ಅನೈತಿಕ ಸಂಬಂಧಕ್ಕೆ ಗಂಡನನ್ನ ಕೊಲೆ ಮಾಡಿದ ಹೆಂಡತಿ

ಗಂಡ ಹೆಂಡತಿ ಸಂಬಂಧ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ ಎನ್ನುತ್ತಾರೆ. ಹೀಗೆ ಗುರು ಹಿರಿಯರ ನಿಶ್ಚಯದಲ್ಲಿ ಶಾಸ್ತ್ರ ಸಂಪ್ರದಾಯದಂತೆ ಸಪ್ತಪದಿ ತುಳಿದು, ಅಕ್ರಮ ಸಂಬಂಧಕ್ಕೆ ಕೈ ಹಿಡಿದ ಗಂಡನನ್ನೇ ಕೊಲೆ ಮಾಡಿದ್ದಾಳೆ.‌ ಗಂಡ ಸರಿಯಾಗಿ ಸಂಸಾರಕ್ಕೆ ತಂದು ಹಾಕುತ್ತಿಲ್ಲ, ಕುಡಿದು ಜಗಳ ಮಾಡುತ್ತಾನೆ ಎಂದು ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿ, ಮತ್ತೆ ಆತನನ್ನೇ ಮದುಗೆ ಆಗಬೇಕು ಎಂದುಕೊಂಡಿದ್ದವಳು ಈಗ ಜೈಲು ಪಾಲಾಗಿದ್ದಾಳೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ……

ಹೌದು ಹೀಗೆ ಸ್ಟೇಷನ್ ನಲ್ಲಿ ಸ್ಲೇಟ್ ಹಿಡಿದು, ಗಂಡನನ್ನ ಕೊಲೆ ಮಾಡಿದ ಒಂದು ಚೂರು ಪಾಪ ಪ್ರಜ್ಞೆ ಇಲ್ಲದೆ ನಿಂತಿರುವ ಮಹಿಳೆಯ ಹೆಸರು ಪುಷ್ಪಾ, ಇನ್ನೂ ಮದುವೆ ಆಗಿ ಬಾಳಿ ಬದುಕಬೇಕಾದ ವಯಸ್ಸಿನಲ್ಲಿ ಪರ ಸ್ತ್ರೀ ಮೋಹಕ್ಕೆ ಬಿದ್ದು ಜೈಲಿಗೆ ಸೇರಿದವ ದೇವರಾಜ್. ಇಬ್ಬರೂ ಸೇರಿ ಕಳೆದ ಜ 24 ರಂದು ಪುಷ್ಪಾ ಗಂಡ ಅಶೋಕ್ ಗೆ ಸ್ಕೆಚ್ ಹಾಕಿದ್ದಾರೆ.

ಹೊಸಕೋಟೆ ತಾಲೂಕಿನ ಸೂಲಿಬೆಲೆ ಸಮೀಪದ ಸಿದ್ದೇನಹಳ್ಳಿ ಗ್ರಾಮದ ಊರ ಹೊರಗೆ ಅಪಘಾತ ಆದ ರೀತಿಯಲ್ಲಿ ಅಶೋಕ್ ನ ಮೃತ ದೇಹ ಸಿಕ್ಕಿತ್ತು. ದೇವರಾಜ್ ಅಶೋಕ್ ಗೆ ಕರೆ ಮಾಡಿ ಸಂಜೆ ಬಿಯರ್ ಬಾಟೆಲ್ ಕುಡಿಯೋಣ ಕೆರೆಗೆ ಬಾ ಎಂದು ಹೇಳಿದ್ದಾನೆ. ಆಗ ಅಶೋಕ್ ನನಗೆ ಒಂದೇ ಒಂದು ಬಿಯರ್ ಸಾಕು ಎಂದಿದ್ದಾನೆ. ಒಂದು ಏಕೆ ಮೂರು ಬಾಟೆಲ್ ಕೊಡಿಸುತ್ತೇನೆ ಎಂದು ಹೇಳಿ ಕೆರೆಗೆ ಕರೆಸಿಕೊಂಡಿದ್ದಾನೆ. ಮೊದಲೇ ಪ್ಲಾನ್ ಮಾಡಿಕೊಂಡಂತೆ ಕೆರೆಯಲ್ಲಿ ಬಿಯರ್ ಕುಡಿಯುವ ವೇಳೆ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ.

ಘಟನಾ ಸ್ಥಳದಲ್ಲಿ ಯಾರಿಗೂ ತಿಳಿಯಬಾರದು ಎಂದು ಅಲ್ಲಿ ಮಣ್ಣು ಹಾಕಿ, ಮೃತ ದೇಹವನ್ನು ಅಪಘಾತ ಆಗಿದೆ ಎಂದು ಬಿಂಬಿಸಲು ರಸ್ತೆಗೆ ತಂದು ಎಸೆದು ಹೋಗಿದ್ದಾರೆ.

ಇನ್ನೂ ಘಟನಾ ಸ್ಥಳಕ್ಕೆ ಬಂದ ಸೂಲಿಬೆಲೆ ಪೋಲೀಸರಿಗೆ ಘಟನೆ ಕುರಿತು ಸಾಕಷ್ಟು ಅನುಮಾನ ಮೂಡಿತ್ತ. ಗ್ರಾಮಸ್ಥರು ಕೂಡ ಇದು ಅಪಘಾತವಲ್ಲ, ಕೊಲೆ ಎಂದು ಆರೋಪ ಮಾಡಿದ್ದರು.

ಪ್ರಕರಣವನ್ನ ಭೇದಿಸಲು ಮುಂದಾದ ಪೋಲೀಸರಿಗೆ ಬಲವಾಗಿ ಮೃತನ ಹೆಂಡತಿಯ ಮೇಲೆ ಅನುಮಾನವಿತ್ತು. ಆಕೆಯನ್ನ ಕರೆಸಿ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಯಲಾಗಿದ್ದು.

ಮೃತ ಅಶೋಕ್ ನ ಹೆಂಡತಿ ಪುಷ್ಪ, ಅದೇ ಗ್ರಾಮದ ದೇವರಾಜ್ ಎಂಬುವವನ ಜೊತೆಯಲ್ಲಿ ಚಕ್ಕಂದ ಆಡುತ್ತಿದ್ದಳಂತೆ. ಈಕೆಗೆ ಮೂರು ಮಕ್ಕಳಿದ್ದರೂ ಕೂಡ ಪರ ಪುರುಷನ ಮೋಹ ಹೆಚ್ಚಾಗಿತ್ತು. ಅಲ್ಲದೆ ಅಶೋಕ್ ಪೈಂಟಿಂಗ್ ಕೆಲಸ ಮಾಡಿಕೊಂಡು, ಕುಟಿಂಬ ನಿರ್ವಹಣೆಗೆ ಹಣ ಸಾಲಲ್ಲ ಎಂದು ರಾತ್ರಿ ವೇಳೆ ಸೆಕ್ಯುರಿಟಿ ಕೆಲಸಕ್ಕೂ ಹೋಗುತ್ತಿದ್ದ. ಕುಡಿದ ವೇಳೆ ಹೆಂಡತಿಯನ್ನು ಹೊಡೆದು ಬಯ್ಯುತ್ತಿದ್ದನಂತೆ. ಹಾಗಾಗಿ ಪುಷ್ಪ ಗಂಡನನ್ನು ಮುಗಿಸಿ ದೇವರಾಜ್ ಜೊತೆಯಲ್ಲಿ ಎರಡನೇ ಮದುವೆ ಆಗಲು ತೀರ್ಮಾನಿಸಿದ್ದಾಳೆ.

ಹಾಗಾಗಿ ಪ್ರಿಯಕರನ ಜೊತೆಯಲ್ಲಿ ಸೇರಿ ಗಂಡನನ್ನು ಕೊಲೆ ಮಾಡಿ, ಅಪಘಾತ ಆಗಿದೆ ಎಂದು ಬಿಂಬಿಸಿದರೆ ಯಾರಿಗೂ ಅನುಮಾನ ಬರಲ್ಲ ಎಂದು ಪ್ಲಾನ್ ಮಾಡಿದ್ದಾಳೆ. ಆದರೆ ಈಗ ಸತ್ಯ ಬಯಲಾಗಿದ್ದು ಪುಷ್ಪಾ, ದೇವರಾಜ್ ಜೊತೆಯಲ್ಲಿ ಸಹಚರರಾದ ಮುನಿಂದ್ರ, ಸಿದ್ದಪ್ಪ ಜೈಲು ಪಾಲಾಗಿದ್ದಾರೆ.ಸೂಲಿಬೆಲೆ ಪೋಲೀಸರು ನಾಲ್ಕು ಜನರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ಒಟ್ಟಾರೆ ಗಂಡನ ಜೊತೆ ಬಾಳಿ ಬದುಕಬೇಕಾದ ಪುಷ್ಪ ಪರ ಪುರುಷನ ಮೋಹಕ್ಕೆ ಬಿದ್ದು ಗಂಡನಿಗೆ ಚಟ್ಟ ಕಟ್ಟಿ ಈಗ ಜೈಲು ಪಾಲಾದರೆ, ಮೂರು ಮಕ್ಕಳು ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ತಬ್ಬಲಿಗಳಾಗಿದ್ದು ಮಾತ್ರ ದುರ್ದೈವ. ಇತ್ತ ಸ್ನೇಹಿತ ಎಂದು ನಂಬಿ ಕುಡಿಯಲು ಹೋದ ವ್ಯಕ್ತಿ ಕ್ರೌರ್ಯಕ್ಕೆ ಬಲಿಯಾಗಿದ್ದು ಮಾತ್ರ ವಿಪರ್ಯಾಸ.

Leave a Reply

Your email address will not be published. Required fields are marked *

error: Content is protected !!