ಮದುವೆಯಾಗಿ ಕೈ ಕೊಟ್ಟ ಹೆಂಡತಿ ಹಾಗೂ ಆಕೆಯ ಪ್ರಿಯತಮನನ್ನು ಮಾಜಿ ಪತಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಯಾಸೀನ್ ಬಾಗೊಡೆ (21) ಮತ್ತು ಹೀನಾ (19) ಕೊಲೆಗೀಡಾದವರು. ತೌಫಿಕ್ ಕ್ಯಾಡಿ ಕೊಲೆ ಮಾಡಿದ ಆರೋಪಿ.
ಕೊಲೆ ಮಾಡುವ ವೇಳೆ ಅಡ್ಡಬಂದ ಅಮಿನಾಬಾಯಿ ಬಾಗೊಡೆ ಹಾಗೂ ಮುಸ್ತಫಾ ಮುಲ್ಲಾ ಮೇಲೂ ಆರೋಪಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ಪರಿಣಾಮ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದು, ಮಹಾರಾಷ್ಟ್ರದ ಮೀರಜ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಕೊಲೆಯಾದ ಹೀನಾಳನ್ನ ಆರೋಪಿ ತೌಫಿಕ್ ಜೊತೆ 4 ತಿಂಗಳ ಹಿಂದೆ ಮದುವೆ ಮಾಡಲಾಗಿತ್ತು. ಆದರೆ ಮದುವೆಯಾಗಿ ಕೆಲ ತಿಂಗಳಿಗೆ ತಾನು ಈ ಹಿಂದೆ ಪ್ರೀತಿ ಮಾಡುತ್ತಿದ್ದ ಯಾಸೀನ್ ಎಂಬಾತನ ಜೊತೆ ಹೀನಾ ಓಡಿ ಹೋಗಿದ್ದಳು.
ಒಂದೂವರೆ ತಿಂಗಳ ಬಳಿಕ ಕೆಲ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿದ್ದ ಗ್ರಾಮಸ್ಥರು, ಪತಿ ತೌಫಿಕ್ ಜೊತೆ ವಿವಾಹ ಮುರಿದು ಯಾಸೀನ್ ಜೊತೆ ಮದುವೆ ಮಾಡಿಸಿದ್ದರು.
ಇದರಿಂದ ತೌಫಿಕ್ ಕೋಪಿತಗೊಂಡು ಯಾಸೀನ್ ಮನೆಗೆ ತೆರಳಿ ಇಬ್ಬರನ್ನೂ ಕೊಚ್ಚಿ ಕೊಲೆ ಮಾಡಿ, ಪೊಲೀಸ್ ಠಾಣೆಗೆ ಹೋಗಿವುದಾಗಿ ಹೇಳಿ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿ ತೌಫಿಕಗಾಗಿ ಹುಡುಕಾಟಕ್ಕಾಗಿ ಎರಡೂ ತಂಡಗಳನ್ನು ರಚನೆ ಮಾಡಲಾಗಿದೆ.