ಅಧಿಕಾರದಲ್ಲಿ ಇರುವವರ ಆಲೋಚನೆ ಬೇರೆ.., ಕೆಲಸವಿಲ್ಲದ ನಮ್ಮಂತವರ ಯೋಚನೆಗಳೇ ಬೇರೆ…!

ನಾವು ಮತ್ತು ಅವರು…….

ಅಧಿಕಾರದಲ್ಲಿ ಇರುವವರ ಆಲೋಚನೆಗಳೇ ಬೇರೆ,
ಕೆಲಸವಿಲ್ಲದ ನಮ್ಮಂತವರ ಯೋಚನೆಗಳೇ ಬೇರೆ……..

ಪ್ರಾಮಾಣಿಕವಾಗಿರಬೇಕು, ಮೌಲ್ಯಯುತವಾಗಿರಬೇಕು,
ನಿಸ್ವಾರ್ಥಿಯಾಗಿರಬೇಕು ಎಂದು ಯೋಚಿಸುತ್ತಾ ಸಮಯ ಕಳೆಯುವ ನಾವು……..

ಅಧಿಕಾರದಲ್ಲಿರಬೇಕು,
ಹಣ ಮಾಡಬೇಕು,
ಜನಪ್ರಿಯತೆ ಗಳಿಸಬೇಕು,
ಅದನ್ನು ಉಳಿಸಿಕೊಳ್ಳಬೇಕು,
ಎಂದು ಯೋಚಿಸುತ್ತಾ ಸಮಯ ಉಪಯೋಗಿಸಿಕೊಳ್ಳುವ ಅವರು…..

ಸತ್ಯ ಅಹಿಂಸೆ ಸರಳತೆ ನಶ್ವರತೆ ತ್ಯಾಗ ಬಲಿದಾನಗಳ ಬಗ್ಗೆ ಮಾತನಾಡುವ ನಾವು………..,

ಸ್ಪರ್ಧೆ ಸೇಡು ಹಿಂಸೆ ಗೆಲುವು ಆಡಂಬರ ನಿರ್ವಹಣೆ ಯಶಸ್ಸುಗಳ ಬಗ್ಗೆಯೇ ಸದಾ ಯೋಚಿಸುವ ಅವರು……..

ರಕ್ತ ಸಂಬಂಧಿಗಳೊಂದಿಗೆ, ಸಂಸಾರದೊಂದಿಗೆ, ಗೆಳೆಯರೊಂದಿಗೆ, ಅಪರಿಚಿತರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದೆ ಸದಾ ಅಸಹನೆಯೊಂದಿಗೆ ಇರುವ ನಾವು………,

ಪ್ರಗತಿಪರರು ಸಂಪ್ರದಾಯವಾದಿಗಳು ಎಲ್ಲಾ ಪಕ್ಷದವರು ಭ್ರಷ್ಟರು ಸಜ್ಜನರು ಕೊಲೆಗಡುಕರು ವಂಚಕರು ಸ್ವಾಮಿಗಳು ಪತ್ರಕರ್ತರು ಎಲ್ಲರೊಂದಿಗೂ ಸಮಚಿತ್ತದಿಂದ ವ್ಯವಹಾರ ನಡೆಸುವ ಅವರು………

ಸಾವು ಸೋಲಿನ ಭಯದಲ್ಲಿ ಸದಾ ಬದುಕಿನ ನಿರರ್ಥಕತೆ ಬಗ್ಗೆ ಮಾತನಾಡುತ್ತಾ ಇರುವುದನ್ನು ಕಳೆದು ಕೊಳ್ಳುತ್ತಿರುವ ನಾವು……….

ಸಾಯುವುದೇ ಇಲ್ಲವೆಂಬಂತೆ ಎಲ್ಲವನ್ನೂ ಇನ್ನಷ್ಟು ಮತ್ತಷ್ಟು ಪಡೆಯುತ್ತಾ ಹಲವಾರು ಪೀಳಿಗೆಗೆ ಆಗುವಷ್ಟು ಸಂಪಾದಿಸುತ್ತಿರುವ ಅವರು……

ಹೊಸ ಕಾರು ಹೊಸ ಮನೆ ಹೊಸ ಸೂಟು ಹೊಸ ಹುದ್ದೆ ಹೊಸ ಪ್ರಶಸ್ತಿ ಹೊಸ ತೋಟ ಎಲ್ಲವನ್ನೂ ಖರೀದಿಸುತ್ತಾ ಸಮಾಜದಲ್ಲಿಯೂ ಕುಟುಂಬದಲ್ಲಿಯೂ ಗೆಳೆಯರಲ್ಲಿಯೂ ಗೌರವ ಪಡೆಯುತ್ತಾ ಮೇಲೆ ಮೇಲೆ ಏರುತ್ತಿರುವ ಅವರು…..

ಇರುವ ವಸ್ತುಗಳನ್ನು, ಸಂಬಂಧಗಳನ್ನು, ಮೌಲ್ಯಗಳನ್ನು, ಗೌರವವನ್ನು ಉಳಿಸಿಕೊಳ್ಳಲಾಗದೆ ಅಬ್ಬೇಪಾರಿಯಂತೆ ಅಪಮೌಲ್ಯಗೊಂಡು ಅಲೆಮಾರಿಯಾಗಿರುವ ನಾವು……

ಸಮಾಜವನ್ನು ಸ್ವೀಕರಿಸುತ್ತಾ, ಬುದ್ಧಿಯನ್ನು ಅಡವಿಡುತ್ತಾ, ಯೋಚನೆಯನ್ನು ಬದಲಿಸಿಕೊಳ್ಳುತ್ತಾ, ಜೀತವನ್ನು ಆಸ್ವಾದಿಸುತ್ತಾ,
ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತಾ,
ಜೀವನೋತ್ಸಾಹ ಹೆಚ್ಚಿಸಿಕೊಳ್ಳತ್ತಾ ಬದುಕುತ್ತಿರುವ ಅವರು…..

ಸಮಾಜದೊಂದಿಗೆ ಸದಾ ಸಂಘರ್ಷಿಸುತ್ತಾ, ಜನರೊಂದಿಗೆ ಅಸಹನೆ ವ್ಯಕ್ತಪಡಿಸುತ್ತಾ, ಅವಕಾಶಗಳನ್ನು ನಿರಾಕರಿಸುತ್ತಾ, ಸ್ವತಂತ್ರವಾಗಿ ಚಿಂತಿಸುತ್ರಾ, ಬದುಕನ್ನೇ ಪ್ರಯೋಗಶಾಲೆ ಮಾಡಿಕೊಂಡು ಜೀವನದ ಭಾರದಲ್ಲಿ ಕುಸಿಯುತ್ತಿರುವ ನಾವು……

ಒಳ್ಳೆಯದರ ಬಗ್ಗೆ ಯೋಚಿಸುತ್ತಾ ಕೆಟ್ಟವರಾಗುತ್ತಿರುವ ನಾವು…..

ಕೆಟ್ಟದಾಗಿ ನಡೆದುಕೊಳ್ಳುತ್ತಾ ಸುಖ ಅನುಭವಿಸುತ್ತಿರುವ ಅವರು…..

ಪ್ರಕೃತಿ ದತ್ತ ಸಹಜ ಜೀವನ ಶೈಲಿಯನ್ನು ಅನುಸರಿಸಿ ಇದನ್ನು ಉಳಿಸಲು ಶ್ರಮ ಪಡುತ್ತಿರುವ ನಾವು……….

ಕೃತಕ ಜೀವನ ಶೈಲಿಯಿಂದ ಎಲ್ಲವನ್ನೂ ರಾಸಾಯನಿಕ ಗೊಳಿಸಿ ಪ್ರಕೃತಿಯನ್ನೇ ನಾಶ ಮಾಡುತ್ತಾ ಅಭಿವೃದ್ಧಿ ಸಾಧಿಸುತ್ತಿದ್ದೇವೆ ಎಂದು ಭಾವಿಸುವ ಅವರು………….

ಯಾವುದು ಸರಿ ಯಾವುದು ತಪ್ಪು ಯಾವುದನ್ನು ಮಾಡಬಾರದು ಯಾವುದನ್ನು ಮಾಡಬೇಕು ಎಂಬ ಗೊಂದಲದಲ್ಲಿ ನಾವು…….

ನಾವು ಮಾಡುತ್ತಿರುವುದೆಲ್ಲಾ ಸರಿ ನಾವೇ ಸರಿ ಎಂಬ ಆತ್ಮವಿಶ್ವಾಸದಲ್ಲಿ ಅವರು………

ದೇವರು ಧರ್ಮದ ವಾಸ್ತವಿಕ ಅಸ್ತಿತ್ವ ಮತ್ತು ಪ್ರಯೋಜನಗಳ ಬಗ್ಗೆ ಸತ್ಯದ ಹುಡುಕಾಟ ಮಾಡುತ್ತಾ ತಲೆಕೆಡಿಸಿಕೊಳ್ಳುವ ನಾವು……

ಯಾವುದನ್ನೂ ಯೋಚಿಸದೆ ಹಿಂದಿನ ಸಂಪ್ರದಾಯಗಳನ್ನೇ ಮುಂದುವರಿಸಿ ಬದುಕಿನ ಸವಿಯನ್ನು ಉಣ್ಣುವ ಅವರು………..

ಆದರೂ ಗಾಳಿಯ ವಿರುದ್ಧ ದಿಕ್ಕಿನಲ್ಲಿ,
ನೀರಿನ ವಿರುದ್ಧ ದಿಕ್ಕಿನಲ್ಲಿ,
ಸಮಾಜ ವಿರುದ್ಧ ಚಿಂತನೆಗಳಲ್ಲಿ,
ನಮ್ಮ ಅರಿವಿನ ಒಳ್ಳೆಯದನ್ನೇ ಮಾಡುತ್ತಾ, ಹೊಸ ಹಾದಿಯಲ್ಲಿ ಹೆಜ್ಜೆಗಳನ್ನು ಇಡುತ್ತಾ ಮುನ್ನಡೆಯುವ ಸವಾಲು ಒಂದು ಒಂದು ರೀತಿಯ ಮಜಾ ಎಂದು ಭಾವಿಸಬಹುದೇ……

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *