ಅಪರೂಪದ ಪಾದದ ವಿರೂಪತೆ ಹೊಂದಿದ್ದ ಸೌದಿ ಅರೇಬಿಯಾದ 52 ವರ್ಷದ ಮಹಿಳೆಯರಿಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ

ಬೆಂಗಳೂರು: ಚಾರ್ಕೋಟ್ಸ್ ಪಾದ (ಪಾದದ ವಿರೂಪತೆ)ದಿಂದ ಬಳಲುತ್ತಿರುವ ಸೌದಿ ಅರೇಬಿಯಾದ 52 ವರ್ಷದ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು .

ಚಾರ್ಕೋಟ್‌ ಪಾದ ಎಂದರೆ, ನರಗಳಿಗೆ ಹಾನಿಯುಂಟು ಮಾಡುವ ಅಪರೂಪದ ಸ್ಥಿತಿಯಿಂದ ಪಾದದ ಮೂಳೆಗಳು ಮತ್ತು ಕೀಲುಗಳನ್ನು ದುರ್ಬಲಗೊಳಿಸಿ, ಪಾದವನ್ನು ವಿರೂಪಗೊಳಿಸುತ್ತದೆ. ಫೋರ್ಟಿಸ್ ಆಸ್ಪತ್ರೆಯ ಆರ್ಥೋಪೆಡಿಕ್ ಸರ್ಜನ್ ಡಾ. ಮೋಹನ್ ಪುಟ್ಟಸ್ವಾಮಿ ಅವರ ಪರಿಣಿತ ಆರೈಕೆಯಲ್ಲಿ, ರೋಗಿಯು ಇಲಿಜಾರೋವ್ ಎಂಬ ಉಪಕರಣದ ಸಹಾಯದಿಂದ ಚಿಕಿತ್ಸೆ ನೀಡಲಾಯಿತು. ಈ ಪ್ರಕ್ರಿಯೆಯು ಅವರ ಪಾದವನ್ನು ಸ್ಥಿರಗೊಳಿಸಿ, ಚಲನಶೀಲತೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡಿತು. ಈ ಶಸ್ತ್ರಚಿಕಿತ್ಸೆಯು ಸುಮಾರು 8 ಗಂಟೆಗಳ ಕಾಲ ನಡೆಯಿತು, ರೋಗಿಯನ್ನು 7 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ರೀಟಾ (ಹೆಸರು ಬದಲಾಯಿಸಲಾಗಿದೆ) ಎಂಬ ರೋಗಿಯು ಸುಮಾರು ಒಂಬತ್ತು ವರ್ಷಗಳ ಕಾಲ ತನ್ನ ಎಡ ಪಾದದ ದೀರ್ಘಕಾಲದ ನೋವು, ಊತ ಮತ್ತು ವಿರೂಪತೆಯಿಂದ ಬಳಲುತ್ತಿದ್ದರು. ಈ ಸ್ಥಿತಿಯು ಆಕೆಯ ಚಲನಶೀಲತೆಯ ಮೇಲೆ ತೀವ್ರ ಪರಿಣಾಮ ಬೀರಿತ್ತು, ಇದರಿಂದ ಅವರು ಕುಂಟುತ್ತಾ ನಡೆಯಬೇಕಿತ್ತು. ಕಾಲಕ್ರಮೇಣ ಈ ಆರೋಗ್ಯ ಸ್ಥಿತಿ ಇನ್ನಷ್ಟು ಜಟಿಲಗೊಂಡ ಕಾರಣ ಅವರು ನಡೆಯಲು ಸಹ ಸಾಧ್ಯವಾಗದೇ, ಅವರ ಕಾಲನ್ನೇ ಕಳೆದುಕೊಳ್ಳುವ ಸ್ಥಿತಿಗೆ ತೆರಳಿದರು. ಕೂಡಲೇ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಈ ಆರೋಗ್ಯ ಸಮಸ್ಯೆ ಜೊತೆಗೆ ಅವರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಯಿಂದಲೂ ಬಳಲುತ್ತಿರುವುದು ಸಂಪೂರ್ಣ ತಪಾಸಣೆಯಿಂದ ತಿಳಿದುಬಂತು.

ಡಾ. ಪುಟ್ಟಸ್ವಾಮಿ ಅವರ ನೃತೃತ್ವದಲ್ಲಿ ಇಲಿಜರೋವ್ ಎಂಬ ಉಪಕರಣದ (ಮುರಿದ ಮೂಳೆ, ವಿರೂಪತೆ ಮತ್ತು ಇತರ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬಳಸುವ ಉಂಗುರದ ಆಕಾರದ ಬ್ರೇಸ್ ಉಪಕರಣ) ಸಹಾಯದಿಂದ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ಶಸ್ತ್ರಚಿಕಿತ್ಸೆಯಿಂದ ಭವಿಷ್ಯದಲ್ಲಿ ಅವರ ಕಾಲನ್ನು ಕಳೆದುಕೊಳ್ಳುವ ಅಪಾಯವೂ ತಪ್ಪಲಿದೆ.
ಈ ಕುರಿತು ಮಾತನಾಡಿದ ಡಾ. ಮೋಹನ್‌ ಪುಟ್ಟಸ್ವಾಮಿ, ರೀಟಾ ಅವರ ಸಂಕೀರ್ಣ ಪ್ರಕರಣವು ದೀರ್ಘಕಾಲದ ಪಾದದ ವಿರೂಪತೆಯ ಜೊತೆಗೆ CKD ​​ಸೋಂಕು ಅವರನ್ನು ಹೆಚ್ಚು ಬಾಧಿಸುತ್ತಿತ್ತು. ಕೂಡಲೇ ಅವರಿಗೆ ಮೂತ್ರಪಿಂಡದ ಕಾಯಿಲೆಗೆ ಸೂಕ್ತ ಚಿಕಿತ್ಸೆ ಒದಗಿಸಿದ ಬಳಿಕ ಅವರ ಕಾಲಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆ ನೀಡಿದೆವು. ಈ ರೀತಿಯ ಪ್ರಕರಣವು ಪ್ರತಿ ವರ್ಷ 10 ಸಾವಿರ ವ್ಯಕ್ತಿಗಳಲ್ಲಿ 7 ಜನರಲ್ಲಿ ಕಂಡು ಬರಲಿದೆ. ಇಂತಹ ಆರೋಗ್ಯ ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಇದರಿಂದ ಕಾಲನ್ನೇ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಪ್ರಸ್ತುತ ರೋಗಿಯು ಸಂಪೂರ್ಣವಾಗಿ ಗುಣವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

Leave a Reply

Your email address will not be published. Required fields are marked *