ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಚುನಾವಣಾಧಿಕಾರಿ ತೇಜಸ್ ಕುಮಾರ್ ಭೇಟಿ, ಪರಿಶೀಲನೆ

ತಾಲ್ಲೂಕಿನ ಚಿಕ್ಕತುಮಕೂರು, ದೊಡ್ಡತುಮಕೂರು ಕೆರೆಗಳಿಗೆ ಶನಿವಾರ ದಿಢೀರ್ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ ಹಾಗೂ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಚುನಾವಣ ಅಧಿಕಾರಿ ಎನ್.ತೇಜಸ್ ಕುಮಾರ್ ಕೆರೆಗೆ ನೀರು ಹರಿದು ಬರುತ್ತಿರುವ ರಾಜ ಕಾಲುವೆಗಳು, ಒಳಚರಂಡಿ ಪೈಪ್ ಲೈನ್, ಕೆರೆಯಲ್ಲಿನ ನೀರಿನ ಸ್ಥಿತಿಗಳನ್ನು ಖುದ್ದು ಪರಿಶೀಲನೆ ನಡೆಸಿದರು.

ಕೆರೆಗೆ ಸೇರುತ್ತಿರುವ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ಒಳಚರಂಡಿ ನೀರು, ಬಾಶೆಟ್ಟಿಹಳ್ಳಿ ಕೈಗಾರಿಕ ಪ್ರದೇಶ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಲುಷಿತ ನೀರನ್ನು ತಡೆಯದೇ ಇದ್ದರೆ ಮತದಾನ ಬಹಿಷ್ಕರಿಸುವ ಕುರಿತಂತೆ ಕೆರೆ ಸುತ್ತಮುತ್ತಲಿನ ಗ್ರಾಮಸ್ಥರು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಹಿ ಸಂಗ್ರಹ ಮಾಡಿ ಚುನಾವಣ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದ್ದರು.

ದೊಡ್ಡತುಮಕೂರು ಗ್ರಾಮದಲ್ಲಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡರೊಂದಿಗೆ ಮಾತನಾಡಿದ ಚುನಾವಣ ಅಧಿಕಾರಿ ಎನ್.ತೇಜಸ್ಕುಮಾರ್, ಪ್ರಜಾಪ್ರಭುತ್ವದಲ್ಲಿ ಚುನಾವಣೆ ಹಬ್ಬ ಇದ್ದಂತೆ. ಚುನಾವಣ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗಲೇ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.

ಮತದಾನ ಬಹಿಷ್ಕಾರ ಹಾಗೂ ಇಲ್ಲಿನ ಕೆರೆಯ ಸ್ಥಿತಿ ಕುರಿತಂತೆ ಹಿರಿಯ ಅಧಿಕಾರಿಗಳ ಗಮನಕ್ಕು ತರಲಾಗಿದೆ. ತುರ್ತಾಗಿ ಇಲ್ಲಿನ ಗ್ರಾಮಗಳ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಜಕ್ಕಲಮೊಡಗು ಜಲಾಶಯದಿಂದ ನಗರಸಭೆ ವ್ಯಾಪ್ತಿಗೆ ಬರುತ್ತಿರುವ ನೀರನ್ನು ಟ್ಯಾಂಕರ್ ಮೂಲಕ ತಂದು ಹಾಕಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಮೇ 1 ಅಥವಾ 2 ರಂದು ಆರೋಗ್ಯ ಇಲಾಖೆ ವತಿಯಿಂದ ಕೆರೆ ಸುತ್ತ,ಮುತ್ತಲಿನ ಗ್ರಾಮಗಳಲ್ಲಿ ತಜ್ಞ ವೈಧ್ಯರಿಂದ ಆರೋಗ್ಯ ತಪಾಸಣ ಶಿಬಿರ ನಡೆಸಲು ಕ್ರಮಕೈಗೊಳ್ಳೂವಂತೆ ಸೂಚನೆ ನೀಡಲಾಗಿದೆ. ಮೇ 20 ರಂದು ತಾಲ್ಲೂಕು ಕಚೇರಿಯಲ್ಲಿ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ನಡೆಸುವ ಮೂಲಕ ಶಾಶ್ವತ ಪರಿಹಾರ ಮಾರ್ಗವನ್ನು ಕಂಡುಕೊಳ್ಳಲಾಗುವುದು.

ಕೆರೆಗಳಲ್ಲಿನ ನೀರಿನ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಇದನ್ನು ಹೀಗೆ ಮುಂದುವರೆಯಲು ಬಿಟ್ಟರೆ ಕೆರೆ ಸುತ್ತಮುತ್ತಲಿನ ಗ್ರಾಮಗಳ ಜನ, ಜಾನುವಾರುಗಳ ಆರೋಗ್ಯ ಮತ್ತಷ್ಟು ಹಾಳಾಗಲಿದೆ. ಕೆರೆ ನೀರಿನ ಸ್ಥಿತಿಯ ಗಂಭೀರತೆ ಅರ್ಥವಾಗಿದೆ ಎಂದರು.

Leave a Reply

Your email address will not be published. Required fields are marked *