ಕೋಲಾರ: ರೈತರಿಗೆ ತೊಂದರೆ ಕೊಡುತ್ತಿರುವ ಅರಣ್ಯ ಇಲಾಖೆ ಕ್ರಮ ಖಂಡಿಸಿ ಜಿಲ್ಲೆಯ ದಳಸನೂರಿನಲ್ಲಿ ರೈತರು ಹಾಗೂ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಸಾಗುವಳಿ ಜಮೀನನ್ನು ರಾತ್ರೋರಾತ್ರಿ ವಶಪಡಿಸಿಕೊಂಡು ಬೆಳೆ ಹಾಗೂ ಮಾವಿನ ಮರ ನಾಶ ಮಾಡಿದ್ದಾರೆ. ಈ ಸಂಬಂಧ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ, ಜಂಟಿ ಸರ್ವೇ ಮಾಡದೇ ರೈತರ ಮೇಲೆ ದೌರ್ಜನ್ಯ ಹಾಗೂ ದಬ್ಬಾಳಿಕೆ ಮುಂದುವರಿಸಿದ್ದಾರೆ. ಇವರಿಗೆ ಕುಮ್ಮಕ್ಕು ಕೊಡುತ್ತಿರುವ ಸರ್ಕಾರದ ನಡೆ ಖಂಡಿಸಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದರು.
ಜಂಟಿ ಸಮೀಕ್ಷೆ ನಡೆಸಬೇಕೆಂದು ಆಗ್ರಹಿಸಿದ ಗ್ರಾಮಸ್ಥರು ಹಾಗೂ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಊರಿನೊಳಗೆ ಮೆರವಣಿಗೆ ತೆರಳಿ ಬೇಕೇ ಬೇಕು ಭೂಮಿ ಬೇಕು, ನ್ಯಾಯಕ್ಕಾಗಿ ರಕ್ತ ಚೆಲ್ಲುತ್ತೇವೆ ಎಂದು ಘೋಷಣೆ ಹಾಕಿದರು. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು. ಈ ಸಂಬಂಧ ಗ್ರಾಮದ ಪ್ರವೇಶ ದ್ವಾರದಲ್ಲಿ ಮತದಾನ ಬಹಿಷ್ಕರಿಸುವ ಬ್ಯಾನರ್ ಕೂಡ ಕಟ್ಟಿದ್ದಾರೆ.
ಗ್ರಾಮದ ಮುಖಂಡ ವೀರಭದ್ರಗೌಡ ಮಾತನಾಡಿ, ಜನಪ್ರತಿನಿಧಿಗಳು ರೈತರ ಹೆಸರಲ್ಲಿ ಪ್ರಮಾಣ ಮಾಡುತ್ತಾರೆ. ಆದರೆ, ಚುನಾವಣೆ ಮುಗಿದ ಮೇಲೆ ರೈತರನ್ನು ತುಳಿಯುತ್ತಾರೆ. ರೈತರಿಗೆ ನ್ಯಾಯ ಸಿಗುವವರೆಗೆ ಮತದಾನ ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಇ ಆಮೇಲೆ ಕ್ರಮ ಕೈಗೊಳ್ಳಲಿ. ಒತ್ತುವರಿ ತೆರವು ಕಾರ್ಯಾಚರಣೆ ನೆಪದಲ್ಲಿ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಬಡ ರೈತರನ್ನು ಒಕ್ಕಲೆಬ್ನೆಸಿದರೆ ಅವರು ಏನು ಮಾಡಬೇಕು. ಆತ್ಮಹತ್ಯೆ ಮಾಡಿಕೊಳ್ಳದೇ ಬೇರೆ ದಾರಿ ಇಲ್ಲ ಎಂದರು.
ರೈತ ಮುಖಂಡ ವೀರಭದ್ರಸ್ವಾಮಿ ಮಾತನಾಡಿ, ಸರ್ಕಾರ ಅರಣ್ಯ ಇಲಾಖೆ ಮುಂದಿಟ್ಟುಕೊಂಡು ರೈತರ ಮೇಲೆ ದೌರ್ಜನ್ಯ ಎಸಗುತ್ತಿದೆ. ರೈತರ ಪರ ಯಾರೂ ಧ್ವನಿ ಎತ್ತುತ್ತಿಲ್ಲ ಲಕ್ಷಾಂತರ ಮೌಲ್ಯದ ಬೆಳೆ ನಾಶ ಮಾಡಿದ್ದಾರೆ. ಸಮಯ ಕೊಡಿ ಎಂದು ಮನವಿ ಮಾಡಿದರೂ ಕೇಳಲಿಲ್ಲ ಎಂದು ವಾಗ್ದಾಳಿ ನಡೆಸಿದರು ಇದಕ್ಕೆ ದಳಸನೂರು ಗ್ರಾಮಸ್ಥರು ಮಾತ್ರವಲ್ಲ ಅಕ್ಕಪಕ್ಕದ ಗ್ರಾಮಸ್ಥರು ಕೂಡ ಮತದಾನ ಬಹಿಷ್ಕರಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಜಗದೀಶ್, ಗ್ರಾಮಸ್ಥರಾದ ಗೋಪಾಲರೆಡ್ಡಿ, ಟಿ.ರಾಮಯ್ಯ, ಬಾಷ ಸಾಬಿ, ಬಳಗೆರೆ ವೆಂಕಟೇಶಪ್ಪ, ರಾಜಶೇಖರ್, ನಂದೀಶ್, ಕೃಷ್ಣಪ್ಪ, ಸೇರಿದಂತೆ ರೈತರು ಇದ್ದರು