ಕೋಲಾರ: ಬಗರ್ ಹುಕ್ಕುಂ ಸಾಗುವಳಿದಾರರಿಗೆ ಅರಣ್ಯ ಇಲಾಖೆಯು ನೀಡುತ್ತಿರುವ ಕಿರುಕುಳವನ್ನು ಕೈಬಿಡಲು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ ಅನ್ನದಾತರು ಆಳುವ ಸರ್ಕಾರಗಳ ಧೋರಣೆಗಳಿಂದ ವಂಶಪಾರಂಪರ್ಯವಾಗಿ ನಂಬಿದ್ದ ಕೃಷಿಯಿಂದ ದೂರ ಉಳಿಯುವಂತಾಗಿದೆ. ಕಾರ್ಪೋರೇಟೀಕರಣದ ಕೃಷಿಯನ್ನು ಬೆಂಬಲಿಸುತ್ತಿರುವ ಸರ್ಕಾರಗಳು, ಅದಕ್ಕೆ ರಕ್ಷಕರಾಗಿ ನಿಂತಿರುವ ಅಧಿಕಾರಿಶಾಹಿ ವರ್ಗ ನೀತಿಗಳಿಂದ ಈ ದೇಶದ ರೈತರು ದಿನ ನಿತ್ಯ ಹತ್ತು ಹಲವು ಸಂಕಷ್ಟಗಳನ್ನು ಎದುರಿಸುಂತಾಗಿದೆ ಎಂದು ಆರೋಪಿಸಿದರು.
ಮೊದಲಿನಿಂದಲೂ ಕೃಷಿ ಮಾಡುವ ರೈತರು ಈ ನೆಲದ ಭೂಮಿಯನ್ನೇ ನಂಬಿ ಬದುಕುತ್ತಾ ಬಂದಿದ್ದಾರೆ. ಹಾಗಾಗಿಯೇ ಹಿಂದಿನ ಮೈಸೂರು ಮಹಾರಾಜರ ಸರ್ಕಾರದ ನಂತರ ಪ್ರಜಾಪ್ರಭುತ್ವ ಸರ್ಕಾರಗಳು ರೈತರಿಗೆ ಭೂಮಿಯನ್ನು ಹಂಚುವ ಕೆಲಸ ಮಾಡುತ್ತಾ ಬಂದಿದೆ ಕಾನೂನು ಬದ್ಧವಾಗಿ ರೈತರಿಗೆ ಭೂಮಿ ಹಂಚಲು ಕರ್ನಾಟಕದಲ್ಲಿ 40ಕ್ಕೂ ಹೆಚ್ಚು ಬಾರಿ ಕಂದಾಯ ಮತ್ತು ಭೂಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದು ಭೂಹೀನರಿಗೆ, ಸಣ್ಣ ರೈತರಿಗೆ ಹಾಗೂ ದಲಿತರಿಗೆ ಭೂಮಿ ಹಂಚಲಾಗಿದೆ. ಭೂಕಾಯ್ದೆಗಳಿಂದ ಕೋಲಾರ ಜಿಲ್ಲೆಯಾದ್ಯಂತ ಲಕ್ಷಾಂತರ ರೈತರು ಕಾನೂನು ಬದ್ಧವಾಗಿ ಭೂಮಿಯ ಹಕ್ಕುದಾರರಾಗಿದ್ದಾರೆ ಆದರೂ ಅವರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡಿ ಸರ್ಕಾರದ ನಿಯಮಾನುಸಾರ ಸಾಗುವಳಿ ಚೀಟಿಯನ್ನು ಪಡೆದು, ಪೋಡಿ ಮಾಡಿಕೊಂಡು ಹೊಸ ಸರ್ವೆ ನಂಬರ್ ಪಡೆದು ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕೃಷಿ ಮಾಡುತ್ತಿದ್ದಾರೆ. ರೈತರು ತಮ್ಮ ಜಮೀನನನ್ನು ಅಭಿವೃದ್ಧಿ ಪಡಿಸಲು, ಬೆಳೆ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಮೀನಿನಲ್ಲಿ ಕೊಳವೆ ಬಾವಿ. ಇತರೆ ಬೆಳೆಗಳನ್ನು ಬೆಳೆಯಲು ಇದೇ ಜಮೀನಿನ ಮೇಲೆ ಬ್ಯಾಂಕ್ ಮತ್ತು ಖಾಸಗಿಯವರಿಂದ ಸಾಲ ಸಹ ಪಡೆದಿರುತ್ತಾರೆ. ಇಂತಹ ಸಂದರ್ಭದಲ್ಲ ಅರಣ್ಯ ಇಲಾಖೆಯವರು ಪೊಲೀಸ್ ಬಂದೋಬಸ್ತ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯ ಸಹಾಯದಿಂದ ಅಕ್ರಮವಾಗಿ ರೈತರ ಜಮೀನಿನಲ್ಲಿ ಇದ್ದ ತರಕಾರಿ ಬೆಳೆಗಳು, ರೇಷ್ಮೆ ಗಿಡಗಳು, ಮಾವಿನ ಮರಗಳು, ಪಾಲಿ ಹೌಸ್ ಮತ್ತು ನೆಟ್ ಹೌಸ್‌ಗಳನ್ನು ನಾಶಪಡಿಸಿ ಭೂಮಿಯನ್ನು ದೌರ್ಜನ್ಯದಿಂದ ವಶಕ್ಕೆ ಪಡೆಯುತ್ತಿರುವ ಖಂಡನೀಯ. ಈ ವಿಚಾರದಲ್ಲಿ ಹಲವು ರೈತರು ಕೋರ್ಟ್‌ನಲ್ಲಿ ಕೇಸು ಹಾಕಿ ಜಂಟಿ ಸರ್ವೆ ಮಾಡಲು ಆದೇಶವಾಗಿದ್ದರೂ ರೈತರ ಗಮನಕ್ಕೆ ತರದೇ. ಯಾವುದೇ ನೋಟೀಸು ನೀಡದೇ ಜಂಟಿ ಸರ್ವೆ ಆಗಿದೆ ಎಂದು ಹೇಳುವುದು ಅನುಮಾನಾಸ್ಪದವಾಗಿದೆ. ಅಧಿಕಾರಿಗಳು ಕಛೇರಿಯಲ್ಲಿ ಕುಳಿತು ನಕಲಿ ದಾಖಲೆಗಳನ್ನು ಸೃಷ್ಟಿಸಿ. ಜಂಟಿ ಸರ್ವೆ ಆಗಿದೆ ಎಂದು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಕರ್ನಾಟಕ ಸರ್ಕಾರ 3 ಎಕರೆಗಿಂತ ಕಡಿಮೆ ಇರುವ ರೈತರ ಭೂಮಿಯನ್ನು ಯಾವುದೇ ಕಾರಣಕ್ಕೆ ಒತ್ತುವರಿ ತೆರವು ಮಾಡಬಾರದೆಂದು ಹೇಳಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ನಮ್ಮ ಜಿಲ್ಲೆಯಲ್ಲಿ ಪದೇ ಪದೇ ರೈತರಿಗೆ ತೊಂದರೆ ನೀಡುವುದನ್ನು ನಿಲ್ಲಿಸಬೇಕು. ಈ ವಿಚಾರವಾಗಿ ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ ರೈತರ ಜಮೀನನ್ನು ರೈತರಿಗೆ ಉಳಿಸಬೇಕು. ಹಾಗೂ ಅಕ್ರಮವಾಗಿ ರೈತರ ಜಮೀನಿಗೆ ಪ್ರವೇಶ ಮಾಡಿ, ಬೆಳೆ ನಷ್ಟ ಮಾಡಿರುವ ರೈತರಿಗೆ ಅರಣ್ಯ ಇಲಾಖೆಯಿಂದ ನಷ್ಟ ಪರಿಹಾರ ಕೊಡಿಸಬೇಕು ಮತ್ತು ಅಕ್ರಮವಾಗಿ ಪ್ರವೇಶ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಯುಕ್ತ ಹೋರಾಟ ಸಮಿತಿ ಮುಖಂಡರಾದ ಪಾತಕೋಟೆ ನವೀನ್ ಕುಮಾರ್, ಗಾಂಧಿನಗರ ನಾರಾಯಣಸ್ವಾಮಿ, ಗಂಗಮ್ಮ, ಪಿ.ಶ್ರೀನಿವಾಸ್, ವೆಂಕಟಪ್ಪ, ಸೈಯದ್ ಫಾರೂಕ್, ಕೆ.ಅನಂದ್ ಕುಮಾರ್ , ಅಲಹಳ್ಳಿ ವೆಂಕಟೇಶಪ್ಪ, ವಿ.ನಾರಾಯಣರೆಡ್ಡಿ, ಕೋಟಿಗಾನಹಳ್ಳಿ ಗಣೇಶ್ ಗೌಡ, ಹರಟಿ ಪ್ರಕಾಶ್, ಶಂಕರಪ್ಪ, ಚಿನ್ನಾಪುರ ಮಂಜುನಾಥ, ಸೀಸಂದ್ರ ವೆಂಕಟಾಚಲಪತಿ, ರಾಮಚಂದ್ರ, ರಾಜಪ್ಪ, ವೆಂಕಟೇಶಪ್ಪ ಮುಂತಾದವರು ಹಾಜರಿದ್ದರು.