ಡಾ. ಬಿ ಆರ್ ಅಂಬೇಡ್ಕರ್ ಅವರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಮತ್ತು ಕೇಂದ್ರ ಗೃಹ ಸಚಿವಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಎಸ್ ಎಫ್ ಐ ಮುಳಬಾಗಿಲು ತಾಲೂಕು ಸಮಿತಿ ವತಿಯಿಂದ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ SFI ತಾಲೂಕು ಕಾರ್ಯದರ್ಶಿ ಅಜಯ್ ಕುಮಾರ್ ಮಾತನಾಡಿ, ಡಾ. ಬಿ ಆರ್ ಅಂಬೇಡ್ಕರ್ ಅವರ ಹೆಸರನ್ನು ತೆಗೆದುಕೊಳ್ಳುವುದು ಫ್ಯಾಷನ್ ಆಗಿಬಿಟ್ಟಿದೆ ಎಂದು ಟೀಕಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ದೇವರ ಹೆಸರನ್ನು ಪದೇ ಪದೇ ಹೇಳಿದರೆ 7 ಪಟ್ಟು ಸ್ವರ್ಗ ಗ್ಯಾರಂಟಿ ಎಂದು ಹೇಳಿದ್ದಾರೆ. ಇಂತಹ ಹೇಳಿಕೆಯು ಆರೆಸ್ಸೆಸ್-ಬಿಜೆಪಿಯ ಜಾತಿವಾದಿ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ. ಬಿಜೆಪಿ ಸರ್ಕಾರ ನಿರಂತರವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ದೂರಿದರು.
ಶಿಕ್ಷಣ ಕ್ಷೇತ್ರದಲ್ಲೂ ಕೇಂದ್ರ ಸರ್ಕಾರ ಬಹಿರಂಗವಾಗಿ ದಲಿತ ವಿರೋಧಿ ಧೋರಣೆ ಪ್ರದರ್ಶಿಸುತ್ತಿದೆ. SC/ST ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ನಿಗದಿಪಡಿಸಲಾದ ಮೊತ್ತವು ಕ್ಯಾಬಿನೆಟ್ ಮೀಸಲಿಟ್ಟ ಅರ್ಧಕ್ಕಿಂತ ಕಡಿಮೆ ಮೊತ್ತ ನೀಡಿದೆ. ಇನ್ನು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನದ ಶೇ.0.1ರಷ್ಟು ಹಣವನ್ನು ಮಾತ್ರ ವಿತರಿಸಲಾಗಿದೆ. ಇದಲ್ಲದೆ ನಿರಂತರ ಶುಲ್ಕ ಹೆಚ್ಚಳವು ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಇನ್ನಷ್ಟು ದುಬಾರಿಯಾಗಿಸಿದೆ. ಇದರಿಂದ ತಳ ಸಮುದಾಯದ ಮಕ್ಕಳು ಉನ್ನತ ಶಿಕ್ಷಣಕ್ಕೆ ಪ್ರವೇಶಿಸಲಾಗುತ್ತಿಲ್ಲ ಎಂದು ಆರೋಪಿಸಿದರು.
ಆರ್‌ಎಸ್‌ಎಸ್-ಬಿಜೆಪಿ ಸರ್ಕಾರ, ಸಾವರ್ಜನಿಕ ವಿಶ್ವವಿದ್ಯಾನಿಲಯಗಳನ್ನು ಧಮನ ಮಾಡುತ್ತಿದೆ. ಐಐಟಿಗಳಂತಹ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಶೇ.56ಪ್ರತಿಶತದಷ್ಟು ಆತ್ಮಹತ್ಯೆಗಳು ಹೆಚ್ಚಿವೆ. ಇವರೆಲ್ಲ ಅಂಚಿನಲ್ಲಿರುವ ಜಾತಿಗಳು, ತಳ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಾಗಿದ್ದಾರೆ. ಇವರ ಕ್ರೂರ ನಡೆಯಿಂದ ರೋಹಿತ್ ವೇಮುಲನ ಸಾಂಸ್ಥಿಕ ಹತ್ಯೆಯಲ್ಲಿ ಬಿಜೆಪಿ ಸರ್ಕಾರದ ಸಂಪೂರ್ಣ ಕೈವಾಡ ಇದೆ ಎಂದು ದೇಶದ ಜನ ಗಮನಿಸಿದ್ದಾರೆ ಹೇಳಿದರು.
ಡಾ. ಬಿ ಆರ್ ಅಂಬೇಡ್ಕರ್ ಅವರ ಪರಂಪರೆಯನ್ನು ಹಾಳುಮಾಡಲು ಮತ್ತು ಅನಿಷ್ಟ ಜಾತೀಯತೆಯನ್ನು ಮುಂದಿಡಲು ಮಾತ್ರ ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಳ್ಳುವ ಬಿಜೆಪಿ ವಿರುದ್ಧ SFI ಕಾಲೇಜು ಕ್ಯಾಂಪಸ್‌ಗಳಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ರೂಪಿಸುತ್ತಿದೆ. ಅಂಬೇಡ್ಕರ್ ಅವರ ಅಪ್ರತಿಮ ಪರಂಪರೆಯನ್ನು ಕಾಪಾಡುವಲ್ಲಿ ನಾವು ದೃಢಸಂಕಲ್ಪ ಹೊಂದಿದ್ದೇವೆ. ಮತ್ತು ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಆಶಯಗಳನ್ನು ನಾವು ಅಳವಡಿಸಿಕೊಂಡಿದ್ದೇವೆ. ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಕೀಳು ಮಟ್ಟದಲ್ಲಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಕೇಂದ್ರ ಗೃಹ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಭಾರತ ವಿದ್ಯಾರ್ಥಿ ಫೆಡರೇಷನ್,(SFI) ಮುಳಬಾಗಲು ತಾಲೂಕು ಸಮಿತಿ ಒತ್ತಾಯ ಮಾಡುತ್ತದೆ ಎಂದರು.
ಈ ವೇಳೆ ತಾಲೂಕು ಅಧ್ಯಕ್ಷೆ ಅರ್ಚನಾ, ತಾಲೂಕು ಸಮಿತಿ ಸದಸ್ಯರಾದ ರಾಕೇಶ್, ರಾಜೇಶ್, ಪುರುಷೋತ್ತಮ್, ನಂದೀಶ್ ಸೇರಿದಂತೆ ಮತ್ತಿತರು ಇದ್ದರು.