ಕೋಲಾರ: ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಆಧಾರದ ಮೇರೆಗೆ ಅಧಿಕಾರಿಯಾಗಿ ನೇಮಕ ಆಗಿರುವವರಿಗೆ ಜಿಲ್ಲೆಯ ಕೆಲ ಶಾಸಕರು ಜಾತಿ ಪಟ್ಟ ಕಟ್ಟುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೆ.ನಾರಾಯಣಗೌಡ ಖಂಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಸಂವಿಧಾನ ಅಡಿಯಲ್ಲಿ ಶಾಸಕರಾದವರು ಪ್ರಜಾಪ್ರಭುತ್ವದಲ್ಲಿ ಪ್ರಜಾ ಸೇವಕರಾಗಿರಬೇಕು ಅದನ್ನು ಬಿಟ್ಟು ನಮ್ಮ ಜಾತಿ ನಿಮ್ಮ ಜಾತಿ ಎಂದು ಅಧಿಕಾರಿಗಳ ನೇಮಕದಲ್ಲಿ ಹೇಳಿಕೆ ನೀಡುವುದು ನ್ಯಾಯವೆ ಎಂದು ಪ್ರಶ್ನೆ ಮಾಡಿದರು.
ಯಾರು ಸಹ ಹುಟ್ಟುತ್ತಾ ಜಾತಿ ಪಟ್ಟ ಕಟ್ಟಿಕೊಂಡು ಬರುವುದಿಲ್ಲ, ಇದನ್ನೆಲ್ಲ ರಾಜಕೀಯ ಕುಳಗಳು ಸೃಷ್ಟಿ ಮಾಡಿರುವ ಸಮಾಜಿಕ ಪಿಡುಗು ಎಂದರೆ ತಪ್ಪಾಗಲಾರದು. ತಮ್ಮ ಸ್ವ ಹಿತಾಸಕ್ತಿಗಾಗಿ ಅಧಿಕಾರಿಗಳ ಗೌರವಕ್ಕೆ ಧಕ್ಕೆಯುಂಟು ಮಾಡುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.
ಎಎಎಸ್, ಐಪಿಎಸ್ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪರೀಕ್ಷೆಗಳನ್ನು ಎದುರಿಸಿ ಹುದ್ದೆಗೆ ಅಲಂಕರಿಸಿತ್ತಾರೆ. ಡಿಸಿ, ಎಸಿ, ಎಸ್ಪಿಗಳು ಎಂದೂ ಜಾತಿ ಅಧಾರದಲ್ಲಿ ಕೆಲಸ ಮಾಡುವುದಿಲ್ಲ. ಜಿಲ್ಲೆಯೆನಾದರು ಉದ್ದಾರ ಆಗಿದ್ದರೆ ಅದು ಅಧಿಕಾರಿಗಳಿಂದ ಮಾತ್ರ ಸಾಧ್ಯ ಜಿಲ್ಲಾ ಪಂಚಾಯಿತಿ ಸಿಇಒ ನಾಲ್ಕು ತಿಂಗಳಿಂದ ಇಲ್ಲ, ಜೊತೆಗೆ ಹಲವು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿದೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಎಂದರೆ ಅಧಿಕಾರಿಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಒಣ ಗೇಡಿತನ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದರು.
ಹಿಂದೆ ಮನೋಜ್ ಕುಮಾರ್ ಮೀನಾ, ಡಿ.ಕೆ.ರವಿ, ಕೆ.ವಿ.ತ್ರಿಲೋಕ್ ಚಂದ್ರ ಅವರ ನಂತರ ಉತ್ತಮ ಕೆಲಸ ಮಾಡಿದ್ದು ಅಕ್ರಂ ಪಾಷ ಅವರು, ಸರ್ಕಾರಿ ಜಾಗ ಒತ್ತುವರಿಗೆ ಕೈ ಹಾಕಿದ ಹಿನ್ನಲೆಯಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ. ಮಾಲೂರು ನಂಜೇಗೌಡ.ಡಿಸಿ ಅವರನ್ನು ವರ್ಗಾವಣೆ ಮಾಡಿಸಲು ಹುನ್ನಾರ ಮಾಡುತ್ತಿದ್ದಾರೆ, ಇದು ಶಾಸಕ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ಕಿಡಿಕಾರಿದರು.
ನಾಲ್ಕು ಮಂದಿ ಕಾಂಗ್ರೆಸ್ ಶಾಸಕರು ಆಯ್ಕೆಯಾದರು ಉಸ್ತುವಾರಿ ಮಂತ್ರಿಯಾಗಲು ಅರ್ಹರಾಗಿಲ್ಲ, ಅಂತಹ ಸ್ಥಿತಿಯಲ್ಲಿ ಸುಮ್ಮನಿರದೆ ಅಧಿಕಾರಿಗಳನ್ನು ಎತ್ತಂಗಡಿ ಮಾಡುವ ಅವಶ್ಯಕತೆಯಿದಿಯೇ ಎಂದು ಪ್ರಶ್ನಿಸಿದರು.
ಜನಪ್ರತಿನಿಧಿಗಳು ಸರ್ಕಾರ ಜಮೀನು ಕಬಳಿಸುತ್ತಿದ್ದರೆ ನೋಡಿಕೊಂಡು ಸುಮ್ಮನಿರಲು ಅಧಿಕಾರಿಗಳೇನು ನಿಮ್ಮ ಹಿಂಬಾಲಕರಲ್ಲ, ನಿಮ್ಮನ್ನು ಪ್ರಶ್ನೆ ಮಾಡಿದರೆ ವರ್ಗಾವಣೆ ಮಾಡಿಸಿದರೆ ಮಾಡಿದ ತಪ್ಪಿನಿಂದ ಪಾರಾಗಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ತಲೆ ದಂಡ ತೆರೆಯಬೇಕು, ಜಾತಿವಾರು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದು ಬಿಟ್ಟು ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಕಿವಿಮಾತು ಹೇಳಿದರು.