ಅರಳುಮಲ್ಲಿಗೆ ಕೆರೆಯ ಒಡಲು ಸೇರುತ್ತಿರುವ ಕಾರ್ಖಾನೆಗಳ ತ್ಯಾಜ್ಯ ನೀರು : ರಾತ್ರಿ ವೇಳೆ ಟ್ಯಾಂಕರ್ ಗಳ ಮೂಲಕ ಕೆರೆ ಅಂಗಳಕ್ಕೆ ಹರಿದು ಬಿಡುತ್ತಿರುವ ಆರೋಪ

ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ವಕ್ರದೃಷ್ಠಿ ಈಗ ಅರಳುಮಲ್ಲಿಗೆ ಕೆರೆ ಅಂಗಳದ ಕಡೆಗೆ ಬಿದ್ದಿದ್ದು, ಕಾರ್ಖಾನೆಗಳ ತ್ಯಾಜ್ಯ ನೀರನ್ನು ಟ್ಯಾಂಕರ್ ಗಳ ಮೂಲಕ ರಾತ್ರಿ ವೇಳೆ ತುಂಬಿಕೊಂಡು ಬಂದು ರಸ್ತೆ ಅಂಚಿನ ರಾಜಕಾಲುವೆಗಳ ಮೂಲಕ ಕೆರೆ ಅಂಗಳಕ್ಕೆ ಹರಿದು ಬಿಡಲಾಗುತ್ತಿದೆ.

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತಲಿನ ಚಿಕ್ಕತುಮಕೂರು, ವೀರಾಪುರ, ದೊಡ್ಡತುಮಕೂರು ಕೆರೆಗಳಿಗೆ ಕಾಖಾನೆಗಳ ತ್ಯಾಜ್ಯ ನೀರು ಹರಿದು ಕೆರೆಯಲ್ಲಿನ ನೀರಷ್ಟೇ ಅಲ್ಲದೆ ಅಂತರ್ಜಲವು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಇಲ್ಲಿನ ಜನರು ಎಚ್ಚೆತ್ತುಕೊಂಡು ತ್ಯಾಜ್ಯ ನೀರನ್ನು ಕೆರೆಗೆ ಹರಿಸುವುದರ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿದ ನಂತರ ಈಗ ಕಾರ್ಖಾನೆಗಳವರು ರಾತ್ರಿ ವೇಳೆ ಟ್ಯಾಂಕರ್ ಗಳ ಮೂಲಕ ಅರಳುಮಲ್ಲಿಗೆ ಕೆರೆಗೆ ತಂದು ಸುರಿಯುತ್ತಿದ್ದಾರೆ.

ಈ ಬಗ್ಗೆ ಯುವಸಂಚಲನ ಅಧ್ಯಕ್ಷ ಚಿದಾನಂದ್ ಅವರು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ವಿಜಯ ಅವರು ಬುಧವಾರ ಕೆರೆ ಅಂಚಿನ ರಾಜಕಾಲುಗಳಿಗೆ ಭೇಟಿ ನೀಡಿ ಅಲ್ಲಿ ಶೇಖರಣೆಯಾಗಿದ್ದ ತ್ಯಾಜ್ಯ ನೀರನ್ನು ಸಂಗ್ರಹ ಮಾಡಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಈಗ ನಿರ್ಮಾಣ ಹಂತದಲ್ಲಿ ಇರುವ ದಾಬಸ್ಪೇಟೆ-ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇರುವ ರಾಜಕಾಲುವೆಗಳಿಗೆ ರಾತ್ರಿ ವೇಳೆ ಟ್ಯಾಂಕರ್ಗಳ ಮೂಲಕ ತ್ಯಾಜ್ಯ ನೀರನ್ನು ಸುರಿದು ಹೋಗಲಾಗುತ್ತಿದೆ.

ಇದಷ್ಟೇ ಅಲ್ಲದೆ ಹೆದ್ದಾರಿ ನಿರ್ಮಾಣಕ್ಕಾಗಿ ಕೆರೆ ಅಂಗಳದಿಂದ ಮಣ್ಣು ಸಾಗಿಸಲು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ರಸ್ತೆಗಳ ಮೂಲಕವು ಕೆರೆ ಅಂಗಳಕ್ಕೆ ಹೋಗಿ ಬೃಹತ್ ಹೊಂಡಗಳಿಗು ತ್ಯಾಜ್ಯ ನೀರನ್ನು ಸುರಿದಿರುವುದು ಬೆಳಕಿಗೆ ಬಂದಿದೆ.

ಕೆರೆ ಅಂಚಿನ ಗ್ರಾಮಗಳ ಸಾರ್ವಜನಿಕರು ಹಾಗೂ ರೈತರು ಈಗಲೇ ಎಚ್ಚೆತ್ತುಕೊಂಡು ರಾತ್ರಿ ವೇಳೆ ತ್ಯಾಜ್ಯ ನೀರು ತುಂಬಿಕೊಂಡು ಬರುವ ಟ್ಯಾಂಕರ್ಗಳನ್ನು ತಡೆದು ಪೊಲೀಸರಿಗೆ ಒಪ್ಪಿಸುವ ಕೆಲಸ ತುರ್ತಾಗಿ ಮಾಡಬೇಕಿದೆ. ಇಲ್ಲವಾದರೆ ಈಗ ದೊಡ್ಡತುಮಕೂರು ಗ್ರಾಮದ ರೈತರು ಕುಡಿಯುವ ನೀರನ್ನು ಬೇರೆ ಊರಿನಿಂದ ತರಿಸಿಕೊಳ್ಳುತ್ತಿರುವ ಪರಿಸ್ಥಿಯೇ ಅರಳುಮಲ್ಲಿಗೆ ಕೆರೆ ಅಂಚಿನ ಗ್ರಾಮಗಳ ರೈತರಿಗೂ ಬರಲಿದೆ ಎಂದು ಚಿದಾನಂದ್ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *