ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಳುಮಲ್ಲಿಗೆ ಗ್ರಾಮದಲ್ಲಿ ಅಜ್ಜಿಯ ಚಿನ್ನದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ಪತ್ತೆ ಮಾಡಿ, ಸೂಕ್ತ ತನಿಖೆ ನಡೆಸಿ, ಕಳ್ಳರಿಂದ ಚಿನ್ನದ ಸರವನ್ನು ವಶಕ್ಕೆ ಪಡೆದು ಕಳುವಾಗಿದ್ದ ಚಿನ್ನದ ಸರವನ್ನು ಅಜ್ಜಿಗೆ ವಾಪಸ್ ನೀಡಲಾಯಿತು.
ಫೆ. 21ರಂದು ವೃದ್ಧೆ ಕೊರಳಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಕದ್ದು ಪರಾರಿಯಾಗಿದ್ದ ಘಟನೆ ತಾಲೂಕಿನ ಅರಳುಮಲ್ಲಿಗೆ ಬಳಿ ನಡೆದಿತ್ತು.
ಯಶೋಧಮ್ಮ (75), ಚಿನ್ನದ ಮಾಂಗಲ್ಯ ಸರ ಕಳೆದುಕೊಂಡ ವೃದ್ಧೆ.
ಪೆಟ್ಟಿ ಅಂಗಡಿಯಲ್ಲಿ ವೃದ್ಧೆ ತನ್ನ ಪಾಡಿಗೆ ತಾನು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಅಜ್ಜಿಯ ಕೊರಳಲ್ಲಿ ಸುಮಾರು 100 ಗ್ರಾಂ ಮಾಂಗಲ್ಯ ಸರ ಇತ್ತು ಎನ್ನಲಾಗಿತ್ತು. ಇದನ್ನು ಗಮನಿಸಿದ ಇಬ್ಬರು ಖದೀಮರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬೈಕ್ ನಲ್ಲಿ ಅಂಗಡಿ ಬಳಿ ಬರುತ್ತಾರೆ. ಅಂಗಡಿ ಬಳಿ ಬಂದು 10 ರೂಪಾಯಿ ಕೊಟ್ಟು 5 ರೂಪಾಯಿಯ ಚಾಕಲೇಟ್ ಖರೀದಿ ಮಾಡುತ್ತಾರೆ. ಉಳಿದ 5 ರೂಪಾಯಿ ಚಿಲ್ಲರೆ ವಾಪಸ್ ಕೊಡಲು ಅಜ್ಜಿ ಮುಂದಾದಗ ಕಳ್ಳರು ನೇರವಾಗಿ ಅಜ್ಜಿಯ ಕೊರಳಿಗೆ ಕೈ ಹಾಕಿ ಚೈನ್ ಕದಿಯಲು ಮುಂದಾಗುತ್ತಾರೆ. ಅಜ್ಜಿ ಕೂಡಲೇ ಎಚ್ಚೆತ್ತುಕೊಂಡು ತನ್ನ ಚೈನನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾರೆ.
ಯಶೋಧಮ್ಮ ಕೊರಳಿನಿಂದ ಸರವನ್ನ ಕಿತ್ತಿಕೊಳ್ಳುವಾಗ ಸರ ತುಂಡಾಗಿ, ಅರ್ಧ ಸರ ಮಾತ್ರ ಕಳ್ಳರಿಗೆ ಕೈಗೆ ಸಿಕ್ಕಿತ್ತು. ಆಗ 100 ಗ್ರಾಂ ಚಿನ್ನದ ಸರದಲ್ಲಿ 50ಗ್ರಾಂ ಚಿನ್ನದ ಸರ ಮಾತ್ರ ಕಳ್ಳರಿಗೆ ಸಿಕ್ಕಿದೆ ಎನ್ನಲಾಗಿತ್ತು.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಜಾಡುಹಿಡಿದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಇಬ್ಬರು ಖದೀಮರನ್ನು ಬಂಧಿಸಿ ಕದ್ದ ಚಿನ್ನದ ಸರವನ್ನು ವಶಕ್ಕೆ ಪಡೆದು ಇಂದು ಕಳುವಾಗಿದ್ದ ಚಿನ್ನದ ಸರವನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ಅವರು ಅಜ್ಜಿಗೆ ವಾಪಸ್ ನೀಡಿದರು.
ಈ ವೇಳೆ ಕಳುವಾಗಿದ್ದ ಚಿನ್ನದ ಮಾಂಗಲ್ಯ ಸರ ಕೈ ಸೇರಿದ ಮೇಲೆ ವೃದ್ಧೆ ಯಶೋಧಮ್ಮ ಭಾವುಕರಾದರು. ಪೊಲೀಸರ ಕಾರ್ಯವೈಖರಿಗೆ ಪ್ರಶಂಸೆಯನ್ನು ಕೂಡ ವ್ಯಕ್ತಪಡಿಸಿದರು.
ಕಳ್ಳರನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಪೊಲೀಸ್ ಸಿಬ್ಬಂದಿ ಸುನಿಲ್ ಬಾಸ್ಕಿ, ಸಚಿನ್, ಹರೀಶ್ ಮತ್ತು ಪ್ರವೀಣ್ ರವರನ್ನ ಇನ್ಸ್ ಪೆಕ್ಟರ್ ಸಾಧಿಕ್ ಪಾಷ ಅಭಿನಂಧಿಸಿದ್ದಾರೆ.
ಆರೋಪಿಗಳ ಮಾಹಿತಿ
ಕನಕಪುರ ಮೂಲದ ಶಿವರಾಜ್ ಮತ್ತು ಸುಂದರೇಶ್ ಎಂಬ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ.
ಈ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೇಲ್ ನಲ್ಲಿ ಹೊರ ಬಂದಿರುತ್ತಾರೆ. ಕಳ್ಳತನಕ್ಕಾಗಿಯೇ ಹೊಸ ಬೈಕ್ ಖರೀದಿಯನ್ನು ಮಾಡಿರುತ್ತಾರೆ. ಬಣ್ಣದ ಮೂರು ಮೂರು ಟೀ ಶರ್ಟ್ ಗಳನ್ನು ಧರಿಸಿದ್ದರು. ಅರಳುಮಲ್ಲಿಗೆಯಲ್ಲಿ ಕಳ್ಳತನ ಮಾಡಿ ಕನಕಪುರ ತಾಲೂಕಿನ ಮಠವೊಂದರಲ್ಲಿ ವಾಸ ಮಾಡುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.