ಕೋಲಾರ: ತಾಲೂಕಿನ ಅಮ್ಮನಲ್ಲೂರು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 18 ಮಂದಿ ಅಸ್ವಸ್ಥರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಶಾಸಕ ಕೊತ್ತೂರು ಮಂಜುನಾಥ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿ, ತಪ್ಪಿಸ್ಥರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾಸ್ಟೆಲ್‌ನಲ್ಲಿ ಶುಕ್ರವಾರದಂದು ದೋಸೆ ಸೇವಿಸಿ ಅಸ್ವಸ್ಥಗೊಂಡಿದ್ದ ೧೮ ಮಕ್ಕಳು ಚಿಂತಾಮಣಿ ಸರಕಾರಿ ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿ, ಚೇತರಿಕೆಯಾದ ಬಳಿಕ ಮನೆಗಳಿಗೆ ತೆರಳಿದ್ದರು.ಐವರು ಮಾತ್ರ ಚಿಂತಾಮಣಿಯ ಆಸ್ಪತ್ರೆಯಲ್ಲಿ ಶನಿವಾರವೂ ಚಿಕಿತ್ಸೆ ಪಡೆಯುತ್ತಿದ್ದರಿಂದಾಗಿ ಶಾಸಕರು ಆಸ್ಪತ್ರೆಗೆ ತೆರಳಿ ಮಕ್ಕಳ ಆರೋಗ್ಯ ವಿಚಾರಿಸಿದ ಬಳಿಕ ಹಾಸ್ಟೆಲ್‌ಗೆ ಭೇಟಿ ನೀಡಿದರು.
ಕಿಡಿಕಾರಿದ ಶಾಸಕ:
ಹಾಸ್ಟೆಲ್ ಆವರಣಕ್ಕೆ ಬರುತ್ತಿದ್ದಂತೆಯೇ ಸ್ವಚ್ಛತೆಯನ್ನು ಗಮನಿಸಿದ ಕೊತ್ತೂರು ಮಂಜುನಾಥ್, ಇಷ್ಟು ಸ್ವಚ್ಛವಾಗಿ ಇವತ್ತು ನಾವು ಬರತ್ತೇವೆ ಅಂತ ಇಟ್ಟುಕೊಂಡಿದ್ದೀರಿ, ಇದು ಇವತ್ತು ಮಾಡಿರುವ ಕೆಲಸವಲ್ಲವೇ ಎಂದು ಪ್ರಶ್ನಿಸಿದರು. ಹಾಸ್ಟೆಲ್‌ನ ಅಡುಗೆ ಕೋಣೆಗೆ ತೆರಳಿ ನೀರು ಕುಡಿದರು. ಅದೂ ಸರಿಯಾಗಿ ಫಿಲ್ಟರ್ ಆಗಿರಲಿಲ್ಲ. ಬಳಿಕ ದಾಸ್ತಾನು ಕೊಠಡಿಗೆ ತೆರಳಿದಾಗ ವಿವಿಧ ಆಹಾರ ಪದಾರ್ಥಗಳಲ್ಲಿ ಹುಳ ಇದ್ದುದು ಕಂಡುಬಂದಿತು.
ಈ ವೇಳೆ ಅಸಮಧಾನ ವ್ಯಕ್ತಪಡಿಸಿದ ಅವರು, ಹಾಸ್ಟೆಲ್‌ನಲ್ಲಿ ಇರುವುದು ಬಡವರ ಮಕ್ಕಳು. ನಿಮ್ಮ ಮನೆಗಳಲ್ಲಿ ಮಕ್ಕಳಿಗೆ ಇಂತಹ ಪದಾರ್ಥಗಳಲ್ಲಿನ ಊಟ ನೀಡುತ್ತೀರಾ ಎಂದು ಕಿಡಿಕಾರಿದರು. ಬಳಿಕ ವಾರ್ಡನ್ ಕಚೇರಿಗೆ ತೆರಳಿದಾಗ ಅಲ್ಲಿನ ಸ್ವಚ್ಛತೆ ಕಂಡು ನಿಮಗೆ ಫ್ಯಾನ್, ಕೂಲರ್, ಕೊಠಡಿ ಸ್ವಚ್ಛತೆ ಎಲ್ಲವೂ ಸರಿಯಾಗಿ ಇರಬೇಕು ಆದರೆ ಮಕ್ಕಳಿಗೆ ಬೇಡವಾ ಎಂದು ಪ್ರಶ್ನಿಸಿದರು. ಸ್ಥಳದಲ್ಲಿದ್ದ ವಾರ್ಡನ್ ನಾನು ರಜೆಯ ಮೇಲೆ ಊರಿಗೆ ಹೋಗಿದ್ದೆ ಸರ್, ಅಡುಗೆ ಸಹಾಯಕರಿಗೆ ಜವಾಬ್ದಾರಿ ನೀಡಿದ್ದೆ ಸರ್ ಎಂದಷ್ಟೇ ಹೇಳುತ್ತಿದ್ದನು.
ಈ ವೇಳೆ ಸುತ್ತಮುತ್ತಲಿನ ಗ್ರಾಮಸ್ಥರು ಮುಖಂಡರು ಹಾಸ್ಟೆಲ್ ಅವ್ಯವಸ್ಥೆಗಳ ಬಗ್ಗೆ ದೂರುಗಳ ಸುರಿಮಳೆಗೈದರು. ಈ ವೇಳೆ ಅಸಮಧಾನಗೊಂಡ ಶಾಸಕರು, ಘಟನೆಯ ವಿಚಾರವಾಗಿ ಇಲ್ಲಿನ ವಾರ್ಡನ್ ಹಾಗೂ ಅಡುಗೆ ಸಹಾಯಕನನ್ನು ಅಮಾನತುಗೊಳಿಸಿ, ಬೇರೆ ಕಡೆಗೆ ವರ್ಗಾವಣೆ ಮಾಡಲು ನೀವು ಕ್ರಮಕೈಗೊಳ್ಳಿ, ನಿಮ್ಮ ವಿರುದ್ಧ ಕ್ರಮಕೈಗೊಳ್ಳಲು ಸಚಿವರು, ಸಿಎಂ ಬಳಿ ನಾನು ಚರ್ಚೆ ನಡೆಸುವುದಾಗಿ ಅಲ್ಲಿಯೇ ಇದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್ ಹಾಗೂ ತಾಲೂಕು ಸಹಾಯಕ ನಿರ್ದೇಶಕ ಚನ್ನಬಸಪ್ಪರಿಗೆ ಎಚ್ಚರಿಸಿದರು.
ಹಾಸ್ಟೆಲ್‌ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಮಕ್ಕಳಿಗೆ ಅನ್ಯಾಯ ಮಾಡುವವರು ಯಾರೇ ಆಗಿದ್ದರೂ ಕುಷ್ಠರೋಗ, ಹೃದಯಾಘಾತ, ಬಿಪಿ, ಶುಗರ್, ಕ್ಯಾನ್ಸರ್, ಟಿಬಿ ಸೇರಿದಂತೆ ಎಲ್ಲ ರೋಗಗಳೂ ಬರುತ್ತವೆ ಎಂದು ಶಾಪ ಹಾಕಿದರು. ಘಟನೆಗೆ ಸಂಬಂಧಿಸಿದಂತೆ ಅಡುಗೆ ಸಹಾಯಕನ ಅಮಾನತಿಗೆ ಸೂಚಿಸಿದ್ದು, ಬೇರೆ ಕಡೆಗೆ ವರ್ಗಾಯಿಸುತ್ತೇವೆ. ಅಲ್ಲದೆ ಹಾಸ್ಟೆಲ್‌ನಲ್ಲಿ ಕೆಲ ಆಹಾರ ಪದಾರ್ಥಗಳಲ್ಲಿ ಹುಳ ಕಂಡುಬಂದಿದ್ದು, ಆಹಾರ ಸರಬರಾಜುದಾರರನ್ನು ಕೂಡಲೇ ಬದಲಾಯಿಸುತ್ತೇವೆ. ಇಲಾಖೆಯ ತಾಲೂಕು-ಜಿಲ್ಲಾ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಸಚಿವರ ಗಮನಕ್ಕೆ ದಾಖಲೆ ಸಮೇತ ದೂರು ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ ಬಡವರು, ದಲಿತರ ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳುವುದಕ್ಕೆ ಆಗದಿದ್ದರೆ ನಿಮಗೆ ಅಧಿಕಾರಿಯಾಗಿರುವ ಅರ್ಹತೆ ಹೊಂದಿರುವವರಲ್ಲ. ಸರಕಾರವು ಬಡವರ ಮಕ್ಕಳ ಶಿಕ್ಷಣಕ್ಕೆ, ಹಾಸ್ಟೆಲ್‌ಗಳಿಗೆ ಅನುದಾನ, ಸೌಲಭ್ಯ ಕೊಡುತ್ತಿದ್ದರೂ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮಾಡಬೇಕಾದ ನೀವು ನಿರಂತರ ನಿಗಾ ಏಕೆ ವಹಿಸಲಿಲ್ಲ ? ನಿರಂತರವಾಗಿ ಹಾಸ್ಟೆಲ್ ಗಳಿಗೆ ಶಾಲೆಗಳಿಗೆ ಭೇಟಿ ನೀಡಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಉರಟ ಅಗ್ರಹಾರ ಚೌಡರೆಡ್ಡಿ, ಜಾಗೃತಿ ಸಮಿತಿ ಸದಸ್ಯರಾದ ಸಿ.ಕೆ.ರವೀಂದ್ರನಾಥ್, ಬೈರನಹಳ್ಳಿ ನಾಗೇಶ್, ಮುಂತಾದವರು ಇದ್ದರು.