್ರ್ಯ ದಿನಾಚರಣೆ‌ ದಿನದಂದು ಎಲ್ಲಾ ಗ್ರಾಮಗಳಲ್ಲಿ ಕಪ್ಪುಬಾವುಟ ಹಾರಿಸಲಾಗುವುದು. ಕಪ್ಪು ಬಾವುಟ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಮಾಡಲು ಗ್ರಾಮಸ್ಥರು ಮತ್ತು ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ವೇದಿಕೆ ಸಮಿತಿ ಮುಖಂಡರು ತೀರ್ಮಾನಿಸಿದ್ದಾರೆ.

ಈ ಸಂದರ್ಭದಲ್ಲಿ ಅರ್ಕಾವತಿ ನದಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ವೈದ್ಯ ಡಾ.ಎಚ್.ಅಂಜಿನಪ್ಪ ಮಾತನಾಡಿ, 10 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದರು ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ, ಶುದ್ಧ ಕುಡಿಯುವ ನೀರು ಕೊಟ್ಟಿಲ್ಲ. ಈವರೆಗೆ ಅಧಿಕಾರಕ್ಕೆ ಬಂದಿರುವ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆಯಲ್ಲೇ ಕಾಲಕಳೆದಿದ್ದಾರೆ. ಯಾವ ಭರವಸೆಯು ಕಾರ್ಯರೂಪಕ್ಕೆ ಬಂದಿಲ್ಲ. ನಮ್ಮ ಭಾಗದ ಎಲ್ಲಾ ಕೆರೆಗಳು ಸಂಪೂರ್ಣ ಕಲುಷಿತಗೊಂಡಿವೆ. ಕೊಳವೆ ಬಾವಿಗಳಲ್ಲಿ ಬರುತ್ತಿರುವ ಕುಡಿಯುವ ನೀರು ಯೋಗ್ಯವಾಗಿಲ್ಲ. ಶೀಘ್ರವಾಗಿ ಇದಕ್ಕೆ ಕಾರಣವಾಗಿರುವವರ ಸೂಕ್ತ ಕಾನೂನು ಕ್ರಮ ಕೈಗೊಂಡು ಕೆರೆಗಳ ಶುದ್ದೀಕರಣ ಕೆಲಸ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ಕೆರೆ ಅಂಚಿನಲ್ಲಿ ವಾಸವಾಗಿರುವ ಎಲ್ಲಾ ಕುಟುಂಬಗಳು ಕೂಲಿ ಮಾಡಿಕೊಂಡು ಜೀವನ ನಡೆಸುವ ಹಿಂದುಳಿದ ವರ್ಗಕ್ಕೆ ಸೇರಿದವರು. ಪ್ರತಿ ಮನೆಯಲ್ಲೂ ಚರ್ಮ ರೋಗಗಳಿಂದ ಬಳಲುತ್ತಿರುವ ಮಕ್ಕಳು ಇದ್ದಾರೆ. ಹಿರಿಯರು ಉಸಿರಾಟದ ತೊಂದರೆ, ಕೈ, ಕಾಲುಗಳ ನೋವುಗಳಿಂದ ಬಳಲುತ್ತಿದ್ದಾರೆ. ನಮಗೆ ಶುದ್ದ ಕುಡಿಯುವ ನೀರು ಕೊಡುವಂತೆ ಹತ್ತು ವರ್ಷಗಳಿಂದಲು ಹೋರಾಟ ನಡೆಸುತ್ತಲೇ ಬರುತ್ತಿದ್ದರು ಸಮಸ್ಯೆ ಮಾತ್ರ ಉಲ್ಬಣವಾಗುತ್ತಲೇ ಇದೆ ಎಂದರು.

ವಸಂತ್ ಮಾತನಾಡಿ, ಆ.15ರಂದು ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವುದು ಶತಸಿದ್ಧ. ನಾವು ಸಂವಿಧಾನ ವಿರೋಧಿಗಳಲ್ಲ, ದೇಶ ವಿರೋಧಿಗಳಲ್ಲ. ನಮ್ಮ ಹೋರಾಟ ಸಂವಿಧಾನ ವಿರುದ್ಧ ಕೆಲಸ ಮಾಡುತ್ತಿರುವ ಅಧಿಕಾರಗಳ ನಡೆ ಖಂಡಿಸಿ, ಮೂಲಭೂತ ಸೌಕರ್ಯ ಕುಡಿಯುವ ನೀರು, ಕೆರೆಗಳ ಉಳಿವುಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.

 ಈ ಹಿಂದೆ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿತ್ತು. ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು ಗ್ರಾಮಗಳಲ್ಲಿ ಸಭೆ ನಡೆಸಿ ನೀಡಲಾಗಿದ್ದ ಯಾವುದೇ ಭರವಸೆಯು ಇದುವರೆಗೂ ಈಡೇರಿಲ್ಲ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದೊಡ್ಡಬಳ್ಳಾಪುರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಿಯ ಕಚೇರಿಯನ್ನು ನಗರಕ್ಕೆ ಸ್ಥಳಾಂತರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉರುಳು ಸೇವೆ ಮಾಡಿದರು ಇದುವರೆಗೂ ಸ್ಥಳಾಂತರ ಆಗಿಲ್ಲ. ಇಂತಹ ಕನಿಷ್ಠ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಲ್ಲೂ ಸಹ ಜನಪ್ರತಿನಿಧಿಗಳು, ಜಿಲ್ಲಾಡಳಿತ ವಿಫಲವಾಗಿದೆ ಎಂದು ಹೇಳಿದರು.

ನಮ್ಮ ಭಾಗದಲ್ಲಿ ತಿಂಗಳಿಗೆ ಎರಡು‌ ಮೂರು ಸಾವುಗಳು ಆಗುತ್ತಿವೆ. ಈ ಸಾವು ಸಹಜವಾಗಿ ಬರುತ್ತಿಲ್ಲ. ಬದಲಿಗೆ ಕಿಡ್ನಿ‌ ಸಮಸ್ಯೆ, ಕ್ಯಾನ್ಸರ್, ಶ್ವಾಸಕೋಶ ಸಮಸ್ಯೆ ಸೇರಿದಂತೆ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಅಕಾಲಿಕ ಮರಣ ಹೊಂದುತ್ತಿದ್ದಾರೆ. ಇದಕ್ಕೆ ಕಾರಣ ಅಶುದ್ಧ ಕುಡಿಯುವ ನೀರಿನಿಂದ, ಕೆರೆಗಳ ಮಾಲಿನ್ಯದಿಂದ ಎಂದರು.

ಪ್ರಮುಖ ಬೇಡಿಕೆಗಳು

*ದೊಡ್ಡಬಳ್ಳಾಪುರ ನಗರಸಭೆ ಯುಜಿಡಿ‌ ನೀರು, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ‌ ಯುಜಿಡಿ ನೀರು ಮೂರನೇ ಹಂತದಲ್ಲಿ ಶುದ್ಧೀಕರಣಗೊಂಡು ಕೆರೆಗಳಿಗೆ ಬರುವಂತೆ ಮಾಡಬೇಕು

• ಅಂರ್ಜಲ ಹದಗೆಡದೇ ಇರುವ ಭಾಗದಿಂದ ಜನರಿಗೆ ಶುದ್ಧ ಕುಡಿಯುವ ನೀರು, ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬೇಕು.

• ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಬೇಕು

• ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ ಸ್ಥಾಪನೆ ಮಾಡಿ, ಕೈಗಾರಿಕೆಗಳ ತ್ಯಾಜ್ಯ ನೀರನ್ನು ಶುದ್ಧೀಕರಿಸಿಕೊಂಡು ಕೆರೆಗಳಿಗೆ ಬಿಡದೇ ಅವರೇ ಆ ನೀರನ್ನು ಮರುಬಳಿಕೆ‌ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು….

• ಕಾನೂನು ವಿರುದ್ಧವಾಗಿ ರಾಸಾಯನಿಕ ನೀರು ಬಿಡುವ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು

ಈ ಎಲ್ಲಾ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಮಿತಿ ಹೋರಾಟಗಾರರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!