ಅಭ್ಯರ್ಥಿಗಳು ಗೆದ್ದ ಬಳಿಕ ಜನರನ್ನು ಮರೆಯದೇ ಜನ ಸೇವೆ, ಕ್ಷೇತ್ರಾಭಿವೃದ್ಧಿ ಮಾಡಬೇಕು- ನಟ ಕಿಚ್ಚ ಸುದೀಪ್

ಅಭ್ಯರ್ಥಿಗಳು ಗೆದ್ದ ಬಳಿಕ ಮರೆಯದೆ ಜನರಿಗೆ ಒಳ್ಳೆಯ ಕೆಲಸ ಮಾಡಬೇಕು. ಕ್ಷೇತ್ರ ಅಭಿವೃದ್ಧಿಗೆ ಶ್ರಮ ವಹಿಸಬೇಕು. ಜನರು ಮುಗ್ಧರಿದ್ದಾರೆ, ಗೆದ್ದ ಮೇಲೆ ಅವರಿಗೆ ಮೋಸ ಮಾಡಬೇಡಿ ಎಂದು ನಟ ಕಿಚ್ಚ ಸುದೀಪ್ ಅಭ್ಯರ್ಥಿಗಳಿಗೆ ಸೂಚಿಸಿದರು.

ನಗರದ ಶಾಂತಿನಗರದ ಮುತ್ಯಾಲಮ್ಮ ತಾಯಿ ದೇವಾಲಯದಿಂದ ಆರಂಭವಾದ ರೋಡ್ ಶೋನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ ಕೊರೊನಾ ಸಂದರ್ಭದಿಂದ ಹಿಡಿದು ಇಲ್ಲಿಯವರೆಗೆ ಸಾಮಾಜಿಕ, ಆರೋಗ್ಯ, ಉದ್ಯೋಗ, ಶಿಕ್ಷಣ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಉತ್ಸಾಹಿ, ವಿದ್ಯಾವಂತ ಯುವಕ ಧೀರಜ್ ಮುನಿರಾಜರನ್ನು ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಯುವ ನಾಯಕರಿಗೆ ಈ ಬಾರಿ ಹೆಚ್ಚಿನ ಅವಕಾಶ ನೀಡಿರುವುದು ಒಳ್ಳೆಯ ಬೆಳವಣಿಗೆ. ವಿದ್ಯಾವಂತ ಯುವಕ ಧೀರಜ್ ಮುನಿರಾಜುಗೆ ಆಶೀರ್ವಾದ ಮಾಡಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಬೇಕು.

ಸಚಿವ ಡಾ.ಸುಧಾಕರ್ ಮಾತನಾಡಿ
ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ 73 ಮಂದಿ ಹೊಸ ಯುವ ಮುಖಗಳಿಗೆ ಮಣೆ ಹಾಕಿದೆ. ಈ ಭಾಗದಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ಉದ್ಯೋಗ ಸೃಷ್ಟಿಗೆ ಕ್ರಮ ವಹಿಸಲಾಗುವುದು. ನೇಕಾರರ ಸಮುದಾಯಕ್ಕೆ ಹೆಚ್ಚು ಸೌಲಭ್ಯಗಳನ್ನು ನೀಡಿರುವುದು ಬಿಜೆಪಿ‌ ಸರ್ಕಾರವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಗೌರವ ಸಲ್ಲಿಸಿದ್ದು, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ತಂದು 10 ಸಾವಿರ ಕೊಡಲಾಗುತ್ತಿದೆ. ಪ್ರತಿ ವರ್ಷ 52 ಲಕ್ಷ ರೈತರಿಗೆ ಹತ್ತು ಸಾವಿರ ಸಹಾಯಧನ ನೀಡಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಅಭಿವೃದ್ಧಿಗೆ ವೇಗ ನೀಡಬೇಕಾದರೆ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಹೇಳಿದರು.

ಈ ವೇಳೆ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ನಗರಾಧ್ಯಕ್ಷ ಮುದ್ದಪ್ಪ, ತಾಲ್ಲೂಕು ಅಧ್ಯಕ್ಷ ನಾಗೇಶ್ ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *