“ಅಣ್ಣ–ತಂಗಿಯರ ಬಾಂಧವ್ಯ ಗಟ್ಟಿಗೊಳಿಸುವ ರಕ್ಷಾ ಬಂಧನ”

ಭಾರತ ರಾಷ್ಟ್ರವೊಂದು ಹೆಚ್ಚಾಗಿ ಸಂಸ್ಕೃತಿ, ಆಚಾರ-ವಿಚಾರ, ವಿಶಿಷ್ಟ ಆಚರಣೆ ಮೆರೆಯುವ ತವರು ನಾಡು. ಇಲ್ಲಿ ಪ್ರತಿಯೊಂದು ಆಚರಣೆಗೂ ಹಾಗೂ ಹಬ್ಬಕ್ಕೂ ಒಂದೊಂದು ತನ್ನದೇ ಆದ ವೈಶಿಷ್ಟತೆಯಿದೆ. ಪ್ರತಿಯೊಂದು ಹಬ್ಬವೂ ಒಂದಲ್ಲ, ಒಂದು ರೀತಿ ಒಳ್ಳೆಯ ಸಾರವನ್ನು ಹೇಳುತ್ತದೆ. ಎಲ್ಲಾ ಹಬ್ಬದಂತೆಯೇ ‘ರಕ್ಷಾಬಂಧನ’ ಹಬ್ಬವೂ ನೂಲ ಹುಣ್ಣಿಮೆಯಂದು ಆಚರಿಸುವ ಹಬ್ಬವಾಗಿದ್ದು, ಈ ಹಬ್ಬ ಸಂಬಂಧ-ಬಾಂಧವ್ಯಗಳನ್ನು ಗಟ್ಟಿಗೊಳಿಸುವ ಮಹತ್ವವನ್ನು ಹೊಂದಿದೆ. ರಕ್ಷಾಬಂಧನ ಸಹೋದರ-ಸಹೋದರಿಯರ ಪ್ರೀತಿ-ವಿಶ್ವಾಸ ಸಂಕೇತಿಸುವ ಅರ್ಥಪೂರ್ಣ ಹಬ್ಬವಾಗಿದೆ.

ಇಂದು ಆಗಸ್ಟ್ 09 ರಂದು ದೇಶಾದ್ಯಂತ ‘ರಕ್ಷಾ ಬಂಧನ’ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಬ್ಬ ಸಮೀಪಿಸುತ್ತಿದ್ದಂತೆ ಸಹೋದರಿಯರಿಗೆ ಎಲ್ಲಿಲ್ಲದ ಸಡಗರ ಸಂಭ್ರಮ ಅವರ ಮುಖದಲ್ಲಿ ಮನೆಮಾಡಿರುತ್ತದೆ ಎಂದರೆ ತಪ್ಪಾಗದು.

ರಕ್ಷಾ ಬಂಧನ ಹಬ್ಬದ ದಿನ ಸಹೋದರಿಯರು ತಮ್ಮ ಸಹೋದರನ ಹಣೆಗೆ ತಿಲಕ, ಬಲಗೈಗೆ ರಾಖಿಯನ್ನು ಕಟ್ಟಿ, ಆರತಿ ಬೆಳಗುವ ಮೂಲಕ ಸಹೋದರನ ಆಶಿರ್ವಾದವನ್ನು ಬೇಡುತ್ತಾರೆ. ಜತೆಗೆ ತನ್ನ ಅಣ್ಣ ಸದಾ ಖುಷಿಯಿಂದ ಇರಲೆಂದು ದೇವರಲ್ಲಿ ಮೊರೆ ಇಡುತ್ತಾಳೆ. ರಾಖಿ ಕಟ್ಟಿದ ಪ್ರತಿಯಾಗಿ ತಂಗಿಗೆ ಅಣ್ಣನು ಪ್ರೀತಿಯಿಂದ ಉಡುಗೊರೆ ನೀಡುವ ಸಂಪ್ರದಾಯ ನಡೆದು ಬಂದಿದೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಪರಿಶುದ್ಧ ಭಾವನೆ ಗಟ್ಟಿಗೊಳಿಸುವ ಹಬ್ಬ.

ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ ‘ರಕ್ಷಾಬಂಧನ’ ಅಥವಾ ‘ರಾಖಿ’ ಹಬ್ಬವನ್ನ ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಿದ್ದಾರೆ. ಪ್ರತಿಯೊಬ್ಬ ಅಣ್ಣ-ತಂಗಿಯರ ಬಾಂಧವ್ಯವನ್ನು ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಹತ್ತಾರು ಸಿಹಿ-ಕಹಿ ನೆನಪುಗಳನ್ನು ಮೆಲಕು ಹಾಕಿಸುತ್ತದೆ.

*ಬೆಲೆ ಕಟ್ಟಕ್ಕಾಗದ ಸಂಬಂಧದ ಹಬ್ಬ:*

ಭೂಮಿ ಮೇಲಿನ ಕೆಲವು ಸಂಬಂಧಗಳಿಗೆ ಎಂದಿಗೂ ಬೆಲೆ ಕಟ್ಟಲಾಗದು. ತಂದೆ-ತಾಯಿ ನೀಡುವ ಪ್ರೀತಿ-ಕಾಳಜಿಗೆ ಯಾವತ್ತು ಬೆಲೆ ಕಟ್ಟಲು ಸಾಧ್ಯವಿಲ್ಲ, ಇದೇ ಸಾಲಿನಲ್ಲಿ ಸಹೋದರ ಮತ್ತು ಸಹೋದರಿ ತೋರುವ ಅಕ್ಕರೆಯ ಸಂಬಂಧವು ನಿಲ್ಲುತ್ತದೆ. ಸಹೋದರನು ಯಾವುದೇ ಪರಿಸ್ಥಿತಿಯಲ್ಲೂ ತನ್ನ ಸಹೋದರಿ ರಕ್ಷಣೆಗೆ ನಿಂತು ಕಾಪಾಡುವನು. ಸಹೋದರ ಮತ್ತು ಸಹೋದರಿಯ ಸಂಬಂಧದ ಮಹತ್ವವನ್ನು ಸಾರುವಂತಹ ರಕ್ಷಾ ಬಂಧನವು ಪ್ರಮುಖವಾಗಿ ಭಾರತೀಯರು ಹೆಚ್ಚಾಗಿ ಆಚರಿಸಿಕೊಳ್ಳುವರು. ಇದು ಹಿಂದೂಗಳ ಹಬ್ಬವಾದರೂ ಹೆಚ್ಚಿನ ಧರ್ಮಗಳಲ್ಲಿ ಇದನ್ನು ಆಚರಿಸಲಾಗುತ್ತದೆ.

*ಪೌರಾಣಿಕವಾಗಿ ರಕ್ಷಾ ಬಂಧನ:*

ವ್ರತ್ರ ಅಸುರನಿಂದ ಸೋಲನ್ನು ಎದುರಿಸುತ್ತಿದ್ದಾಗ ಇಂದ್ರನಿಗೆ ತನ್ನ ಶತ್ರುಗಳಿಂದ ರಕ್ಷಣೆ ಪಡೆಯಬೇಕಾದರೆ ಕೈಗೆ ರಾಖಿ ಕಟ್ಟಿಕೊಳ್ಳಬೇಕು ಎಂದು ಗುರು ಬ್ರಹಸ್ಪತಿ ಅವರು ಹೇಳಿದರು. ಬ್ರಹಸ್ಪತಿ ಅವರ ಮಾತಿನಂತೆ ಇಂದ್ರನ ಧರ್ಮಪತ್ನಿಯಾದ ಸಚಿ ದೇವಿಯು ಇಂದ್ರನಿಗೆ ರಾಖಿ ಕಟ್ಟಿದಳು ಎಂದು ಭವಿಷ್ಯ ಪುರಾಣದಲ್ಲಿದೆ.

*ವರದಿ: ರೇವಣಸಿದ್ಧ ಬಗಲಿ*
(ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ)

Leave a Reply

Your email address will not be published. Required fields are marked *

error: Content is protected !!