ಅನ್ನದಾತರದ್ದು ಬೇಡುವ ಕೈಗಳಲ್ಲ. ಅವು ಹಸಿದು ಬಂದವರಿಗೆ ಅನ್ನ ನೀಡುವ ಕೈಗಳಾಗಿವೆ. ರೈತ ಸಮುದಾಯ ಒಗ್ಗಟ್ಟಾಗಿ ಮುನ್ನೆಡೆದರೆ ಯಾವತ್ತಿಗೂ ಸೋಲಿಲ್ಲ ಎಂದು ಪ್ರಗತಿಪರ ರೈತ ಮಹಿಳೆ, ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಕವಿತಾ ಮಿಶ್ರಾ ಹೇಳಿದರು.
ನಗರದ ಬಮೂಲ್ ಶಿಬಿರ ಕಚೇರಿಯಲ್ಲಿ ಜಿಲ್ಲಾ ಸಹಕಾರ ಒಕ್ಕೂಟ, ಬಮೂಲ್ ವತಿಯಿಂದ ಶುಕ್ರವಾರ ಡೇರಿಗಳ ಕಾರ್ಯದರ್ಶಿ, ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಎಂದೂ ಬೇಡುವುದಿಲ್ಲ, ಅವರಿಗೆ ಕೊಡುವುದು ಮಾತ್ರ ಗೊತ್ತಿದೆ. ಹಾಗಾಗಿ ರೈತರು ಕೊಡುಗೈದಾನಿಗಳಾಗಿದ್ದಾರೆ. ರೈತರು ಯಾವುದೇ ಸಂದರ್ಭದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಹವಾಮಾನಾಧಾರಿತವಾದ ಬೆಳೆಗಳು ಎಂದಿಗೂ ರೈತರನ್ನು ಕೈ ಬಿಡುವುದಿಲ್ಲ. ಇರುವ ಜಾಗದಲ್ಲಿಯೇ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಒಂದಕ್ಕೊಂದು ಪೂರಕವಾದ ಬೆಳೆಗಳನ್ನು ಬೆಳೆಯಬೇಕು. ಅದಕ್ಕೆ ತಕ್ಕಂತೆ ಮಾರುಕಟ್ಟೆಯನ್ನು ಕಲ್ಪಿಸಿಕೊಳ್ಳುವ ಜಾಣ್ಮೆಯೂ ಇರಬೇಕಾಗುತ್ತದೆ ಎಂದು ಸಲಹೆ ನೀಡಿದರು. ಶ್ರೀಗಂಧ ಬೆಳೆಯಲು ಇಡೀ ದೇಶದಲ್ಲಿಯೇ ನಮ್ಮ ರಾಜ್ಯದಲ್ಲಿ ಅತ್ಯುತ್ತಮ ವಾತಾವರಣ ಇದೆ. ಇಂತಹ ಸದುಪಯೋಗ ಬಳಸಿಕೊಂಡು ಶ್ರೀಗಂಧ ಬೆಳೆದು ರೈತರು ಆರ್ಥಿಕವಾಗಿ ವೃದ್ಧಿಯಾಗಬೇಕು. ರೈತರು ಭೂಮಿಯನ್ನು ನಂಬಿದರೆ ಆರ್ಥಿಕ ಸ್ಥಾನಮಾನ ವೃದ್ಧಿಸಿಕೊಂಡು, ಉತ್ತಮ ಜೀವನ ಮಾಡಬಹುದು. ಹಸಿರು ಕ್ರಾಂತಿಯನ್ನು ಮಾಡುವ ಶಕ್ತಿ ಇರುವುದು ರೈತರಿಗೆ ಮಾತ್ರ ಎಂದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ ಯಾವುದೇ ಔದ್ಯೋಗಿಕ ಕ್ಷೇತ್ರಕ್ಕೆ ಪೆಟ್ಟು ಬಿದ್ದರೂ ರೈತರು ಬೆಳೆದ ಬೆಳೆಗಳ ಮೇಲೆ ಪರಿಣಾಮ ಬೀರಿ, ಬೆಲೆಗಳ ಮೇಲೆ ಪ್ರಭಾವ ಬೀರುತ್ತದೆ. ಅತಿವೃಷ್ಟಿ, ಅನಾವೃಷ್ಠಿ ಯಾವುದೇ ಸಮಸ್ಯೆ ಬಂದರೂ ಎದೆಗುಂದರೆ ಜೀವನ ಮಾಡುವ ಶಕ್ತಿ ರೈತರಿಗೆ ಮಾತ್ರ ಇದೆ ಎಂದರು.
ಕೆಎಂಎಫ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ಮಾತನಾಡಿ ನಮ್ಮದು ಕೃಷಿ ಪ್ರಧಾನ ದೇಶವಾಗಿದ್ದರೂ ಹಲವು ವೈವಿಧ್ಯತೆಗಳನ್ನು ಒಳಗೊಂಡಿದೆ. ಅದರಲ್ಲಿ ಕೃಷಿಕರು ರಾಷ್ಟ್ರದ ಬೆನ್ನೆಲುಬು ಆಗಿದ್ದಾರೆ. ರೈತರು ನೆಮ್ಮದಿಯಿಂದ ಇದ್ದರೆ ದೇಶವು ಸಮೃದ್ಧವಾಗಿರಲಿದೆ. ರೈತ ಕುಟುಂಬಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಶಿಬಿರ ಆಯೋಜನೆ ಮಾಡಲಾಗಿದೆ. ವ್ಯವಸಾಯ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ದುರದೃಷ್ಟಕರ ಎಂದರು.
ಟಿಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ ಕೃಷಿಯನ್ನು ಶ್ರದ್ಧೆಯಿಂದ ಮಾಡಿದರೆ ಕೇವಲ ಒಂದು ಎಕರೆಯಲ್ಲಿ ಲಕ್ಷಾಂತರ ಹಣ ಸಂಪಾದನೆ ಮಾಡಬಹುದು. ಒಬ್ಬ ಕಾರ್ಯದರ್ಶಿ ಇಡೀ ಗ್ರಾಮವನ್ನೇ ಬದಲಾಯಿಸಬಹುದು ಎಂದರು.
ಈ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು, ಟಿಎಪಿಎಂಸಿ ಅಧ್ಯಕ್ಷ ಆಂಜನಗೌಡ, ಜಿಲ್ಲಾ ಸಹಕಾರಿ ಸಂಘದ ಉಪಾಧ್ಯಕ್ಷ ಬಿಟಿ ಶ್ರೀನಿವಾಸ, ಬಿಸಿ ನಾಗರಾಜು, ಡೇರಿ ಉಪ ವ್ಯವಸ್ಥಾಪಕ ಎಲ್.ಬಿ ನಾಗರಾಜು, ರೈತರು ಇದ್ದರು.