ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್: ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ರೈತರು: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ತಾಲೂಕಿನ ರೈತರು ಬುಧವಾರ ನಗರದ ಟಿ.ಬಿ.ವೃತ್ತದಲ್ಲಿರುವ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ‌ ನಡೆಸಿದರು.

ಟ್ರ್ಯಾಕ್ಟರ್ ಗಳ ಮೂಲಕ ಬಂದ ರೈತರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸುವಂತೆ ಆಗ್ರಹಿಸಿದರು.

ರೈತರಿಗೆ ಈ ಹಿಂದೆ ನೀಡುತ್ತಿದ್ದ ರೀತಿಯಲ್ಲೇ ನಿರಂತರ ಏಳು ತಾಸು ವಿದ್ಯುತ್ ಪೂರೈಸಬೇಕು. ಮೂರು ಪಾಳಿಯಲ್ಲಿ ರಾತ್ರಿ ಪಾಳಿ ಕೈಬಿಡಬೇಕು. ಹಗಲಲ್ಲಿ ಒಟ್ಟು 5 ತಾಸು ವಿದ್ಯುತ್ ನೀಡಬೇಕು. ವಿದ್ಯುತ್ ಅಭಾವದಿಂದ ರೈತರು ಬೆಳೆಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಬೆಸ್ಕಾಂ ಅಧಿಕಾರಿಗಳು ಕಾರ್ಖಾನೆಗಳಿಗೆ ನಿರಂತರ ವಿದ್ಯುತ್ ಪೂರೈಸಿ ರೈತರಿಗೆ ಲೋಡ್ ಶೆಡ್ಡಿಂಗ್ ಹೆಸರಲ್ಲಿ ಅನ್ಯಾಯ‌ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಐದು ತಾಸು ವಿದ್ಯುತ್ ಪೂರೈಸಲು ಒಪ್ಪಿಗೆ ನೀಡಿದೆ. ಆದರೆ, ಅದನ್ನು ಹಗಲು ಹೊತ್ತಿನಲ್ಲೇ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ  ಮಾತನಾಡಿದ ಬೆಸ್ಕಾಂ ಎಸ್ ಇ ಪಾಲನೇತ್ರ ಅವರು, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಬೇರೆ ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದ ವಿದ್ಯುತ್ತನ್ನೂ ನಿಲ್ಲಿಸಲಾಗಿದೆ. ಸೌರ ವಿದ್ಯುತ್ ಮೂಲಕವೇ  ಬ್ಯಾಲೆನ್ಸ್ ಮಾಡಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ‌ ಈ ಬಾರಿ 2000 ಕೋಟಿ ವಿದ್ಯುತ್ ಖರೀದಿ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಉತ್ಪಾದನೆ ಅನುಸಾರ ಐದು ತಾಸು ನೀಡಲಾಗುವುದು. ಆದರೆ, ಏಳು ತಾಸು ನಿರಂತರವಾಗಿ ಕೊಡಲಾಗದು.‌ ಮುಂದಿನ ಪರಿಸ್ಥಿತಿ ನೋಡಿಕೊಂಡು ಸಮರ್ಪಕ ವಿದ್ಯುತ್ ಪೂರೈಸಲಾಗುವುದು ಎಂದು ಹೇಳಿದರು.

ಬೆಸ್ಕಾಂ ಅಧಿಕಾರಿಯ ಹೇಳಿಕೆಗೆ ರೈತರು ಒಪ್ಪಿಗೆ ಸೂಚಿಸದ ಕಾರಣ , ಈ ತಿಂಗಳ 31 ರಂದು ಸರ್ಕಾರದೊಂದಿಗೆ‌ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅ.31ರೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಜನ-ಜಾನುವಾರುಗಳೊಂದಿಗೆ ಬಂದು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತ‌ ಸಂಘದ ಜಿಲ್ಲಾಧ್ಯಕ್ಷ  ಪ್ರಸನ್ನ, ಮುಖಂಡರಾದ ಸತೀಶ್, ವಸಂತ್, ವಾಸುದೇವ್, ಅಂತರಹಳ್ಳಿ ನರಸಿಂಹರಾಜು, ಗಂಗಸಂದ್ರ ರಾಜಣ್ಣ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *