ಅನಧಿಕೃತ ಲಾಟರಿ-ಮಟ್ಕಾ ಮಾರಾಟ ನಿಷೇಧ

ರಾಜ್ಯಾದ್ಯಂತ ಅನಧಿಕೃತ ಲಾಟರಿ-ಮಟ್ಕಾ ಮಾರಾಟ ಈಗಾಗಲೇ ನಿಷೇಧಿಸಲಾಗಿದ್ದು ಜಿಲ್ಲೆಯಲ್ಲಿ ಎಲ್ಲಿಯಾದರೂ ಅನಧಿಕೃತ ಲಾಟರಿ-ಮಟ್ಕಾ ಹಾವಳಿ ಕಂಡುಬಂದಲ್ಲಿ ಕೂಡಲೇ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಸಭಾಂಗಣದಲ್ಲಿ ನಡೆದ ಅನಧಿಕೃತ ಲಾಟರಿ/ ಮಟ್ಕಾ ಹಾವಳಿಯ ನಿಯಂತ್ರಣದ ಬಗ್ಗೆ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರವು ಅನಧಿಕೃತವಾಗಿ ನಡೆಸುವ ಲಾಟರಿ ಹಾಗೂ ಮಟ್ಕಾ ದಂಧೆಯನ್ನು ಸಂಪೂರ್ಣವಾಗಿ ರಾಜ್ಯದಾದ್ಯಂತ ನಿಷೇಧಿಸಿದೆ. ಅನಧಿಕೃತವಾಗಿ ಲಾಟರಿ- ಮಟ್ಕಾ ದಂಧೆಯನ್ನು ನಡೆಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. 2024 ನೇ ಸಾಲಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಮಟ್ಕಾ ಹಾವಳಿಯ ಒಂದು ಪ್ರಕರಣ ಕಂಡುಬಂದಿತ್ತು. ಅಕ್ರಮವಾಗಿ ಮಟ್ಕಾ ಜೂಜಾಟಕ್ಕೆ ಸಾರ್ವಜನಿಕರಿಂದ ಹಣವನ್ನು ಕಟ್ಟಿಸಿಕೊಂಡು ಜೂಜಾಟ ನಡೆಸುತ್ತಿದ್ದರು. ಅವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹೇಳಿದರು.

ಸಾರ್ವಜನಿಕರಿಗೆ ಲಾಟರಿ- ಮಟ್ಕಾ ಹಾವಳಿ ಬಗ್ಗೆ ಅರಿವು ಮೂಡಿಸಿ, ಹಿಂದಿನ ಪ್ರಕರಣಗಳು ಕಂಡು ಬಂದ ಪ್ರದೇಶಗಳಲ್ಲಿ ಆಗಿಂದಾಗ್ಗೆ ಗಸ್ತು ಹೋಗಬೇಕು. ಕಾಲಕಾಲಕ್ಕೆ ಸಭೆ ನಡೆಸಿ ಲಾಟರಿ ಮಟ್ಕಾ ಹಾವಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಾಗೇಶ್, ಪಿಂಚಣಿ , ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ವೇತ ಪ್ರಿಯದರ್ಶಿನಿ ಹಾಗು ಮುರಳಿ ಮೋಹನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *