ಕೋಲಾರ: ಬಲಾಢ್ಯರು, ರಾಜಕೀಯ ವ್ಯಕ್ತಿಗಳ ಕಪಿಮುಷ್ಟಿಯಲ್ಲಿರುವ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ತೆರವುಗೊಳಿಸಿ ಕಾನೂನಿನಲ್ಲಿ ಬಡವರು, ಶ್ರೀಮಂತರಿಗೆ ಒಂದೇ ಕಾನೂನು ಎಂದು ಸಾಬೀತು ಪಡಿಸಬೇಕೆಂದು ರೈತಸಂಘ ದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗರ್ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಅರಣ್ಯ ಸಚಿವರು ನೀಡಿರುವ ಹೇಳಿಕೆಯಂತೆ 1 ರಿಂದ 4 ಎಕರೆ ಒತ್ತುವರಿ ತೆರವುಗೊಳಿಸಬೇಡಿ ಎಂಬ ಆದೇಶ ಎಲ್ಲಿ ಕಳೆದುಹೋಗಿದೆ. ಜೊತೆಗೆ ದೇಶಕ್ಕೆ ಅನ್ನ ಹಾಕುವ ರೈತ ಎಂದಿಗೂ ಅರಣ್ಯ ಭೂಮಿಯನ್ನು ಕಬಳಿಸುವುದಿಲ್ಲ. ಅಮಾಯಕ ರೈತರನ್ನು ಕಂದಾಯ ಸರ್ವೇ ಅರಣ್ಯ ಅಧಿಕಾರಿಗಳೇ ದಿಕ್ಕು ತಪ್ಪಿಸಿ ದಾಖಲೆ ಮಾಡಿಕೊಳ್ಳುತ್ತೇವೆಂದು ಲಕ್ಷಲಕ್ಷ ಲಂಚ ಪಡೆದಿರುವ ಪ್ರಕರಣಗಳು ಕಣ್ಣಿಗೆ ಕಾಣಿಸುತ್ತಿಲ್ಲವೇ. ರೈತರಿಗೆ ದಾಖಲೆ ಮಾಡಿಕೊಟ್ಟಿರುವವರು ಯಾರು ಎಂದು ಮೊದಲು ಹುಡುಕಿ ಆನಂತರ ತೆರವುಗೊಳಿಸಲು ಮುಂದಾಗಿ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅರಣ್ಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾದ್ಯಂತ ಅರಣ್ಯ ಒತ್ತುವರಿದಾರರ ವಿರುದ್ಧ ನಿರಂತರವಾಗಿ ಅರಣ್ಯಾಧಿಕಾರಿಗಳು ತಮ್ಮ ಅಧಿಕಾರವನ್ನು ಉಪಯೋಗಿಸಿಕೊಂಡು ಸಾವಿರಾರು ಕೋಟಿರೂ ಬೆಲೆ ಬಾಳುವ ಸಾವಿರಾರು ಎಕರೆ ಅರಣ್ಯ ಭೂಮಿ ಉಳಿಸಿಕೊಂಡಿರುವುದಕ್ಕೆ ನಮ್ಮ ಬೆಂಬಲವಿದೆ. ಆದರೆ, ಬಲಾಢ್ಯರು ರಾಜಕೀಯ ಹಿನ್ನೆಲೆಯುಳ್ಳ ವ್ಯಕ್ತಿಗಳ ಮೇಲೆ ತಮ್ಮ ಪ್ರತಾಪ ತೋರಿಸದೆ ತನ್ನ ಕುಟುಂಬದ ಸ್ವಾಭಿಮಾನದ ಬದುಕಿಗಾಗಿ 2-3 ಎಕರೆ ಒತ್ತುವರಿ ಮಾಡಿಕೊಂಡಿರುವ ರೈತರ ಮೇಲೆ ಪೊಲೀಸ್ ಸರ್ಪಗಾವನಲಿನಲ್ಲಿ ಜೆಸಿಬಿಗಳ ಅಬ್ಬರ ಸರಿಯೇ ? ಕಾನೂನಿನಲ್ಲಿ ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಪ್ರತ್ಯೇಕ ನ್ಯಾಯವಿದೆಯೇ ಎಂದು ಪ್ರಶ್ನೆ ಮಾಡಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಬ್ಯಾಂಕ್ ನಲ್ಲಿ ಹಣ ಠೇವಣಿ ಇಟ್ಟು ಭದ್ರಪಡಿಸಿಕೊಳ್ಳುವಂತೆ ಅರಣ್ಯ ಅಧಿಕಾರಿಗಳು ಶ್ರೀಮಂತರ ಅರಣ್ಯ ಭೂ ಒತ್ತುವರಿ
ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂದು ಹೇಳುವ ಮುಖಾಂತರ ಶ್ರೀಮಂತರನ್ನು ರಕ್ಷಣೆ ಮಾಡಿ ಬಡವರ ಬದುಕನ್ನು ಬೀದಿಗೆ ತಳ್ಳುತ್ತಿರುವುದು ಅರಣ್ಯ ಅಧಿಕಾರಿಗಳಿಗೆ ನ್ಯಾಯವೆನಿಸುತ್ತದೆಯೇ ಎಂದರು.
ಜಂಟಿ ಸರ್ವೇ ಹೆಸರಿನಲ್ಲಿ ಬಲಾಢ್ಯರನ್ನು ರಕ್ಷಣೆ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ರೈತರ 3 ತಿಂಗಳ ಬೆವರ ಕಷ್ಟವನ್ನು ಅನುಭವಿಸಲು ಅವಕಾಶ ನೀಡದೆ ಕಣ್ಣ ಮುಂದೆಯೇ ರೈತರ ಬೆಳೆ ನಾಶ ಮಾಡುತ್ತಿರುವುದು ರೈತ ವಿರೋಧಿ ಧೋರಣೆಯಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಅಧಿಕಾರಿಗಳಿಗೆ ಧೈರ್ಯವಿದ್ದರೆ ಬಂಗಾರಪೇಟೆ, ಮಾಲೂರು, ಮುಳಬಾಗಲು ತಾಲೂಕಿನಾದ್ಯಂತ ಬಲಾಢ್ಯರು, ಭೂಗಳ್ಳರ ಕಪಿಮುಷ್ಟಿಯಲ್ಲಿರುವ ಅರಣ್ಯ ಭೂಮಿಯನ್ನು
ತೆರವುಗೊಳಿಸಿ ಆಗ ನಿಮ್ಮ ಧೈರ್ಯಕ್ಕೆ ನಾವು ಬೆಂಬಲಿಸುತ್ತೇವೆ. ಅದನ್ನು ಬಿಟ್ಟು, ಅಮಾಯಕ ರೈತರ ಮೇಲೆ ತಮ್ಮ ದೌರ್ಜನ್ಯ, ದಬ್ಬಾಳಿಕೆ ನಿಲ್ಲಬೇಕು. ಇಲ್ಲವಾದರೆ ಕಾನೂನನ್ನು ಕೈಗೆತ್ತಿಕೊಳ್ಳುವ ಹೋರಾಟಕ್ಕೆ ಚಾಲನೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಲಾಢ್ಯರ ಸಾವಿರಾರು ಎಕರೆ ಭೂ ಒತ್ತುವರಿ ತೆರವುಗೊಳಿಸಲು ಮುಂದಾಗಬೇಕು. ಇಲ್ಲವಾದರೆ ಈಗಾಗಲೇ ರೈತರಿಂದ ಬಲವಂತದಿಂದ ಕಾನೂನಿನ ಅಡಿಯಲ್ಲಿ ಭೂಸ್ವಾಧೀನ ಮಾಡಿಕೊಂಡಿರುವ ಜಮೀನನ್ನು ಮತ್ತೆ ರೈತರಿಗೆ ವಾಪಸ್ ನೀಡುವ ಹೋರಾಟ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಅವರು, ಯಾರೇ ಎಷ್ಟೇ ಪ್ರಭಾವಿಗಳಾದರೂ ಒಂದು ಇಂಚು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ. ಜೊತೆಗೆ ರೈತರ ದಾಖಲೆ ಇದ್ದರೆ ಆ ಜಮೀನನ್ನು ತೆರವುಗೊಳಿಸುವುದಿಲ್ಲವೆಂದು ಭರವಸೆ ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ರಾಜ್ಯ ಮುಖಂಡ ಬಂಗವಾದಿ ನಾಗರಾಜಗೌಡ, ಮಂಗಸಂದ್ರ ತಿಮ್ಮಣ್ಣ, ಗಿರೀಶ್, ಪುತ್ತೇರಿ ರಾಜು, ಸುಪ್ರೀಂ ಚಲ,
ಕದಿರಿನತ್ತ ಅಪ್ಪೋಜಿರಾವ್, ತೆರ್ನಹಳ್ಳಿ ಆಂಜಿನಪ್ಪ, ಯಲ್ಲಣ್ಣ, ಶೈಲಜ, ರತ್ನಮ್ಮ, ಗೌರಮ್ಮ, ಮುನಿವೆಂಕಟಮ್ಮ ಮುಂತಾದವರಿದ್ದರು.