ಬೆಂಗಳೂರು: ವಿಶ್ವ ಕುಂದಾಪುರ ಕನ್ನಡ ಹಬ್ಬವನ್ನು ಪ್ರತಿವರ್ಷವೂ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬಂದಿದೆ. ಕುಂದಾಪ್ರ ಕನ್ನಡ ಪ್ರತಿಷ್ಠಾನದ ವತಿಯಿಂದ ಆಗಸ್ಟ್ 17 ರಿಂದ 18ರವರೆಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಇಂದು ಥೀಮ್ ಸಾಂಗ್ ಮತ್ತು ಪೋಸ್ಟರ್ ಅನಾವರಣ ಕಾರ್ಯಕ್ರಮ ಮಾಗಡಿ ರಸ್ತೆಯ ಕೊಟ್ಟಿಗೆಪಾಳ್ಯದ ಸುದೀಕ್ಷಾ ಕನ್ವೆನ್ಶನ್ ಹಾಲ್ ನಲ್ಲಿ ನಡೆಯಿತು.
ಉದ್ಘಾಟಕರಾದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಮಾತಾಡಿ, ಕುಂದಾಪ್ರ ಕನ್ನಡ ಹಬ್ಬದಲ್ಲಿ ಹಲವುರು ಶ್ರಮಿಸುತ್ತಿದ್ದಾರೆ. ಸದಾ ಈ ಪ್ರಯತ್ನಕ್ಕೆ ನನ್ನ ಬೆಂಬಲ ಇರಲಿದೆ. ಕುಂದಾಪುರ ಸಂಸ್ಕ್ರತಿಗೆ ಸಂಬಂಧಿಸಿದ ಹೊಸ ಪ್ರಯೋಗ ಮಾಡುತ್ತಿದ್ದು, ಕುಂದಾಪುರ ಹಬ್ಬದಲ್ಲಿ ಅದನ್ನ ರಿವೀಲ್ ಮಾಡೋದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಸತೀಶ್ ಶೆಟ್ಟಿ, ಉಪೇಂದ್ರ ಶೆಟ್ಟಿ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ದೀಪಕ್ ಶೆಟ್ಟಿ, ರಾಘವೇಂದ್ರ ಕಾಂಚನ್, ನರಸಿಂಹ ಬೀಜಾಡಿ, ಅಜಿತ್ ಶೆಟ್ಟಿ ಉಳ್ತೂರು, ಉದಯ್ ಹೆಗ್ಡೆ ಉಪಸ್ಥಿತರಿದ್ದು ಶುಭ ಹಾರೈಸಿದರು.
*ಈ ಬಾರಿಯ ಕುಂದಾಪುರ ಕನ್ನಡದ ವಿಶೇಷತೆಗಳು*
ಬೆಂಗಳೂರಿನ ಹಲವು ಏರಿಯಾಗಳಿಂದ ಮೆರವಣಿಗೆಯೊಂದಿಗೆ ದಿಬ್ಬಣವು ಅರಮನೆ ಮೈದಾನಕ್ಕೆ ಬರಲಿದೆ. ಬಳಿಕ ನುಡಿ ಚಾವುಡಿಯ ಮೂಲಕ ಆಗಸ್ಟ್ 17 ರ ಶನಿವಾರ ಮಧ್ಯಾನ್ಹ ಉದ್ಘಾಟನಾ ಕಾರ್ಯಕ್ರಮ ಇರಲಿದೆ. ಚಿತ್ರತಾರೆಯರು, ಗಣ್ಯರು ಉಪಸ್ಥಿತರಿರಲಿದ್ದಾರೆ.
ಕುಂದಾಪುರ ಕನ್ನಡ ಹಬ್ಬದಲ್ಲಿ ಬೆಂಗಳೂರಿನಲ್ಲಿ ಅತಿದೊಡ್ಡ ಐತಿಹಾಸಿಕ ಜೋಡಾಟ ಯಕ್ಷಗಾನ, ಹಂದಾಡಿ ಮತ್ತು ತಂಡದ ಹಂದಾಡ್ತಾ ನೆಗ್ಯಾಡಿಯ ವಿಭಿನ್ನ ನಗೆನಾಟಕ, ಕುಂದಾಪುರದ ಗ್ರಾಮೀಣ ಕ್ರೀಡೆಗಳನ್ನ ಒಳಗೊಂಡ ಬಯಲಾಟ, ರಥೋತ್ಸವ, ಆಫ್ರಿಕಾದ ಜಂಬೆ- ಕುಂದಾಪುರದ ಚಂಡೆಯ ಜುಗಲ್ಬಂದಿ ಕಾರ್ಯಕ್ರಮದಲ್ಲಿ ಆಫ್ರಿಕಾ- ಕುಂದಾಪುರ ಕಲಾ ಸಮಾಗಮ, ಭುಭಬಲದ ಪರಾಕ್ರಮ ಎಂಬ ಹಗ್ಗ ಜಗ್ಗಾಟ ಸ್ಪರ್ಧೆ, ಯುವಕ-ಯುವತಿಯರಿಗಾಗಿ ಕುಂದಾಪುರ ಕನ್ನಡ ಡಿಜೆ, ಕುಂದಗೀತೆಗಳ ಡಾನ್ಸ್ ಕುಂದಾಪುರ ಡಾನ್ಸ್, ಕುಂದಾಪುರ ಕನ್ನಡ ಚಿತ್ರ ಪ್ರದರ್ಶನ, ಕುಂದಾಪುರ ನೆಲಮೂಲದ ಸಿನಿ ತಾರಾ ಮೆರಗು, ಕಡಲೂರಿನ ವಸ್ತು, ಒಡವೆ, ವಸ್ತ್ರ ಮೊದಲಾದವುಗಳ ಪ್ರದರ್ಶನ, ಮಾರಾಟ, ಕರಾವಳಿ ಖಾದ್ಯ ಮೇಳ ಸೇರಿ ಈ ಬಾರಿ ವೈವಿಧ್ಯಮಯ ಕಾರ್ಯಕ್ರಮಗಳು ಇರಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-ರೂಪೇಶ್ ಬೈಂದೂರು9535472318