ದೊಡ್ಡಬಳ್ಳಾಪುರದಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ಸುಮರು 2ಸಾವಿರ ಕಿಲೋ ಮೀಟರ್ ದೂರವಿದ್ದು, ಅಷ್ಟು ದೂರ ಹಗಲು ರಾತ್ರಿ ಎನ್ನದೇ ರಾಮನ ದರ್ಶನ ಪಡೆಯಲು ಬಸಪ್ಪ ಪಯಣ ಬೆಳೆಸಿದೆ.
ಬಸಪ್ಪನ ಪ್ರಯಾಣಕ್ಕಾಗಿಯೇ ಪ್ರತ್ಯೇಕವಾಗಿ ಬಸ್ಸೊಂದನ್ನು ತಯಾರು ಮಾಡಿಸಲಾಗಿದೆ. ಬಸಪ್ಪನಿಗೆ ಮರ್ಯಾದಾ ಪುರುಷ ರಾಮನ ದರ್ಶನ ಮಾಡಿಸಲು ವಾಸುದೇವಾ ಚಾರ್ ಅವರು ಜವಾಬ್ದಾರಿ ಹೊತ್ತಿದ್ದು, ಕಳೆದು ಒಂದು ವರ್ಷದಿಂದ ಸಕಲ ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ.
ನಿನ್ನೆ (ಸೆ.19) ದಿನ್ನೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಾಸುದೇವಾ ಚಾರ್ ನೇತೃತ್ವದಲ್ಲಿ ಎಲ್ಲಾ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಬಸಪ್ಪನ ಯಾತ್ರೆಗೆ ಚಾಲನೆ ನೀಡಲಾಯಿತು.
ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ವಾಸುದೇವಾ ಚಾರ್, ಇದೇ ಮೊದಲ ಬಾರಿಗೆ ಅಯೋಧ್ಯೆ ರಾಮನ ದರ್ಶನಕ್ಕಾಗಿ ದಿನ್ನೆ ಆಂಜನೇಯ ಸ್ವಾಮಿಯ ಪ್ರತ್ಯಂಗಿರ ಮಹಾಕಾಳಿ ಬಸಪ್ಪ ಎಂಬ ಹೆಸರಿನಲ್ಲಿರುವ ಎತ್ತು ಹೊರಟಿದೆ. ಅದೇರೀತಿ ರಾಮಸೇತು ಕಲ್ಲು ಸಹ ಜೊತೆಯಲ್ಲಿ ಇರಲಿದೆ. ಅಯೋಧ್ಯೆಯ ಗಂಗಾ ನದಿಯಲ್ಲಿ ಬಸಪ್ಪನಿಗೆ ಗಂಗಾ ಸ್ನಾನ ಮಾಡಿಸಿ ರಾಮನ ದರ್ಶನ ಮಾಡಿಸಲಾಗುವುದು. ಇದಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.
ರಾಮನ ದರ್ಶನ ನಂತರ ಕಾಶಿ ವಿಶ್ವೇಶ್ವರ ಸನ್ನಿಧಿ, ವರಾಹಿ, ರಾಮಜನ್ಮಭೂಮಿ, ಗಂಡಕ್ಕಿ ನದಿ, ಗಯಾ ಸೇರಿದಂತೆ ಇನ್ನಿತರ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲಾಗುವುದು ಎಂದರು.