ಅರಣ್ಯ ಇಲಾಖೆ ಕಿರುಕುಳ ಆರೋಪ: ಬಗರ್ ಹುಕುಂ ಸಾಗುವಳಿಗೆ ಒತ್ತಾಯಿಸಿ ಫೆ.10ರಂದು ವಿಧಾನಸೌಧ ಚಲೋ, ಅನಿರ್ದಿಷ್ಟಾವಧಿ ಧರಣಿ

ಕೋಲಾರ: ಅರಣ್ಯ ಇಲಾಖೆ ಕಿರುಕುಳ, ಬಗರ್ ಹುಕುಂ ಸಾಗುವಳಿ ಪಿ.ನಂಬರ್ ದುರಸ್ತಿ ಮನೆ ನಿವೇಶನ, ಕಾರ್ಪೋರೇಟ್ ಕಂಪನಿಗಳಿಗೆ ಕೃಷಿ ಭೂಮಿ ವಹಿಸಿಕೊಡುವುದನ್ನು ತಕ್ಷಣ ನಿಲ್ಲಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಕೃಷಿಕೂಲೀಕ ಫೆಬ್ರುವರಿ 10ರಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕ ಉಪಾಧ್ಯಕ್ಷ ಪಿ.ಆರ್ ಸೂರ್ಯನಾರಾಯಣ ತಿಳಿಸಿದರು.

ನಗರದ ಪಾಲಸಂದ್ರ ಲೇಔಟ್ ನಲ್ಲಿರುವ ಕಚೇರಿಯಲ್ಲಿ ಜಿಲ್ಲಾ ಸಮಿತಿ ಸಭೆಯ ನಂತರ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು ಕೋಲಾರ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಡವರಿಗೆ ಒಂದು ಕಾನೂನು ಶ್ರೀಮಂತರಿಗೆ ಬಲಿಷ್ಠರಿಗೆ ಒಂದು ಕಾನೂನು ತಂದಿದ್ದಾರೆ ದೇಶದಲ್ಲಿ ಬಲವಂತದ ಭೂ ಸ್ವಾಧೀನ ಹಾಗೂ ಮೋಸದ ಭೂ ಬೆಲೆ ನಿಗದಿಸಿ ವಂಚಿಸುವುದನ್ನು ತಡೆಯಬೇಕು. ಬಗರ್ ಹುಕುಂ, ಅರಣ್ಯ ಭೂಮಿ ಸಾಗುವಳಿ ನಿರತ ಬಡವರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಿ ಹಕ್ಕುಪತ್ರ ನೀಡಲು ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು

ಕೃಷಿ ಭೂಮಿಗಾಗಿ ಹಾತೊರೆಯುತ್ತಿರುವ ಭೂ ವಂಚಿತ ದಲಿತರು, ಕೂಲಿಕಾರ್ಮಿಕರು, ಇತರೆ ವಲಯದ ಕಾರ್ಮಿಕರಿಗೆ ನೀರಾವರಿ ಕೃಷಿ ಭೂಮಿ ಹಾಗೂ ನಿವೇಶನ ರಹಿತರಿಗೆ ನಿವೇಶನ ಸಹಿತ ವಸತಿಯನ್ನು ಉಚಿತವಾಗಿ ಒದಗಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಗಳ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದ ಎದುರು ಹತ್ತು ಸಾವಿರ ರೈತರು ಹಾಗೂ ಕೂಲಿಕಾರರು ಅನಿರ್ಧಿಷ್ಟವಧಿಯ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬಡವರು ಹಾಗೂ ಎಲ್ಲ ದುಡಿಯುವ ಜನರ ವಿರುದ್ದವಾಗಿ ಬಹುರಾಷ್ಟ್ರೀಯ ಸಂಸ್ಥೆಗಳ ಪರವಾದ ನವ ಉದಾರೀಕರಣದ ಕೃಷಿ ನೀತಿಗಳನ್ನು ಬಲವಂತವಾಗಿ ಹೇರುತ್ತಿವೆ. ಇದರ ಭಾಗವಾಗಿ ರೈತರ ಭೂಮಿ ಪಡೆಯಲು ಯತ್ನಿಸುತ್ತಿವೆ ಹೋರಾಟಗಳನ್ನು ಹತ್ತಿಕ್ಕಲು ಬಂಡವಾಳದಾರರ ಜೊತೆ ಕೈ ಜೋಡಿಸಿವೆ. ಕೋಮುವಾದಿ, ಜಾತಿವಾದಿ ಶಕ್ತಿಗಳು ಒಟ್ಟಾಗಿ ದೇಶದ ಮೇಲೆ ಸರ್ವಾಧಿಕಾರ ಹೇರಲು ಹವಣಿಸುತ್ತಿವೆ ಎಂದು ಆರೋಪ ಮಾಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಉಪಾಧ್ಯಕ್ಷರಾದ ಗಂಗಮ್ಮ, ಅಲಹಳ್ಳಿ ವೆಂಕಟೇಶಪ್ಪ, ಸಹ ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಮಾಲೂರು ವೆಂಕಟಪ್ಪ, ಮುಖಂಡರಾದ ನಾರಾಯಣಪ್ಪ, ಶ್ರೀಧರ್ ರೆಡ್ಡಿ, ಎಂ.ಎಸ್.ನಾಗರಾಜ್, ಎನ್.ಯಲ್ಲಪ್ಪ ಮುಂತಾದವರ ಇದ್ದರು.

Leave a Reply

Your email address will not be published. Required fields are marked *