ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಕೆಂಪೇಗೌಡರ ಜಯಂತೋತ್ಸವ, ತಾಲೂಕು ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮವನ್ನು ಜೂನ್ 27ರಂದು ನಗರದ ಒಕ್ಕಲಿಗರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಒಕ್ಕಲಿಗ ಸಮುದಾಯದ ಮುಖಂಡ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ ತಿಳಿಸಿದರು.
ಈ ಕುರಿತು ನಗರದ ಪಿಎಲ್ ಡಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜೂ.27ರ ಬೆಳಗ್ಗೆ 10ಗಂಟೆಗೆ ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದಿಂದ ಡೊಳ್ಳು ಕುಣಿತದೊಂದಿಗೆ ಕೆಂಪೇಗೌಡರ ಭಾವಚಿತ್ರ ಹಾಗೂ ಪುತ್ಥಳಿ ಹೊತ್ತ ಬೆಳ್ಳಿರಥ ಮೆರವಣಿಗೆ ಪ್ರಾರಂಭವಾಗಿ ತಾಲೂಕು ಕಚೇರಿ ಬಳಿ ಬಂದು ಸರ್ಕಾರಿ ಗೌರವಗಳೊಂದಿಗೆ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಅಲ್ಲಿಂದ ಮೆರವಣಿಗೆ ಸಾಗಿ ಮುಂದೆ ಜಿ.ರಾಮೇಗೌಡ ವೃತ್ತಕ್ಕೆ ಬಂದು ತದನಂತರ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಒಕ್ಕಲಿಗರ ಭವನದ ಬಳಿ ಮೆರವಣಿಗೆ ಅಂತ್ಯಗೊಳ್ಳಲಿದೆ.
ಒಕ್ಕಲಿಗರ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನ, ತಾಲೂಕಿನ ಪ್ರಗತಿ ಪರ ರೈತರಿಗೆ, ಖ್ಯಾತ ಕಲಾವಿದರಿಗೆ ಸನ್ಮಾನ ನಡೆಸಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ರಾಜಕೀಯ ಪ್ರತಿನಿಧಿಗಳು, ಅಧಿಕಾರಿಗಳು, ಒಕ್ಕಲಿಗ ಸಮಾಜದ ಪ್ರಮುಖ ಗಣ್ಯರು, ಮುಖಂಡರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು
ಈ ವೇಳೆ ಮುಖಂಡರಾದ ಬಿ.ಸಿ .ನಾರಾಯಣಸ್ವಾಮಿ, ಅಶ್ವಥ್ ನಾರಾಯಣ, ಅಂಬರೀಶ್, ಮುನಿರಾಜು ಸೇರಿದಂತೆ ಮತ್ತಿತರರು ಇದ್ದರು.