
ಪ್ರೀತಿ, ನಂಬಿಕೆ ಮತ್ತು ಸಂಶಯದ ನಡುವೆ ನಡೆದ ಈ ಭೀಕರ ಘಟನೆ ಇಡೀ ಹೊಸಪೇಟೆಯನ್ನೇ ಬೆಚ್ಚಿಬೀಳಿಸಿದೆ. ಕಷ್ಟಪಟ್ಟು ಜೀವನ ಕಟ್ಟಿಕೊಳ್ಳುತ್ತಿದ್ದ ಮಹಿಳೆ ಕೊನೆಗೆ ಪ್ರೇಮಿಯ ಕೈಯಲ್ಲೇ ಹ*ತ್ಯೆಗೀಡಾಗಿದ್ದಾರೆ.
ಘಟನೆಯ ವಿವರ ಇಲ್ಲಿದೆ….ಪರಿಚಯ ಪ್ರೇಮಕ್ಕೆ ತಿರುಗಿದ್ದು ಹೇಗೆ?
ಹೊಸಪೇಟೆಯ ಚಾಪಲಗಡ್ಡ ನಿವಾಸಿ ಉಮಾ (32), ಕಳೆದ 8 ವರ್ಷಗಳಿಂದ ಪತಿಯಿಂದ ದೂರವಿದ್ದು ರೈಲ್ವೆ ಸ್ಟೇಷನ್ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ವಸ್ತುಪ್ರದರ್ಶನದಲ್ಲಿ ಕೆಲಸ ಮಾಡುತ್ತಿದ್ದ ಖಾಜಾ ಎಂಬ ಯುವಕನ ಪರಿಚಯವಾಗಿತ್ತು. ಸ್ನೇಹ ಬೆಳೆದು ನಂತರ ಇಬ್ಬರೂ ಪ್ರೀತಿಸಿ, ನಾಲ್ಕು ತಿಂಗಳ ಹಿಂದೆ ಮನೆಯವರಿಗೆ ತಿಳಿಸದೆ ಗುಪ್ತವಾಗಿ ಮದುವೆಯಾಗಿದ್ದರು.
ಕೊಲೆಗೆ ಕಾರಣವಾದ ಸಂಶಯ ಮತ್ತು ಹಣ:
ಮೊದಮೊದಲು ಚೆನ್ನಾಗಿದ್ದ ಇವರ ಸಂಸಾರದಲ್ಲಿ ನಂತರ ಹಣಕಾಸಿನ ವಿಚಾರವಾಗಿ ಗಲಾಟೆ ಶುರುವಾಗಿತ್ತು. ಇದರ ಜೊತೆಗೆ ಖಾಜಾ ಉಮಾ ಮೇಲೆ ಅತಿಯಾದ ಸಂಶಯ ಪಡಲು ಆರಂಭಿಸಿದ್ದ. ಉಮಾ ಫೋನ್ ಬಿಜಿಯಿದ್ದರೆ ಸಾಕು ಜಗಳ ಮಾಡುತ್ತಿದ್ದ. ಇವರ ಮದುವೆಯ ವಿಚಾರ ಉಮಾ ಮನೆಯವರಿಗೂ ತಿಳಿದಿರಲಿಲ್ಲ.
ಬೆಳಗಿನ ಜಾವ ನಡೆದ ಭೀಕರ ಕೃತ್ಯ:
ಜನವರಿ 6ರಂದು ಸಂಶಯದ ವಿಚಾರವಾಗಿ ಇಬ್ಬರ ನಡುವೆ ಜೋರು ಗಲಾಟೆಯಾಗಿದೆ. ಬೆಳಗಿನ ಜಾವ 4:30ರ ಸುಮಾರಿಗೆ ಉಮಾ ಪಕ್ಕದ ಮನೆಯ ಮಹಡಿಯ ಮೇಲೆ ಖಾಜಾ ಜೊತೆ ಮಾತನಾಡಲು ಹೋಗಿದ್ದಾರೆ. ಮೊದಲೇ ಕೊಲೆಗೆ ಸಂಚು ರೂಪಿಸಿದ್ದ ಖಾಜಾ, ತನ್ನಲ್ಲಿದ್ದ ಹರಿತವಾದ ಚಾಕುವಿನಿಂದ ಕೋಳಿ ಕೊಯ್ದಂತೆ ಉಮಾ ಅವರ ಕುತ್ತಿಗೆ ಸೀಳಿ ಸ್ಥಳದಲ್ಲೇ ಕೊ**ಲೆ ಮಾಡಿ ಪರಾರಿಯಾಗಿದ್ದಾನೆ.

ಪತ್ತೆಯಾಗಿದ್ದು ಹೇಗೆ?
ಬೆಕ್ಕುಗಳು ಮಹಡಿಯ ಮೇಲೆ ಕಿರುಚಾಡುತ್ತಿದ್ದನ್ನು ನೋಡಿ ಪಕ್ಕದ ಮನೆಯವರು ಹೋದಾಗ ರಕ್ತದ ಮಡುವಿನಲ್ಲಿ ಉಮಾ ಶವ ಪತ್ತೆಯಾಗಿದೆ. ವಿಜಯನಗರ ಎಸ್ಪಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿ, ಕೇವಲ 4 ಗಂಟೆಗಳಲ್ಲಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.
ಪರಿಣಾಮ: ಇಂದು ಮೂವರು ಗಂಡು ಮಕ್ಕಳು ತಾಯಿಯಿಲ್ಲದೆ ಅನಾಥವಾಗಿದ್ದಾರೆ. ಕ್ಷಣಿಕ ಪ್ರೀತಿ ಮತ್ತು ಸಂಶಯದ ಹಾದಿ ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.