ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಇಬ್ಬರು ಆರೋಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ

ದೊಡ್ಡಬಳ್ಳಾಪುರ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ವಿಚಾರಣೆಯ ವೇಳೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಗ್ರಾಮವೊಂದರ ಆರೋಪಿಗಳಾದ ಪ್ರಭಾಕರ (21), ಗೋವಿಂದರಾಜು(21) ಇವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಒಂದನೇ ಎಫ್.ಟಿ.ಎಸ್.ಸಿ ನ್ಯಾಯಾಲಯದ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಅವರು 20 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆ ಮತ್ತು ಐದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ನೊಂದ ಬಾಲಕಿಯು ತಾನು ಪ್ರೀತಿಸುತ್ತಿರುವ ಹುಡುಗ ಸರಿಯಾಗಿ ಮಾತನಾಡುತ್ತಿಲ್ಲವೆಂದು ಮನೆ ಬಿಟ್ಟು ಬಂದಿದ್ದ ಸಂದರ್ಭದಲ್ಲಿ ಇದನ್ನೇ ಬಂಡವಾಳಶಾಹಿ ಮಾಡಿಕೊಂಡ ಇಬ್ಬರು ಆರೋಪಿಗಳು ಲೈಗಿಂಕ ದೌರ್ಜನ್ಯ ಎಸಗಿದ್ದರು ಎನ್ನಲಾಗಿದೆ.

ಈ ಕುರಿತಂತೆ ನೋಂದ ಬಾಲಕಿ ನಗರದ ಮಹಿಳಾ ಪೊಲೀಸ್ ಠಾಣೆಗೆ 2022ರ ಆಗಸ್ಟ್ ನಲ್ಲಿ ನೀಡಿದ್ದ ದೂರಿನ ಮೇರೆಗೆ ಅಂದಿನ ಇನ್ಸ್ಪೆಕ್ಟರ್ ಶಬರೀಶ್ ಅವರು ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಂಡು 26 ಜನ ಸಾಕ್ಷಿಗಳ ವಿಚಾರಣೆಯೊಂದಿಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸರ್ಕಾರಿ ಅಭಿಯೋಜಕರಾದ ಎ.ಚಂದ್ರಕಲಾ ಅವರು ನ್ಯಾಯಾಲಯದಲ್ಲಿ ನೋಂದ ಬಾಲಕಿಯ ಪರವಾಗಿ ವಾದ ಮಂಡಿಸುವ ಮೂಲಕ ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆಯಾಗುವಂತೆ ಮಾಡಿದ್ದಾರೆ.

ಎಚ್ಚರಿಕೆಯ ಸಂದೇಶ

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೆ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿ ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ತಪ್ಪಿದ್ದಲ್ಲ ಎನ್ನುವ ಸಂದೇಶ ಈ ಪ್ರಕಣದಿಂದ ಸಮಾಜಕ್ಕೆ ಹೋಗಿದೆ. ಕ್ಷಣಿಕದ ಸಂತೋಷಕ್ಕಾಗಿ ಇಬ್ಬರು ಯುವಕರು ತಮ್ಮ ಇಡೀ ಜೀವನವನ್ನು ನಾಲ್ಕು ಗೋಡೆಗಳ ನಡುವೆ ಕಳೆಯುವಂತಾಗಿದೆ.

ಅಪರಾಧಿಗಳಾಗಿರುವ ಇಬ್ಬರು ಸಹ ಯುವಕರು. ದುಡಿದು ಬದುಕು ಕಟ್ಟಿಕೊಂಡು ಹೆತ್ತವರನ್ನು ಸಾಕಬೇಕಾದ ಜವಾಬ್ದಾರಿ ಹೊರಬೇಕಿದ್ದವರು ಈಗ ಜೈಲು ಪಾಲಾಗಿದ್ದಾರೆ. ಜೈಲಿನಿಂದ ಹೊರಬರುವಷ್ಟರಲ್ಲಿ ಮುಕ್ಕಾಲು ಜೀವನವೇ ಕಳೆದು ಹೋಗಿರುತ್ತದೆ. ಪೋಷಕರು ಹಾಗೂ ಶಾಲಾ ಕಾಲೇಜುಗಳಲ್ಲಿ ಪೋಕ್ಸೊ ಕಾಯ್ದೆ ಕುರಿತಂತೆ ಜಾಗೃತಿ ಮೂಡಿಸಬೇಕಿದೆ ಎಂದು ಪೊಲೀಸ್ ಅಧಿಕಾಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *